ADVERTISEMENT

ವದಂತಿಗೆ ಕಿವಿಗೊಡದಂತೆ ಪೋಷಕರಿಗೆ ಸಲಹೆ

ದಡಾರ– ರುಬೆಲ್ಲಾ ಲಸಿಕೆ: ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 10:25 IST
Last Updated 11 ಫೆಬ್ರುವರಿ 2017, 10:25 IST

ಕೋಲಾರ: ‘ದಡಾರ ಮತ್ತು ರುಬೆಲ್ಲಾ ಲಸಿಕೆ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಕಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದ್ದು, ಪೋಷಕರು ಈ ವದಂತಿಗೆ ಕಿವಿಗೊಡಬಾರದು’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲತಾ ಪ್ರಮೀಳಾ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಡಾರ ಮತ್ತು ರುಬೆಲ್ಲಾ ಮಾರಣಾಂತಿಕ ಕಾಯಿಲೆಗಳಾಗಿದ್ದು, ಇವುಗಳನ್ನು ಎಂ.ಆರ್ ಎಂಬ ಒಂದೇ ಲಸಿಕೆಯಿಂದ ವಾಸಿ ಮಾಡಬಹುದು. ಈ ಲಸಿಕೆ ಬೆಲೆ ₹ 1 ಸಾವಿರವಿದ್ದು, ಸರ್ಕಾರ ಉಚಿತವಾಗಿ ಮಕ್ಕಳಿಗೆ ಈ ಲಸಿಕೆ ನೀಡುತ್ತಿದೆ ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶನದಲ್ಲಿ 9 ತಿಂಗಳ ಮಗುವಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಾಲೆ ಮತ್ತು ಅಂಗನವಾಡಿಗಳಲ್ಲಿ ಈ ಲಸಿಕೆ ಹಾಕಲಾಗುತ್ತಿದೆ. ಹೀಗಾಗಿ ಪೋಷಕರು ಭಯಪಡುವ ಅಗತ್ಯವಿಲ್ಲ. ಭಾರತವನ್ನು ದಡಾರ ಮತ್ತು ರುಬೆಲ್ಲಾ ಮುಕ್ತ ರಾಷ್ಟ್ರವಾಗಿಸಲು ಸಾರ್ವಜನಿಕರ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಫೆ.7ರಿಂದ 28ರವರೆಗೆ ಲಸಿಕಾ ಆಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಕರಣ ವರದಿಯಾಗಿಲ್ಲ: ಆರ್‌ಸಿಎಚ್ ಅಧಿಕಾರಿ ಡಾ.ಚಂದನ್ ಮಾತನಾಡಿ, ‘ಫೆ.7 ಮತ್ತು 8ರಂದು ಜಿಲ್ಲೆಯಲ್ಲಿ ಸುಮಾರು 85 ಸಾವಿರ ಮಕ್ಕಳಿಗೆ ಹಾಗೂ ತಾಲ್ಲೂಕಿನಲ್ಲಿ 30 ಸಾವಿರ ಮಕ್ಕಳಿಗೆ ಎಂ.ಆರ್ ಲಸಿಕೆ ಹಾಕಲಾಗಿದೆ. ಲಸಿಕೆಯಿಂದ ಮಕ್ಕಳ ಆರೋಗ್ಯದ ಮೇಲೆ ಅಡ್ಡಪರಿಣಾಮವಾದ ಯಾವುದೇ ಪ್ರಕರಣ ವರದಿಯಾಗಿಲ್ಲ. ಬೆರಳೆಣಿಕೆ ಮಕ್ಕಳಿಗೆ ಬೇರೆ ಕಾರಣಕ್ಕೆ ಜ್ವರ ಬಂದಿರಬಹುದು. ಅಂತಹ ಮಕ್ಕಳಿಗೆ ಮಾತ್ರ ನೀಡಿ ಜ್ವರ ವಾಸಿ ಮಾಡಿದ್ದೇವೆ’ ಎಂದರು.

‘ದೇಶದಲ್ಲಿ ಕರ್ನಾಟಕ, ಪುದುಚೇರಿ, ಗೋವಾ, ಲಕ್ಷದ್ವೀಪ ಹಾಗೂ ಕೇರಳ ರಾಜ್ಯದಲ್ಲಿ ಮೊದಲ ಹಂತದಲ್ಲಿ ಗುಣಮಟ್ಟದ ಲಸಿಕೆ ಹಾಕಲಾಗುತ್ತಿದೆ. ಹಿಂದಿನಿಂದಲೂ ಇದೇ ಲಸಿಕೆ ಹಾಕಲಾಗುತ್ತಿದೆ. ಆದರೆ, ಖಾಸಗಿ ಆಸ್ಪತ್ರೆಗಳಲ್ಲಿ ಕಾಯಿಲೆ ಕಾಣಿಸಿಕೊಂಡಾಗ ಲಸಿಕೆ ಹಾಕಲಾಗುತ್ತಿತ್ತು. ಈಗ ಇದರ ಗುಣಮಟ್ಟ ಸುಧಾರಿಸಿ ದಡಾರ ಮತ್ತು ರುಬೆಲ್ಲಾ ಕಾಯಿಲೆ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮಕ್ಕಳಿಗೆ ಉಚಿತವಾಗಿ ಲಸಿಕೆ ಹಾಕುವಂತೆ ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದೆ’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪರಿವೀಕ್ಷಕ ರಾಜನಾಥ್ ಮಾಹಿತಿ ನೀಡಿದರು.

ದೇಶದ ಆಸ್ತಿ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 4 ಲಕ್ಷ ಮಕ್ಕಳಿದ್ದಾರೆ. ತಾಲ್ಲೂಕಿನಲ್ಲಿ 1 ಲಕ್ಷ ಮಕ್ಕಳಿರಬಹುದು. ಮಕ್ಕಳೇ ದೇಶದ ಆಸ್ತಿ. ಭವಿಷ್ಯದಲ್ಲಿ ಆರೋಗ್ಯಕರ ಸಮಾಜ ನಿರ್ಮಿಸಲು ಎಲ್ಲಾ ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು’ ಎಂದು ಮನವಿ ಮಾಡಿದರು.

ಉದ್ದೇಶಪೂರ್ವಕವಾಗಿ  ಕಂದಕ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದಾರೆ. ಕಿಡಿಗೇಡಿಗಳ ಸಂಚಿನಿಂದ ಗೊಂದಲ ಸೃಷ್ಟಿಯಾಗಿದೆ. ಆದರೆ, ಸಾರ್ವಜನಿಕರು ಈ ವದಂತಿ ನಂಬಬಾರದು ಎಂದು ಸ್ಪಷ್ಟಪಡಿಸಿದರು.

ದಡಾರ ಮತ್ತು ರುಬೆಲ್ಲಾ ರೋಗ ಹರಡದಂತೆ ತಡೆಯಲು ಜಿಲ್ಲಾಡಳಿತ ಎಲ್ಲಾ ರೀತಿಯಲ್ಲೂ ಕ್ರಮ ಕೈಗೊಂಡಿದೆ. ಲಸಿಕೆ ವಿಷಯವಾಗಿ ಸುಳ್ಳು ಸುದ್ದಿ ಹಬ್ಬಿಸಿ ಗೊಂದಲ ಸೃಷ್ಟಿಸುತ್ತಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಉಪ ತಹಶೀಲ್ದಾರ್ ನಾಗವೇಣಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಡಿಪಿಒ ಕಿರಣ್‌ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್, ನಗರಸಭೆ ಆರೋಗ್ಯಾಧಿಕಾರಿ ರಮೇಶ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT