ADVERTISEMENT

ವರ್ತೂರು ಪ್ರಕಾಶ್‌ಗೆ ನಾಚಿಕೆಯಾಗಲಿ

ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 7:31 IST
Last Updated 26 ಏಪ್ರಿಲ್ 2018, 7:31 IST

ಕೋಲಾರ: ‘ಕ್ಷೇತ್ರದ ಹಾಲಿ ಶಾಸಕ ವರ್ತೂರು ಪ್ರಕಾಶ್‌ ಹೇಳಿರುವಂತೆ ನಮ್ಮ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷ ಎರಡೂ ಒಂದೇ ಆಗಿದ್ದರೆ ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಯನ್ನು ಏಕೆ ಕಣಕ್ಕಿಳಿಸಬೇಕಿತ್ತು?’ ಎಂದು ಜೆಡಿಎಸ್‌ ಅಭ್ಯರ್ಥಿ ಕೆ.ಶ್ರೀನಿವಾಸಗೌಡ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ನಾಮಪತ್ರ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ತನ್ನ ಮಾತೃ ಪಕ್ಷ. ಆ ಪಕ್ಷದ ಅಭ್ಯರ್ಥಿ ತನ್ನ ಸಹೋದರ. ಚುನಾವಣೆ ನಂತರ ಆ ಪಕ್ಷಕ್ಕೆ ಹೋಗುತ್ತೇನೆ ಎಂದು ಹಾದಿ ಬೀದಿಯಲ್ಲಿ ಹೇಳುತ್ತಿರುವ ವರ್ತೂರು ಪ್ರಕಾಶ್‌ಗೆ ನಾಚಿಕೆಯಾಗಬೇಕು’ ಎಂದು ಟೀಕಿಸಿದರು.

‘ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷ ಮತ್ತು ನಮ್ಮ ಕಾಂಗ್ರೆಸ್‌ ಒಂದೇ ಆಗುವುದಕ್ಕೆ ಸಾಧ್ಯವಿಲ್ಲ. ಈ ಎರಡೂ ಪಕ್ಷಗಳು ಒಂದೆಯಾದರೆ ವರ್ತೂರು ಪ್ರಕಾಶ್‌ ಕಾಂಗ್ರೆಸ್‌ನಿಂದ ಸ್ಪರ್ಧಿಸದೆ ನಮ್ಮ ಕಾಂಗ್ರೆಸ್‌ ಪಕ್ಷದಿಂದ ಏಕೆ ಕಣಕ್ಕಿಳಿದಿದ್ದಾರೆ?’ ಎಂದು ಪ್ರಶ್ನಿಸಿದರು.

ADVERTISEMENT

‘ನಾನು ಜೆಡಿಎಸ್ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧೆ ಮಾಡುತ್ತಿದ್ದೇನೆ. ವರ್ತೂರು ಪ್ರಕಾಶ್‌ ನನಗೆ ಪ್ರಬಲ ಎದುರಾಳಿ. ಅವರನ್ನು ಚುನಾವಣೆಯಲ್ಲಿ ಹೇಗೆ ಸೋಲಿಸಬೇಕೆಂದು ನನಗೆ ಚೆನ್ನಾಗಿ ಗೊತ್ತಿದೆ. ಹಿಂದಿನ ಎರಡು ಚುನಾವಣೆಗಳಲ್ಲಿ ಕ್ಷೇತ್ರದ ಜನ ಆ ಮಹಾನುಭಾವನನ್ನು ಆಯ್ಕೆ ಮಾಡಿದ್ದಕ್ಕೆ ಬೇಸರಗೊಂಡಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಿದ್ದು, ಜೆಡಿಎಸ್ ಪರವಾದ ಅಲೆ ಎದ್ದಿದೆ’ ಎಂದರು.

‘ಹಿಂದಿನ ಎರಡು ಚುನಾವಣೆಗಳಲ್ಲಿ ಸೋತಿರುವುದು ನನಗೆ ಈ ಬಾರಿ ಧನಾತ್ಮಕವಾಗಲಿದೆ. ನನ್ನ ಬಗ್ಗೆ ಮತದಾರರಲ್ಲಿ ಅನುಕಂಪವಿದ್ದು, ಚುನಾವಣೆಯಲ್ಲಿ ಗೆಲ್ಲುವುದು ನಿಶ್ಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವರಿಷ್ಠರ ನಿರ್ಧಾರ: ‘ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಮುಳಬಾಗಿಲು ಕ್ಷೇತ್ರದ ಹಾಲಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ ಜತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರ ನನಗೆ ಸಂಬಂಧಿಸಿದ್ದಲ್ಲ. ಆ ಬಗ್ಗೆ ಪಕ್ಷದ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ನಿರ್ಧಾರ ಕೈಗೊಳ್ಳುತ್ತಾರೆ. ಮಂಜುನಾಥ್‌ರ ಜಾತಿ ಪ್ರಮಾಣಪತ್ರ ಕಾನೂನುಬದ್ಧವಾಗಿದ್ದರೆ ಎಲ್ಲರೂ ಒಪ್ಪಿಕೊಳ್ಳಲೇಬೇಕು. ಕಾನೂನಿಗೆ ವಿರುದ್ಧವಾಗಿದ್ದರೆ ಚುನಾವಣಾಧಿಕಾರಿ ತೀರ್ಮಾನ ಕೈಗೊಳ್ಳುತ್ತಾರೆ’ ಎಂದು ಸ್ಪಷ್ಟಪಡಿಸಿದರು.

‘ಮಂಜುನಾಥ್‌ರ ನಾಮಪತ್ರದ ವಿಚಾರವಾಗಿ ಆಕ್ಷೇಪ ಮಾಡಲು ಇಲ್ಲಿಗೆ ಬಂದಿಲ್ಲ. ಅವರ ಸ್ಪರ್ಧೆಯು ನ್ಯಾಯಾಲಯದ ಆದೇಶದ ಮೇಲೆ ಅವಲಂಬಿತವಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.