ADVERTISEMENT

‘ಮಂಗಳೂರು ಚಲೋ’ ಬೈಕ್‌ ರ‍್ಯಾಲಿಗೆ ಪೊಲೀಸರ ತಡೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 7:00 IST
Last Updated 6 ಸೆಪ್ಟೆಂಬರ್ 2017, 7:00 IST
ಸಂಘ ಪರಿವಾರದ ಮುಖಂಡರ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ‘ಮಂಗಳೂರು ಚಲೋ’ ಹೋರಾಟದಲ್ಲಿ ಭಾಗಿಯಾಗಲು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಮಂಗಳವಾರ ಬೈಕ್‌ ರ್‌್ಯಾಲಿ ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಸಂಘ ಪರಿವಾರದ ಮುಖಂಡರ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ‘ಮಂಗಳೂರು ಚಲೋ’ ಹೋರಾಟದಲ್ಲಿ ಭಾಗಿಯಾಗಲು ಕೋಲಾರ ಜಿಲ್ಲೆಯ ಮುಳಬಾಗಿಲಿನಿಂದ ಮಂಗಳವಾರ ಬೈಕ್‌ ರ್‌್ಯಾಲಿ ಹೊರಟಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.   

‌ಕೋಲಾರ: ಸಂಘ ಪರಿವಾರದ ಮುಖಂಡರ ಹತ್ಯೆ ಖಂಡಿಸಿ ರಾಜ್ಯ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ‘ಮಂಗಳೂರು ಚಲೋ’ ಹೋರಾಟದಲ್ಲಿ ಭಾಗಿಯಾಗಲು ಜಿಲ್ಲೆಯ ವಿವಿಧೆಡೆಯಿಂದ ಮಂಗಳವಾರ ಬೈಕ್‌ ರ‍್ಯಾಲಿ ಹೊರಟಿದ್ದ ಬಿಜೆಪಿಯ 200ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪೊಲೀಸರು ಜಿಲ್ಲಾ ಕೇಂದ್ರದ ಟೇಕಲ್‌ ವೃತ್ತ ಹಾಗೂ ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲದಲ್ಲಿ ರ‍್ಯಾಲಿಗೆ ತಡೆಯೊಡ್ಡಿದ್ದರಿಂದ ಆಕ್ರೋಶಗೊಂಡ ಕಾರ್ಯಕರ್ತರು ರಸ್ತೆಯಲ್ಲಿ ಮಲಗಿ ಧರಣಿ ನಡೆಸಲು ಯತ್ನಿಸಿದರು. ಪೊಲೀಸರು ಕಾರ್ಯಕರ್ತರನ್ನು ಎಳೆದೊಯ್ಯಲು ಮುಂದಾದಾಗ ಪರಸ್ಪರ ವಾಗ್ವಾದ ನಡೆದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು.

ಮಾಜಿ ಶಾಸಕ ವೈ.ಸಂಪಂಗಿ, ‘ಜಿಲ್ಲಾ ಕೇಂದ್ರ, ಬೆಂಗಳೂರು ಅಥವಾ ಮಾರುಕಟ್ಟೆಗೆ ಹೋಗಿ ಬರುವಂತೆ ಶಾಂತಿಯುತವಾಗಿ ಬೈಕ್‌ ರ‍್ಯಾಲಿ ಮಾಡಿ ಬರುತ್ತೇವೆ, ಸಹಕರಿಸಿ’ ಎಂದು ಪೊಲೀಸರಿಗೆ ಮನವಿ ಮಾಡಿದರು. ಇದಕ್ಕೆ ಒಪ್ಪದ ಪೊಲೀಸರು ಜಿಲ್ಲಾಧಿಕಾರಿಯು ಯಾವುದೇ ರ‍್ಯಾಲಿ ಅಥವಾ ಧರಣಿ ನಡೆಸದಂತೆ ಹೊರಡಿಸಿದ್ದಾರೆ ಎಂದು ಹೇಳಿ ಅನುಮತಿ ನಿರಾಕರಿಸಿದರು. ಇದರಿಂದ ಕೋಪಗೊಂಡ ಕಾರ್ಯಕರ್ತರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.

ADVERTISEMENT

ಗೂಂಡಾ ರಾಜ್ಯ: ಜಿಲ್ಲಾ ಕೇಂದ್ರದಲ್ಲಿ ಬೆಳಿಗ್ಗೆ ರೈಲು ನಿಲ್ದಾಣದ ಬಳಿಯಿಂದ ಬೈಕ್‌ಗಳಲ್ಲಿ ರ‍್ಯಾಲಿ ಹೊರಟಿದ್ದ ಕಾರ್ಯಕರ್ತರನ್ನು ಪೊಲೀಸರು ಟೇಕಲ್‌ ವೃತ್ತದಲ್ಲಿ ತಡೆದರು. ಈ ವೇಳೆ ತಳ್ಳಾಟ ಉಂಟಾಗಿ ಹಲವು ಕಾರ್ಯಕರ್ತರು ಹಾಗೂ ಪೊಲೀಸ್‌ ಸಿಬ್ಬಂದಿ ಗಾಯಗೊಂಡರು.

