ADVERTISEMENT

ಶೀಘ್ರವೇ ರಾಜಕಾಲುವೆ ಸ್ವಚ್ಛಗೊಳಿಸಿ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2017, 6:56 IST
Last Updated 6 ಸೆಪ್ಟೆಂಬರ್ 2017, 6:56 IST

ಕೋಲಾರ: ‘ನಗರದ ಹೊರವಲಯದ ಅಮ್ಮೇರಹಳ್ಳಿ ಕೆರೆಗೆ ನೀರು ಹರಿದು ಬರುವ ರಾಜಕಾಲುವೆಗಳನ್ನು ಶೀಘ್ರವೇ ಸ್ವಚ್ಛಗೊಳಿಸಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಲ್ಯಾಂಕೊ ಕಂಪೆನಿ ಸಿಬ್ಬಂದಿಗೆ ಮಂಗಳವಾರ ಸೂಚನೆ ನೀಡಿದರು.

ರಾಷ್ಟ್ರೀಯ ಹೆದ್ದಾರಿ 75ರ ಸೇತುವೆಗಳನ್ನು ಮಂಗಳವಾರ ಪರಿಶೀಲಿಸಿದ ಅವರು, ಕಾಲುವೆಗಳಿಂದ ಕೆರೆಗೆ ನೀರು ಹರಿದು ಬರಿದು ಅಡ್ಡಲಾಗಿರುವ ಅಡೆತಡೆ ತೆರವು ಮಾಡಬೇಕು ಎಂದು ತಿಳಿಸಿದರು.

ಈ ಬಾರಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ನೀರು ಕೆರೆಗಳಿಗೆ ಹರಿದು ಬರುತ್ತಿಲ್ಲ. ರಾಜಕಾಲುವೆಗಳ ಒತ್ತುವರಿಯಾಗಿದೆಯೆ ಅಥವಾ ರಸ್ತೆ ವಿಸ್ತರಣೆ ವೇಳೆ ಕಾಲುವೆಗಳಿಗೆ ಏನಾದರೂ ಅಡೆ ತಡೆ ಮಾಡಲಾಗಿದೆಯೆ ಎಂಬ ಬಗ್ಗೆ ಪರಿಶೀಲನೆ ನಡೆಸಿ. ರೈತರು ರಾಜಕಾಲುವೆ ಒತ್ತುವರಿ ಮಾಡಿದ್ದರೆ ಶೀಘ್ರವೇ ತೆರವುಗೊಳಿಸಿ ಎಂದು ಹೇಳಿದರು.

ADVERTISEMENT

ಕೋಳಿ ಅಂಗಡಿಗಳವರು ರಾಜಕಾಲುವೆಗೆ ಸುರಿದಿದ್ದ ತ್ಯಾಜ್ಯ ಕೊಳೆತು ದುರ್ನಾತ ಬರುತ್ತಿದ್ದುದನ್ನು ಗಮನಿಸಿದ ಜಿಲ್ಲಾಧಿಕಾರಿ, ನಗರಕ್ಕೆ ಕುಡಿಯುವ ನೀರು ಒದಗಿಸುವ ಕೆರೆಯ ಪಕ್ಕದಲ್ಲಿ ಹೀಗೆ ತ್ಯಾಜ್ಯ ವಿಲೇವಾರಿ ಮಾಡಿದರೆ ಹೇಗೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಹಂದಿ ಕಾಟ: ‘ನಗರಸಭೆ ಪೌರ ಕಾರ್ಮಿಕರು ರಾಜಕಾಲುವೆಯಲ್ಲಿ ಕಸ ವಿಲೇವಾರಿ ಮಾಡುತ್ತಿದ್ದಾರೆ. ಎಪಿಎಂಸಿ ಮಂಡಿಯವರು ಕೊಳತೆ ಟೊಮೆಟೊ ಮತ್ತು ತರಕಾರಿ ತ್ಯಾಜ್ಯ ತಂದು ಹಾಕುತ್ತಿದ್ದಾರೆ. ತ್ಯಾಜ್ಯ ಕೊಳೆತು ಸೊಳ್ಳೆ, ನೊಣ ಹಾಗೂ ಹಂದಿಗಳ ಕಾಟ ಹೆಚ್ಚಿದೆ’ ಎಂದು ರಾಜಕಾಲುವೆಯ ಅಕ್ಕಪಕ್ಕದ ಮನೆಗಳ ನಿವಾಸಿಗಳು ಜಿಲ್ಲಾಧಿಕಾರಿಗೆ ದೂರು ಹೇಳಿದರು.

ನಾಲ್ಕೈದು ದಿನಗಳಿಂದ ಸಾಕಷ್ಟು ಮಳೆಯಾಗಿದೆ. ಅಂತರಗಂಗೆ ಬೆಟ್ಟದಿಂದ ಮಳೆ ನೀರು ಹರಿದುಬಂದು ಅಮ್ಮೇರಹಳ್ಳಿ ಕೆರೆ ಅರ್ಧದಷ್ಟಾದರೂ ತುಂಬಬೇಕಿತ್ತು. ಆದರೆ, ಕೆರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಇದಕ್ಕೆ ಕಾರಣವೇನು ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರಾದ ರಾಮಚಂದ್ರ, ‘ಲ್ಯಾಂಕೊ ಕಂಪೆನಿಯವರು ಕೆರೆಯ ಒಂದು ಬದಿಯಲ್ಲಿ ಸುಮಾರು ನಾಲ್ಕು ಎಕರೆಯಷ್ಟು ಜಾಗದಲ್ಲಿ ಮಣ್ಣು ತೆಗೆದು ದೊಡ್ಡ ಗುಂಡಿ ಮಾಡಿದ್ದಾರೆ. ಮಳೆ ನೀರು ಆ ಗುಂಡಿಗೆ ತುಂಬಿಕೊಂಡಿದೆ. ಹೀಗಾಗಿ ಕೆರೆ ಭರ್ತಿಯಾಗಿಲ್ಲ’ ಎಂದು ವಿವರಿಸಿದರು.

ಹೆದ್ದಾರಿ ಬದಿಯ ಬೆತ್ತನಿ ಮತ್ತು ಮಡೇರಹಳ್ಳಿ ಸಮೀಪದ ರಾಜಕಾಲುವೆಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಕಾಲುವೆಗಳಿಂದ ನೀರು ಸರಾಗವಾಗಿ ಹರಿಯುವಂತೆ ಮಾಡಿ ಎಂದು ಲ್ಯಾಂಕೊ ಕಂಪೆನಿ ವ್ಯವಸ್ಥಾಪಕ ಗೋವಿಂದರಾವ್ ಅವರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.