ADVERTISEMENT

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ

ಬಂಗಾರಪೇಟೆ: ದಲಿತ ಸಂಘರ್ಷ ಸಮಿತಿ ಸದಸ್ಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 4:49 IST
Last Updated 23 ಮಾರ್ಚ್ 2017, 4:49 IST

ಬಂಗಾರಪೇಟೆ: ತಾಲ್ಲೂಕು ಕಚೇರಿಯಲ್ಲಿನ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಬುಧವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕಚೇರಿಯ ಸಿಬ್ಬಂದಿ ಕಾರ್ಯ ವೈಖರಿ ಬೇಸರ ತಂದಿದೆ. ಪ್ರತಿ ಹಂತದಲ್ಲಿ ಲಂಚ ಇಲ್ಲದೆ ಕೆಲಸ ನಡೆಯುತ್ತಿಲ್ಲ. ಸಾರ್ವಜನಿಕರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕ್ರಯ ಪತ್ರದ ಅನ್ವಯ ಪಹಣಿ, ಖಾತೆ ಮ್ಯುಟೇಷನ್‌ ಮಾಹಿತಿ ನಮೂದಿಸಬೇಕಿದೆ, ಆದರೆ ತಪ್ಪಾಗಿ ನಮೂದಿಸಿದ್ದು, ರೈತರಿಗೆ ತೊಂದರೆಯಾಗಿದೆ. ತಪ್ಪು ಮಾಡಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ, ಕ್ರಯ ಪತ್ರದಲ್ಲಿರುವಂತೆ ಇತರ ದಾಖಲೆಗಳಲ್ಲಿ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.

ಬಗರ್‌ ಹುಕ್ಕಂ ಸಾಗುವಳಿ ಅರ್ಜಿಗಳನ್ನು ವಿಲೇವಾರಿ ಮಾಡಿ ಭೂ ಮಂಜೂರಾತಿ ಆದೇಶ ಜಾರಿ ಮಾಡಬೇಕು. ತೋಟಿ, ನೀರಗಂಟಿ ಹಾಗೂ ಇನಾಂತಿ ಜಮೀನು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮಂಜೂರಾಗಿರುವ ಬಗರ್‌ ಹುಕ್ಕಂ  ಜಮೀನು ಇತರರ ವಶದಲ್ಲಿದ್ದು, ಮೂಲ ಫಲಾನುಭವಿಗಳಿಗೆ ಹಿಂತಿರುಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಚೇರಿಯಲ್ಲಿ ಪರಿಶಿಷ್ಟ ಜಾತಿ, ಮತ್ತು ಪಂಗಡದ ಕೆಲ ಮೂಲ ಕಡತಗಳು ಕಾಣೆಯಾಗಿವೆ. ಇದಕ್ಕೆ ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡು, ಮೂಲ ಕಡತ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆ ಬರಗಾಲಕ್ಕೆ ಸಿಲುಕಿ ತತ್ತರಿಸಿದೆ. ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಶಾಶ್ವತ ನೀರಾವರಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.  ಬೂದಿಕೋಟೆ ಗ್ರಾಮದ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇಗುಲದ ಆಸ್ತಿ ಅಕ್ರಮವಾಗಿ ಪರಭಾರೆ ಮಾಡಿದವರ ವಿರುದ್ಧ ಕ್ರಮ ಜರುಗಿಸಿ, ಆಸ್ತಿಯನ್ನು ಉಳಿಸಬೇಕು.

ಬೂದಿಕೋಟೆ ಸರ್ವೆ ನಂಬರ್‌ 127ರ 1.30ಎಕರೆಗೆ ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಆ ಜಮೀನನ್ನು ಸಾರ್ವಜನಿಕರ ಬಳಕೆಗೆ ಮೀಸಲಿಡಬೇಕು  ಎಂದು ಮನವಿ ಮಾಡಿದರು.

ಬೂದಿಕೋಟೆ ಸರ್ವೆ ನಂಬರ್‌151ರ 24 ಗುಂಟೆ ಜಮೀನು ಸ್ಮಶಾಣಕ್ಕೆ ಮೀಸಲಿರಿಸಿದ್ದು, ಸರ್ವೆ ಮಾಡಿಸಿ, ಚಕ್ಕುಬಂದಿ ಹಾಕಬೇಕು. ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಮಕ್ಕಳಿಗೆ ಸೌಲಭ್ಯ ಒದಗಿಸದೆ ವಂಚಿಸುತ್ತಿರುವ ವಾರ್ಡನ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರ್ಹ ವಾರ್ಡನ್‌ಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನಾ ಸಂಚಾಲಕ ಟಿ.ವಿಜಯಕುಮಾರ್, ಕಾಮಸಮುದ್ರಂ ನಾರಾಯಣಪ್ಪ, ಹುಣಸನಹಳ್ಳಿ ಪಿ.ವೆಂಕಟೇಶ್, ಕದಿರೇನಹಳ್ಳಿ ಕುಮಾರ್, ಮೇಡಿಹಾಳ ಮುನಿಆಂಜನಪ್ಪ, ಶಾಂತಿನಗರ ವಸಂತಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT