ADVERTISEMENT

ಶಿಥಿಲಗೊಂಡ ಓವರ್‍ಹೆಡ್ ಟ್ಯಾಂಕ್

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 7:25 IST
Last Updated 13 ಡಿಸೆಂಬರ್ 2017, 7:25 IST

ಮುಳಬಾಗಿಲು: ತಾಲ್ಲೂಕಿನ ಯಳಗೊಂಡಹಳ್ಳಿ ಗ್ರಾಮದ ಮುಖ್ಯ ರಸ್ತೆ ಹಾಗೂ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಇರುವ ಓವರ್‍ಹೆಡ್ ಟ್ಯಾಂಕ್ ಶಿಥಿಲಗೊಂಡಿದ್ದು, ಬೀಳುವ ಸ್ಥಿತಿಯಲ್ಲಿದೆ.

ಇಲ್ಲಿನ ಓವರ್ ಹೆಡ್‍ಟ್ಯಾಂಕ್ ನಿರ್ಮಾಣವಾಗಿ ಸುಮಾರು ವರ್ಷಗಳು ಕಳೆದಿವೆ. ಟ್ಯಾಂಕ್‍ನ ಸಿಮೆಂಟ್ ಉದುರಿ ಬೀಳುವ ಹಂತ ತಲುಪಿದೆ. ಇದರಿಂದಾಗಿ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಜೀವ ಭಯದಿಂದ ಸಂಚಾರ ನಡೆಸಬೇಕಾದ ಪರಿಸ್ಥಿತಿ ಒದಗಿ ಬಂದಿದೆ.

ಓವರ್ ಟ್ಯಾಂಕ್ ಸಮೀಪವೆ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇರುವುದರಿಂದ ವಿದ್ಯಾರ್ಥಿಗಳಿಗೂ ಸಹ ಮುಂದಿನ ದಿನಗಳಲ್ಲಿ ಅಪಾಯವಾಗುವ ಸಾಧ್ಯತೆಗಳಿವೆ. ಜತೆಗೆ ಇಲ್ಲಿನ ರಸ್ತೆ ಕಿರಿದಾಗಿರುವುದರಿಂದ ಟ್ಯಾಂಕ್ ಕೆಳಭಾಗದಲ್ಲಿ ಪಾದಚಾರಿಗಳು ನಡೆಯಬೇಕಾಗಿದೆ. ಪ್ರಾಣವನ್ನು ಅಂಗೈಯಲ್ಲಿ ಇಟ್ಟುಕೊಂಡು ಈ ರಸ್ತೆಯಲ್ಲಿ ಸಂಚಾರ ನಡೆಸಬೇಕಾಗಿದೆ ಎಂದು ಗ್ರಾಮಸ್ಥರು ದೂರಿದರು.

ADVERTISEMENT

ಏಕಾಏಕಿಯಾಗಿ ಓವರ್ ಹೆಡ್ ಟ್ಯಾಂಕ್ ಬಿದ್ದು ಶಾಲೆಗೆ ಬರುವ ಮಕ್ಕಳಿಗೆ ಏನಾದರೂ ತೊಂದರೆಯಾದರೆ ಯಾರು ಹೊಣೆಯಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಪೋಷಕರು, ಈ ಬಗ್ಗೆ ಸಾಕಷ್ಟು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.

ಇಲ್ಲಿನ ರಸ್ತೆ ಮಿನಜೇನಹಳ್ಳಿ, ಮದಿನಾಕನಹಳ್ಳಿ, ಜಯಮಂಗಲ, ಬೇತಮಂಗಲ, ಕೆಜಿಎಫ್, ಬಂಗಾರಪೇಟೆ, ಆವಣಿ, ಶಾಪೂರು, ಅಬ್ಬಣಿ, ಕೋಲಾರ, ದೇವರಾಯಸಮುದ್ರ ಮೂಲಕವಾಗಿ ರಾಷ್ಟ್ರೀಯ ಹೆದ್ದಾರಿಗೆ ಸೇರಿದಂತೆ ಮುಳಬಾಗಿಲಿಗೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ರಸ್ತೆಯಲ್ಲಿ ಪ್ರತಿ ನಿತ್ಯ ಹೆಚ್ಚಿನ ವಾಹನಗಳ ಸಂಚಾರ ದಟ್ಟಣೆ ಇರುತ್ತದೆ. ಈ ಕಾರಣದಿಂದ ಇಲ್ಲಿನ ಟ್ಯಾಂಕ್ ರಸ್ತೆಗೆ ಬಿದ್ದು ಜನ ಸಾಮಾನ್ಯರಿಗೆ ಅನಾಹುತ ಸಂಭವಿಸುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

‘ತಾಲ್ಲೂಕಿನ ಹಲವೆಡೆ ಓವರ್‍ಹೆಡ್ ಟ್ಯಾಂಕ್‍ಗಳು ಬಿರುಕು ಬಿಟ್ಟು, ಬೀಳುವ ಸ್ಥಿತಿಯಲ್ಲಿವೆ. ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಭೇಟಿ ನೀಡಿ, ಬೀಳುವ ಪರಿಸ್ಥಿತಿಯಲ್ಲಿರುವ ಟ್ಯಾಂಕ್‍ಗಳನ್ನು ತೆರವುಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ನಾಗರಾಜ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.