ADVERTISEMENT

ಮಳೆ; ವಾಹನ ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 9:02 IST
Last Updated 18 ಸೆಪ್ಟೆಂಬರ್ 2017, 9:02 IST

ನಂಗಲಿ: ಕಳೆದ ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಸ್ತೆಗಳು ಕೆಸರು ಗದ್ದೆಗಳಾಗಿ ನಿರ್ಮಾಣವಾಗಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಹಳೆಕುಪ್ಪ ಗೇಟ್‌ನಿಂದ ತೊಂಡಹಳ್ಳಿ ಗ್ರಾಮಕ್ಕೆ ಹಾದು ಹೋಗುವ ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ತುಂಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಮಳೆ ಬಂದರೆ ಇಲ್ಲಿನ ಮಣ್ಣಿನ ರಸ್ತೆ ಕೆಸರು ಗದ್ದೆಯಾಗದ್ದೆಯಾಗುತ್ತದೆ.

ಹೆದ್ದಾರಿಯಿಂದ ಗ್ರಾಮಕ್ಕೆ ಒಂದುವರೆ ಕೀ.ಮಿ ದೂರವಿದೆ. ಈ ರಸ್ತೆಯ ಮೂಲಕ ಗ್ರಾಮಕ್ಕೆ ತಲುಪಬೇಕಾದರೆ ಒಂದು ಗಂಟೆ ಸಮಯ ಬೇಕಾಗುತ್ತದೆ. ಕೆಸರು ಗದ್ದೆಯಾಗಿರುವ ರಸ್ತೆಯಲ್ಲಿ ಜೇಡಿ ಮಣ್ಣು ಇರುವುದರಿಂದ ದ್ವಿಚಕ್ರ ವಾಹನಗಳು ಕೆಳಗೆ ಬೀಳುತ್ತಿವೆ. ಇದರಿಂದ ವಾಹನಗಳನ್ನು ಭಯಭೀತಿಯಿಂದ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

‘ಶಾಲಾ ಕಾಲೇಜು ವಿದ್ಯಾರ್ಥಿಗಳು, ಕೂಲಿ, ಕಾರ್ಮಿಕರು ಓಡಾಡಲು ತೀವ್ರ ಸಮಸ್ಯೆ ಎದುರಾಗಿದೆ. ಮಳೆ ಬಂದಾಗೆಲ್ಲಾ ಈ ಸಮಸ್ಯೆ ಎದುರಾಗುತ್ತದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರು ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಗ್ರಾಮಸ್ಥ ಪ್ರಭಾಕರ್ ದೂರಿದರು.

ADVERTISEMENT

ಈ ರಸ್ತೆಯ ಮೂಲಕ ಸಿದ್ದನಹಳ್ಳಿ, ಕುರುಬರಹಳ್ಳಿ, ಇರುಗಮುತ್ತನಹಳ್ಳಿ, ಪೆರಮಾಕನಹಳ್ಳಿ ಮೂಲಕ ಬೈರಕೂರು ಹೋಬಳಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ಕಾಲ್ನಾಡಿಗೆಯಲ್ಲಿ ನಡೆಯುವುದಕ್ಕೆ ಆಗುವುದಿಲ್ಲ. ಸಮಸ್ಯೆ ಎದುರಾದಾಗ ಪಂಚಾಯಿತಿಯವರು ಮಣ್ಣು ಹಾಕಿ ಶೋಕಿ ಮಾಡುತ್ತಾರೆ ಹೊರತು ಶಾಶ್ವತವಾಗಿ ಸಮಸ್ಯೆಯನ್ನು ಪರಿಹರಿಸುಲು ಮುಂದಾಗುವುದಿಲ್ಲ ಎಂದು ಆರೋಪಿಸಿದರು.

ಗ್ರಾಮದಲ್ಲಿ ರೈತರು ಕೃಷಿ ಚಟುವಟಿಕೆಗಳು ನಡೆಯುವುದರಿಂದ ತರಕಾರಿ ವಾಹನಗಳು ತೋಟಗಳ ಬಳಿಗೆ ಬರುತ್ತಿಲ್ಲ. ಇನ್ನಾದರೂ ಸಮಸ್ಯೆಯನ್ನು ಅರಿತು ಡಾಂಬರೀಕರು ರಸ್ತೆ ನಿರ್ಮಾಣ ಮಾಡಬೇಕು. ಇಲ್ಲವಾದರೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.