ADVERTISEMENT

ಮುಳಬಾಗಿಲಿನಲ್ಲಿ ಕುಲುಮೆ ಕಲರವ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:39 IST
Last Updated 23 ಜುಲೈ 2017, 10:39 IST

ತಂತ್ರಜ್ಞಾನ ಬೆಳೆದಂತೆ ಕುಲ ಕಸುಬುಗಳು ಹಂತ ಹಂತವಾಗಿ ಕಣ್ಮರೆಯಾಗುತ್ತವೆ. ರೈತರ ಉಳುಮೆ ಸಾಧನ ಸಲಕರಣೆಗಳೂ ಆಧುನಿಕಗೊಳ್ಳುತ್ತಿವೆ. ಇದಕ್ಕೆ ಅಪವಾದ ಎನ್ನುವಂತೆ ಮುಳಬಾಗಿಲು ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಕುಲುಮೆ ಪದ್ಧತಿ ಈಗಲೂ ಜೀವಂತವಾಗಿದೆ.

ಪಟ್ಟಣದ ಬುಸಾಲುಕುಂಟೆ, ಮುತ್ಯಾಲಪೇಟೆ, ಅಂಬೇಡ್ಕರ್ ನಗರ, ಸೋಮೇಶ್ವರ ಪಾಳ್ಯ, ಗ್ರಾಮೀಣ ಭಾಗದ ಪೆದ್ದೂರು, ನಂಗಲಿ, ಬೈರಕೂರು, ಮುಡೆಯನೂರು, ದುಗ್ಗಸಂದ್ರ, ಕುರುಡುಮಲೆ, ಆವಣಿ, ದೇವರಾಯಸಮುದ್ರಗಳಲ್ಲಿ ಕುಲುಮೆಗಳನ್ನು ಕಾಣಬಹುದು.

ಏನಿದು ಕುಲುಮೆ ಪದ್ಧತಿ: ಕುಲುಮೆ ಎನ್ನುವುದು ಗ್ರಾಮೀಣ ಭಾಗದ ಜನರಿಗೆ ತಿಳಿದಿರುವ ಪದ. ಕಮ್ಮಾರರು ಮತ್ತು ಆಚಾರರು ಒಲೆಗಳಲ್ಲಿ ಕಬ್ಬಿಣ ಕಾಸಿ ಮಚ್ಚು, ಕುಡುಗೋಲು, ರಾಟೆ, ಗಡಾರಿ ಮೊನೆ ಹಾಗೂ ರೈತರು ಬಳಕೆ ಮಾಡುವ ಕಬ್ಬಿಣದ ವಸ್ತುಗಳನ್ನು ಸಿದ್ಧಗೊಳಿಸುವ ಸ್ಥಳ.

ADVERTISEMENT

ಮಳೆ ಸುರಿದಂತೆ ಕೃಷಿ ಚಟುವಟಿಕೆಗಳು ಗರಿಗೆದರುತ್ತವೆ. ಆಗ ಸಾಂಪ್ರದಾಯಿಕ ಕೃಷಿ ಉಪಕರಣಗಳಿಗೂ ಬೇಡಿಕೆ ಬರುತ್ತದೆ. ಇದನ್ನು ಮನಗಂಡ ಕೆಲವರು ಈಗಲೂ ತಮ್ಮ ಕುಲಕಸುಬಾದ ಕಮ್ಮಾರಿಕೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ರೈತರಿಗೆ ಕೈಗೆಟಕುವ ದರದಲ್ಲಿ ಇಲ್ಲಿ ಉಪಕರಣಗಳನ್ನು ಸಿದ್ಧಗೊಳಿಸಿಕೊಡಲಾಗುತ್ತದೆ.

‘ವಂಶಪಾರಂಪರ್ಯವಾಗಿ ಈ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕುಲುಮೆ ಕೈ ಬಿಡುವುದಿಲ್ಲ’ ಎನ್ನುತ್ತಾರೆ ಮುಳಬಾಗಿಲಿನ ಕೊಲಮಿಕುಂಟೆ ನಿವಾಸಿ ಸುಬ್ರಹ್ಮಣ್ಯಾಚಾರಿ. ‘ಯಂತ್ರಗಳಿಂದ ಸಾಧ್ಯವಾಗದ ಕೆಲಸವನ್ನು ಇಲ್ಲಿ ಮಾಡಬಹುದು. ಕುಲುಮೆ ನಂಬಿ ಜೀವನ ಸಾಗಿಸಬಹುದು.

ಇಲ್ಲಿ ತಯಾರಾಗುವ ಉಪಕರಣಗಳಿಗೆ ಹೆಚ್ಚಿನ ಬೇಡಿಕೆ ಇದೆ. ಶ್ರಮ ಆಧರಿಸಿ ಗ್ರಾಹಕರಿಂದ ಹಣ ಪಡೆಯಲಾಗುತ್ತದೆ. ಯಾರಿಗೂ ದುಬಾರಿ ಅನ್ನಿಸುವುದಿಲ್ಲ’ ಎಂದು ವಿವರಿಸುವರು. ಐದಾರು ವರ್ಷಗಳ ಹಿಂದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಒಲೆಗಳಲ್ಲಿ ಕಟ್ಟಿಗೆಯಿಂದ ಅಡುಗೆ ಮಾಡುತ್ತಿದ್ದರಿಂದ ಇದ್ದಿಲು ಹೇರಳವಾಗಿ ದೊರೆಯುತ್ತಿತ್ತು.

ಆದರೆ ಈಗ ಇದ್ದಿಲು ಸಿಗುವುದು ಅಪರೂಪವಾಗಿದೆ. ಆದ್ದರಿಂದ ಬಹುತೇಕ ಮಂದಿ ಗ್ರಾಮೀಣ ಭಾಗಗಳಲ್ಲಿ ಒಂದು ಮೊರ ಇದ್ದಿಲನ್ನು ₹ 20ರಂತೆ ಖರೀದಿಸಿ ಕುಲುಮೆ ನಡೆಸುತ್ತಿದ್ದಾರೆ.  ಕಲ್ಲು ಬಂಡೆ ಸೀಳುವ ಭೋಮಿ ಸಮುದಾಯದವರು ತಾವೇ ಕುಲುಮೆಗಳನ್ನು ಇಟ್ಟುಕೊಂಡು ಬಂಡೆ ಸೀಳುವ ಉಪಕರಣಗಳನ್ನು ಚೂಪಾಗಿಸಿ ಕೊಳ್ಳುವರು. ಕ್ವಾರಿ ನಡೆಯುವ ಕಡೆಗಳಲ್ಲಿಯೂ ಕುಲುಮೆಗಳನ್ನು ಕಾಣಬಹುದು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.