ADVERTISEMENT

ಮಳೆಯಾಶ್ರಿತ ಗೋಡಂಬಿ ಸೂಕ್ತ

ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ನಿರ್ದೇಶಕ ಕೋಟಿಕಲ್ ಸಲಹೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 8:20 IST
Last Updated 28 ಮಾರ್ಚ್ 2017, 8:20 IST
ಕೋಲಾರ: ‘ಕೃಷಿ ಚಟುವಟಿಕೆಗಳಿಗೆ ಮಳೆಯನ್ನೇ ಆಶ್ರಯಿಸಿರುವ ಕೋಲಾರ ಜಿಲ್ಲೆಯಲ್ಲಿ ರೈತರು ಪರಿಸರಸ್ನೇಹಿ ಗೇರು (ಗೋಡಂಬಿ) ಬೆಳೆಯನ್ನು ಬೆಳೆಯಬಹುದು. ಗೇರು ಬೆಳೆ ಇಲ್ಲಿನ ವಾತಾವರಣಕ್ಕೆ ಸೂಕ್ತ’ ಎಂದು ಬಾಗಲಕೋಟೆ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ನಿರ್ದೇಶಕ ವೈ.ಕೆ.ಕೋಟಿಕಲ್ ಸಲಹೆ ನೀಡಿದರು.
 
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕಾ ಮಹಾವಿದ್ಯಾಲಯ, ಗೇರು ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯದ ಸಹಯೋಗದಲ್ಲಿ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಗೇರು ಬೆಳೆ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
 
ಕಡಿಮೆ ನೀರು ಹಾಗೂ ಬೇಸಿಗೆಯ ಬೇಗೆ ತಾಳಿಕೊಂಡು ಬದುಕುವ ಸಾಮರ್ಥ್ಯ ಗೇರು ಮರಗಳಿಗೆ ಇದೆ. ಕೋಲಾರ ಜಿಲ್ಲೆಯಂತಹ ಬಯಲುಸೀಮೆ ಪ್ರದೇಶದಲ್ಲಿ ನೀಲಗಿರಿ ಮರಗಳಿಗಿಂತ ಗೇರು ಬೆಳೆದು ಹೆಚ್ಚು ಇಳುವರಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.
 
ಪ್ರಾದೇಶಿಕ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ವಿಷ್ಣುವರ್ಧನ್ ಮಾತನಾಡಿ, ‘ಜಿಲ್ಲೆಯಲ್ಲಿ ನೀರಿಗೆ ಅಭಾವವಿದೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ರೈತರು ತೊಂದರೆಗೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜಿಲ್ಲೆಗೆ ಗೇರು ಪರ್ಯಾಯ ಬೆಳೆ. ಹೀಗಾಗಿ ರೈತರು ಹೆಚ್ಚು ಹೆಚ್ಚು ಗೇರು ಬೆಳೆಯಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.
 
‘ಮಳೆ ಆಶ್ರಯದಲ್ಲಿ ಯಾವುದೇ ನಿರ್ವಹಣೆ ಇಲ್ಲದೆ 6 ವರ್ಷದ ನಂತರ ಪ್ರತಿ ಗಿಡಕ್ಕೆ ಸುಮಾರು 10 ಕೆ.ಜಿ ಗೇರು ಬೀಜ ಪಡೆಯಬಹುದು. ನೀರಾವರಿ ಸೌಲಭ್ಯವಿದ್ದರೆ ಗಿಡಕ್ಕೆ 15ರಿಂದ 18 ಕೆ.ಜಿ ಇಳುವರಿ ಪಡೆಯಬಹುದು. ಗಿಡಗಳಿಗೆ ಸಕಾಲದಲ್ಲಿ ಕೀಟನಾಶಕ ಸಿಂಪಡಿಸಿದರೆ ಮತ್ತೆ ಯಾವುದೇ ನಿರ್ವಹಣೆಯ ಅಗತ್ಯವಿಲ್ಲ’ ಎಂದರು.
 
ವಿಸ್ತರಣೆ ಗುರಿ: ‘ಜಿಲ್ಲೆಯ ಸರ್ಕಾರಿ ಜಾಗದಲ್ಲಿ ನೀಲಗಿರಿ ಮರಗಳನ್ನು ತೆಗೆಯುವುದರ ಜತೆಗೆ ಪರ್ಯಾಯವಾಗಿ ಸೀಬೆ, ನೇರಳೆ, ಮಾವು, ಗೇರು ಬೆಳೆಸಲು ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳು ಜವಾಬ್ದಾರಿ ತೆಗೆದುಕೊಂಡಿವೆ.

ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ (ನರೇಗಾ) ಗೇರು ಬೆಳೆಯಲು ಅವಕಾಶವಿದ್ದು, ಮೊದಲ ವರ್ಷ ₹ 32 ಸಾವಿರ, ಎರಡನೇ ವರ್ಷಕ್ಕೆ ₹ 16 ಸಾವಿರ ಮತ್ತು ಮೂರನೇ ವರ್ಷಕ್ಕೆ ₹ 8 ಸಾವಿರ ಸಹಾಯಧನ ನೀಡಲಾಗುತ್ತಿದೆ. ಈ ವರ್ಷ ಪ್ರತಿ ತಾಲ್ಲೂಕಿನಲ್ಲಿ 200 ಹೆಕ್ಟೇರ್‌ನಂತೆ 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆ ವಿಸ್ತರಣೆ ಗುರಿ ಹೊಂದಲಾಗಿದೆ’ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ಎಸ್. ರಾಜು ವಿವರಿಸಿದರು.
 
ಕೈಪಿಡಿ ಬಿಡುಗಡೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗೇರು ಬೆಳೆಗಾರ ನಾಗರಾಜ್, ಶ್ರೀನಿವಾಸಪುರ ತಾಲ್ಲೂಕಿನ ರೈತ ಭಾಸ್ಕರ್‌ರೆಡ್ಡಿ ಗೇರು ಬೆಳೆ ಕುರಿತು ಅನುಭವ ಹಂಚಿಕೊಂಡರು. ಗೋಡಂಬಿ ಬೆಳೆ ಆಧುನಿಕ ಬೇಸಾಯ ಪದ್ಧತಿ ಕುರಿತ ಕೈಪಿಡಿ ಬಿಡುಗಡೆ ಮಾಡಲಾಯಿತು. 
 
ತೋಟಗಾರಿಕೆ ಕಾಲೇಜಿನ ಡೀನ್ ಕೆ.ಎನ್.ಶ್ರೀನಿವಾಸ್, ಹೊಗಳ ಗೆರೆ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥ ಎನ್.ಅಶ್ವತ್ಥನಾರಾಯಣರೆಡ್ಡಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಕೆ.ತುಳಸಿರಾಮ್, ರೇಷ್ಮೆ ಕೃಷಿ ವಿಜ್ಞಾನಿ ಕೆ.ಆರ್.ಶಶಿಧರ್, ಪ್ರಾದೇಶಿಕ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿವೃತ್ತ ವಿಸ್ತರಣಾ ನಿರ್ದೇಶಕ ಟಿ.ಆರ್.ಗುರುಪ್ರಸಾದ್ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.