ADVERTISEMENT

ಭ್ರಷ್ಟರ ಬಹಿಷ್ಕರಿಸುವ ಸಮಾಜ ನಿರ್ಮಾಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 9:23 IST
Last Updated 23 ಆಗಸ್ಟ್ 2017, 9:23 IST

ಕೋಲಾರ: ‘ಭ್ರಷ್ಟರನ್ನು ಬಹಿಷ್ಕರಿಸುವ ಸಮಾಜ ನಿರ್ಮಾಣ ಮಾಡಬೇಕು. ದುರಾಸೆಯಿಂದ ತಪ್ಪು ಹಾದಿಯತ್ತ ಸಾಗಿರುವ ಸಮಾಜವನ್ನು ಬದಲಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಕಿವಿಮಾತು ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಸರ್ಕಾರಿ ಮಹಿಳಾ ಕಾಲೇಜಿನ ಪರಂಪರೆ ಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಆಗುಹೋಗುಗಳಲ್ಲಿ ಅನ್ಯಾಯ ಕಂಡರೂ ನ್ಯಾಯಾಧೀಶನಾಗಿ ಅಸಹಾಯಕ ಸ್ಥಿತಿಯಲ್ಲಿದ್ದೆ. ಸರ್ಕಾರದಿಂದ ಬಹಳಷ್ಟು ಅನ್ಯಾಯವಾಗುತ್ತಿತ್ತು. ಆದರೆ, ಇದು ಸರ್ಕಾರದ ತಪ್ಪಲ್ಲ ಎಂದರು.

ಈ ಹಿಂದೆ 1952ರಲ್ಲಿ ಜೀಪು ಹಗರಣದಲ್ಲಿ ₹ 52 ಲಕ್ಷ ಅಕ್ರಮ ಬೆಳಕಿಗೆ ಬಂದಿತ್ತು. ಆ ನಂತರ ನಡೆದ ಹಗರಣಗಳಿಂದ ನಷ್ಟದ ಮೊತ್ತ ಹೆಚ್ಚುತ್ತಾ ಹೋಯಿತು. ಬೋಫೋರ್ಸ್‌ ಪಿರಂಗಿ ಅಕ್ರಮದಲ್ಲಿ₹ 62 ಸಾವಿರ ಕೋಟಿ, ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ₹ 72 ಸಾವಿರ ಕೋಟಿ, 2ಜಿ ತರಂಗಾಂತರ ಹಂಚಿಕೆ ಹಗರಣದಲ್ಲಿ ₹ 1.76 ಲಕ್ಷ ಕೋಟಿ, ಕಲ್ಲಿದ್ದಲು ಹಗರಣದಲ್ಲಿ ಇದನ್ನು ಮೀರಿ ₹ 1.86 ಲಕ್ಷ ಕೋಟಿ ನಷ್ಟವಾಗಿದೆ ಎಂದು ವಿವರಿಸಿದರು.

ADVERTISEMENT

ಸಮಾಜದ ಜವಾಬ್ದಾರಿ: ಭ್ರಷ್ಟರನ್ನು ದೂರ ಮಾಡುವುದು ಸಮಾಜದ ಜವಾಬ್ದಾರಿ. ದುರಾಸೆ ತೊರೆದು ಮಾನವೀಯತೆ ಬೆಳೆಸಿಕೊಳ್ಳಬೇಕು. ಕಮ್ಯೂನಿಸಮ್‌, ಸೋಷಿಯಲಿಸಮ್‌, ಕ್ಯಾಪಿಟಲಿಸಮ್‌ ದೇಶದಲ್ಲಿದ್ದು, ಈ ಮಧ್ಯೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ನಂತರ ಜನರಿಂದ, ಜನರಿಗಾಗಿ, ಜನರಿಗೋಸ್ಕರ ಎಂಬ ತತ್ವದಡಿ ರಾಜನೀತಿ ಬಂದಿತು. ಅನಕ್ಷರಸ್ಥರು ಸಹ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕಲ್ಪಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯು ಯಾವುದೇ ಗುಂಪಿಗೆ ಸೇರಿದ್ದಲ್ಲ ಎಂದು ಹೇಳಿದರು.