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ‘ಸರ್ಕಾರ ಪೊಲೀಸ್‌ ಬಲ ಬಳಸಿಕೊಂಡು ಹೋರಾಟ ಹತ್ತಿಕ್ಕುತ್ತಿದೆ. ಕರ್ನಾಟಕ ಗೂಂಡಾ ರಾಜ್ಯವಾಗಿದೆ. ಸರ್ಕಾರದ ಕೈಗೊಂಬೆಯಾಗಿರುವ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪದೇ ಪದೇ ಆರ್‌ಎಸ್‌ಎಸ್‌ ಹಾಗೂ ಸಂಘ ಪರಿವಾರದ ಮುಖಂಡರ ಹತ್ಯೆ ನಡೆಯುತ್ತಿದೆ. ಇದರ ಹಿಂದೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‌ಡಿ) ಸಂಘಟನೆ ಸದಸ್ಯರ ಕೈವಾಡವಿದೆ ಎಂದು ಆರೋಪಿಸಿದರು.

ಸರ್ಕಾರ ಸಮಾಜಘಾತುಕ ಸಂಘಟನೆಗಳಾದ ಪಿಎಫ್‍ಐ ಮತ್ತು ಕೆಎಫ್‌ಡಿ ಬೆಂಬಲಕ್ಕೆ ನಿಂತಿದೆ. ಈ ಸಂಘಟನೆಗಳ ಸದಸ್ಯರನ್ನು ಬಳಸಿಕೊಂಡು ಸಂಘ ಪರಿವಾರದ ಮುಖಂಡರನ್ನು ಕೊಲೆ ಮಾಡಿಸುತ್ತಿದೆ. ಅಲ್ಲದೇ, ಕರಾವಳಿ ಭಾಗದಲ್ಲಿ ಅಶಾಂತಿ ಸೃಷ್ಟಿಸುತ್ತಿದೆ. ಸರ್ಕಾರದ ಧೋರಣೆ ಖಂಡಿಸಿ ಶಾಂತಿಯುತವಾಗಿ ಬೈಕ್‌ ರ‍್ಯಾಲಿ ನಡೆಸುವುದಕ್ಕೂ ಅವಕಾಶ ಕೊಡುತ್ತಿಲ್ಲ ಎಂದು ದೂರಿದರು.

ಸರ್ಕಾರ ಮೌನವಾಗಿದೆ: ಮಾಲೂರು ತಾಲ್ಲೂಕಿನಲ್ಲಿ ಪೊಲೀಸರು ರ‍್ಯಾಲಿಗೆ ಅನುಮತಿ ನೀಡದಿದ್ದರಿಂದ ಕಾರ್ಯಕರ್ತರು ಮಾಸ್ತಿ ಠಾಣೆ ಎದುರು ಧರಣಿ ಮಾಡಿದರು. ಮುಳಬಾಗಿಲಿನಲ್ಲಿ ಧರಣಿ ಮಾಡಿದ ಕಾರ್ಯಕರ್ತರು, ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಸಿದ್ದರಾಮಯ್ಯ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.  ಹಿಂದೂಪರ ಸಂಘಟನೆಗಳ ಮುಖಂಡರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಮುಸ್ಲಿಮರ ಓಲೈಕೆಗಾಗಿ ಸರ್ಕಾರ ಮೌನವಾಗಿದೆ ಎಂದು ಆರೋಪಿಸಿದರು.

ಸರ್ಕಾರದ ವಿರುದ್ಧ ಘೋಷಣೆ
ಬಂಗಾರಪೇಟೆ: ಹಿಂದೂ ಸಂಘಟನೆಗಳ ಕಾರ್ಯಕರ್ತರ ಕೊಲೆ ಖಂಡಿಸಿ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಹೋರಾಟದಲ್ಲಿ ಭಾಗವಹಿಸಲು ಪಟ್ಟಣದಿಂದ ಬೈಕ್ ರ‍್ಯಾಲಿಯಲ್ಲಿ ತೆರಳುತ್ತಿದ್ ಬಿಜೆಪಿ ಕಾರ್ಯಕರ್ತರನ್ನು ಪೋಲೀಸರು ವಶಕ್ಕೆ ಪಡೆದರು. ಪಟ್ಟಣದ ಎಪಿಎಂಸಿ ಆವರಣದಿಂದ ಆರಂಭಗೊಂಡ ರ‍್ಯಾಲಿ ಕೋಲಾರ ಮುಖ್ಯರಸ್ತೆಯ ಚೆಕ್‌ಪೋಸ್ಟ್ ಬಳಿ ತಡೆದ ಕೈಬಿಡುವಂತೆ ಮನವಿ ಮಾಡಿದರು.ಇದಕ್ಕೆ ಒಪ್ಪದ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಮುಖಂಡ ಎಂ.ನಾರಾಯಣಸ್ವಾಮಿ, ತಾಲ್ಲೂಕು ಘಟಕ ಅಧ್ಯಕ್ಷ ಹನುಮಪ್ಪ, ಮುಖಂಡರಾದ ಮಾರ್ಕಂಡೇಗೌಡ, ಡಿಂಪು ನಾರಾಯಣಸ್ವಾಮಿ ಸೇರಿ 40ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಕಾಮಸಮುದ್ರ ಠಾಣೆಗೆ ಕರೆದೊಯ್ದುರು.

ಇದರಿಂದ ಆಕ್ರೋಶಗೊಂಡ ಕಾರ್ಯಕರ್ತರು ರಾಜ್ಯ ಸರ್ಕಾರ ಹಾಗೂ ಪೊಲೀಸರ ವಿರುದ್ಧ ದಿಕ್ಕಾರ ಕೂಗಿದರು. ರಾಜ್ಯ ಸರ್ಕಾರ ರ‍್ಯಾಲಿ ಹತ್ತಿಕ್ಕುವ ಸಂಚು ನಡೆಸಿದೆ ಎಂದು ಪ್ರತಿಭಟನಾಕಾರರು ದೂರಿದರು. ಬಂಧಿತರನ್ನು ಮಧ್ಯಾಹ್ನದ ನಂತರ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.