ADVERTISEMENT

‘ಭಾರತ ಯಾತ್ರೆ’ಗೆ ಜಿಲ್ಲೆಯಲ್ಲಿ ಭವ್ಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2017, 8:48 IST
Last Updated 16 ಸೆಪ್ಟೆಂಬರ್ 2017, 8:48 IST

ಕೋಲಾರ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಮಾನವ ಕಳ್ಳಸಾಗಾಣಿಕೆ ತಡೆಯುವ ಉದ್ದೇಶದಿಂದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಹಮ್ಮಿಕೊಂಡಿರುವ ‘ಭಾರತ ಯಾತ್ರೆ’ಯು ಗಡಿ ಭಾಗದ ನಂಗಲಿ ಮೂಲಕ ಶುಕ್ರವಾರ ಜಿಲ್ಲೆಯನ್ನು ಪ್ರವೇಶಿಸಿತು.

ಕೈಲಾಶ್‌ ಅವರು ರಾಷ್ಟ್ರೀಯ ಹೆದ್ದಾರಿ 75ರ ಬಳಿಯ ಕೆಂಬೋಡಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ನಗರದ ಹೊರವಲಯದ ಬೈಪಾಸ್ ರಸ್ತೆಯಲ್ಲಿ ಬಿಜಿಎಸ್ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಹಾಗೂ ಜಾಗೃತಿ ಸೇವಾ ಸಂಸ್ಥೆ ಸದಸ್ಯರು ಕೈಲಾಶ್‌ ಅವರಿಗೆ ಸ್ವಾಗತ ಕೋರಿದರು.

ನಂತರ ಕೈಲಾಶ್‌ ಅವರು ಪ್ರವಾಸಿ ಮಂದಿರದ ಬಳಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಒಕ್ಕೂರಲಿನಿಂದ ಅವರಿಗೆ ಜೈಕಾರ ಕೂಗಿದರು. ಗಣ್ಯರು ಸೇರಿದಂತೆ ಎಲ್ಲಾ ಮಕ್ಕಳು ‘ಸುರಕ್ಷಿತ ಬಾಲ್ಯ- ಸುರಕ್ಷಿತ ಭಾರತ’ ಘೋಷಣೆ ಮೊಳಗಿಸಿದರು. ‘ಮಕ್ಕಳ ಮೇಲಿನ ದೌರ್ಜನ್ಯ ಮುಕ್ತ ಭಾರತ’ ನಿರ್ಮಾಣ ಮಾಡುವ ಬಗ್ಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ADVERTISEMENT

ಸಶಕ್ತರಾಗಿದ್ದಾರೆ: ‘ಮಕ್ಕಳ ಮೇಲಿನ ದೌರ್ಜನ್ಯ ಸಹಿಸಲು ಸಾಧ್ಯವಿಲ್ಲ. ಇಂದು ಮಕ್ಕಳು ಹೆಚ್ಚು ಸಶಕ್ತರಾಗಿದ್ದಾರೆ. ಭಾರತದ ಭವಿಷ್ಯ ಮಕ್ಕಳ ಕೈಯಲ್ಲಿದೆ. ಮಕ್ಕಳಿಗಿಂತ ಬಲಶಾಲಿ ವ್ಯಕ್ತಿಗಳು ಯಾರೂ ಇಲ್ಲ. ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯವನ್ನು ಸಂಪೂರ್ಣ ವಿರೋಧಿಸಬೇಕು. ಆ ಮೂಲಕ ಮಕ್ಕಳಿಗೆ ಭಾರತ ದೇಶವನ್ನು ಸುರಕ್ಷಿತಗೊಳಿಸಬೇಕು’ ಎಂದು ಕೈಲಾಶ್‌ ಕರೆ ನೀಡಿದರು.

‘ಮನೆಗಳನ್ನು ಮೊದಲು ಮಕ್ಕಳಿಗೆ ಸುರಕ್ಷಿತ ತಾಣಗಳಾಗಿ ಪರಿವರ್ತಿಸಬೇಕು. ಪರಿಚಯಸ್ಥರು, ಸಂಬಂಧಿಕರು, ಸ್ನೇಹಿತರು ಅಥವಾ ಹಿತೈಷಿಗಳು ಮಕ್ಕಳನ್ನು ಕೆಟ್ಟ ಭಾವನೆಯಲ್ಲಿ ಮುಟ್ಟದರೆ ಆ ವಿಷಯವನ್ನು ಪೋಷಕರಿಗೆ ತಿಳಿಸಬೇಕು. ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಶೋಷಣೆ ನಡೆಯುತ್ತಿದೆ. ಇದು ಇಂದಿಗೆ ಕೊನೆಗೊಳ್ಳಬೇಕು. ಈ ಬಗ್ಗೆ ಮೌನ ವಹಿಸಿದರೆ ಇದು ಮುಂದೆ ಮಕ್ಕಳನ್ನು ಬಲಿ ತೆಗೆದುಕೊಳ್ಳಲಿದೆ’ ಎಂದರು.

‘ದೇಶದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಂದು ಸತ್ಯ ತಿಳಿಯಬೇಕು. ಮಕ್ಕಳು ಜನಪ್ರತಿನಿಧಿಗಳಿಗೆ ಮತ ಹಾಕದೇ ಇರಬಹುದು. ಆದರೆ, ಮಕ್ಕಳನ್ನು ರಕ್ಷಿಸಿದರೆ ಅವರು ಭವಿಷ್ಯದ ಮತದಾರರಾಗುತ್ತಾರೆ. ಮಕ್ಕಳು ಹಾಗೂ ಪೋಷಕರಿಗೆ ಶಾಲೆಗಳು ಸುರಕ್ಷಿತವಲ್ಲ ಎಂಬ ಭಾವನೆ ಮೂಡಿದೆ ಎಂದರು.

ಆದ್ದರಿಂದ ಜನಪ್ರತಿನಿಧಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಾಲೆಗಳು ಸುರಕ್ಷಿತ ಎಂಬುದನ್ನು ಖಾತ್ರಿಪಡಿಸಬೇಕು’ ಎಂದು ಮನವಿ ಮಾಡಿದರು. ಕೆಇಬಿ ಜೋಡಿ ರಸ್ತೆ, ಗಾಂಧಿವನ, ಎಂ.ಜಿ.ರಸ್ತೆ, ಸರ್ವಜ್ಞ ಉದ್ಯಾನದ ಮಾರ್ಗವಾಗಿ ಸಾಗಿದ ಜಾಥಾ ಟಿ.ಚನ್ನಯ್ಯ ರಂಗಮಂದಿರದ ಬಳಿ ಅಂತ್ಯಗೊಂಡಿತು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ, ಜಿಲ್ಲಾ ಸತ್ರ ನ್ಯಾಯಾಧೀಶ ಗುರುರಾಜ್‌ ಜಿ.ಶಿರೋಳ್, ಕೆಪಿಸಿಸಿ ಕಾರ್ಯದರ್ಶಿ ವಿ.ಆರ್‌.ಸುದರ್ಶನ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.