ಸಂಸತ್‌ ಹಾಗೂ ವಿಧಾನಮಂಡಲ ಅಧಿವೇಶನಕ್ಕೆ ಒಂದು ದಿನಕ್ಕೆ ಸುಮಾರು ₹ 10 ಕೋಟಿ ವೆಚ್ಚವಾಗುತ್ತಿದೆ. ಹಲವಾರು ದಿನ ಅಧಿವೇಶನ ನಡೆಸಿದರೂ ಜನರ ಜೀವನ ಮಟ್ಟ ಸುಧಾರಣೆಯಾಗಿಲ್ಲ. ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದ ಸಭಾತ್ಯಾಗ ಅಥವಾ ಪ್ರತಿಭಟನೆಯೇ ಜೋರಾಗಿದ್ದು, ಕಲಾಪ ವ್ಯರ್ಥವಾಗುತ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷದವರಿಗೆ ತಮ್ಮ ಜವಬ್ದಾರಿಯ ಅರಿವಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾರಂಗ ಸೇರಿದಂತೆ ಎಲ್ಲವೂ ತಮ್ಮ ಜವಾಬ್ದಾರಿ ಪಾಲನೆಯಲ್ಲಿ ವಿಫಲವಾಗಿವೆ. ದುರಾಸೆಯು ಸಮಾಜವನ್ನು ಕೆಡಿಸುತ್ತಿದೆ. ಉನ್ನತ ಶಿಕ್ಷಣ ಪಡೆದು ಕಾನೂನಾತ್ಮಕವಾಗಿ ಎಷ್ಟೇ ಶ್ರೀಮಂತರಾದರೂ ಅಭ್ಯಂತರವಿಲ್ಲ. ಆದರೆ, ಅಡ್ಡದಾರಿ ಮೂಲಕ ಸಂಪತ್ತಿನ ಗಳಿಕೆ ಸರಿಯಲ್ಲ. ಜೀವನದಲ್ಲಿ ಪ್ರಾಮಾಣಿಕತೆ ಮತ್ತು ಮಾನವೀಯತೆ ಅಳವಡಿಸಿಕೊಂಡಾಗ ಮಾತ್ರ ಮನುಷ್ಯರಾಗಲು ಸಾಧ್ಯ ಎಂದು ತಿಳಿಸಿದರು.

ಪ್ರತಿಕೂಲ ಪರಿಣಾಮ: ‘ವಿದ್ಯಾರ್ಥಿಗಳು ಜೀವನದ ಸರಿ ದಾರಿಗೆ ಬರಲು ಗಣ್ಯರ ಪ್ರೇರಣೆ ಅಗತ್ಯ. ವಿದ್ಯಾರ್ಥಿಗಳು ಅತಿಯಾಗಿ ಮೊಬೈಲ್ ಮತ್ತು ಇಂಟರ್‌ನೆಟ್‌ ಬಳಸುತ್ತಿರುವುದರಿಂದ ಶೈಕ್ಷಣಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಮೊಬೈಲ್‌ ಹಾಗೂ ಇಂಟರ್‌ನೆಟ್‌ ದುರುದ್ದೇಶಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಸಾಕಷ್ಟು ಮಂದಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಅನನ್ಯ ಸಾಧನೆ ಮಾಡಿದ್ದಾರೆ. ಆ ಸಾಧಕರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿ ದಿಸೆಯಲ್ಲೇ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು. ಸಂತೋಷ್‌ ಹೆಗ್ಡೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿನಿಯರು ಭರತ ನಾಟ್ಯ ಪ್ರದರ್ಶಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಜಯರಾಮರೆಡ್ಡಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.