ADVERTISEMENT

ಶ್ರೀನಿವಾಸಗೌಡರ ಸ್ಪರ್ಧೆಗೆ ಹಸಿರು ನಿಶಾನೆ

ಜೆಡಿಎಸ್‌ ಅಭ್ಯರ್ಥಿ ಆಯ್ಕೆಯ ಹಗ್ಗ ಜಗ್ಗಾಟ ಅಂತ್ಯ; ಗೊಂದಲಗಳಿಗೆ ತೆರೆ ಎಳೆದ ವರಿಷ್ಠರು

ಜೆ.ಆರ್.ಗಿರೀಶ್
Published 23 ಏಪ್ರಿಲ್ 2018, 10:35 IST
Last Updated 23 ಏಪ್ರಿಲ್ 2018, 10:35 IST

ಕೋಲಾರ: ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಸಂಬಂಧ ನಡೆಯುತ್ತಿದ್ದ ಹಗ್ಗ ಜಗ್ಗಾಟ ಅಂತ್ಯಗೊಂಡಿದ್ದು, ವರಿಷ್ಠರು ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಅಸ್ತು ಎನ್ನುವ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಅಭ್ಯರ್ಥಿ ಆಯ್ಕೆ ವಿಷಯವಾಗಿ ಜೆಡಿಎಸ್‌ ಪಾಳಯದಲ್ಲಿ ಮೂರ್ನಾಲ್ಕು ತಿಂಗಳಿಂದ ದೊಡ್ಡ ಕದನವೇ ನಡೆದಿತ್ತು. ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶ್ರೀನಿವಾಸಗೌಡರು ಅಭ್ಯರ್ಥಿ ಘೋಷಣೆಗೂ ಮುನ್ನವೇ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದ್ದರು. ಹಳ್ಳಿ ಹಳ್ಳಿ ಸುತ್ತಿ ಚುನಾವಣೆಗೆ ಭೂಮಿಕೆ ಸಿದ್ಧಪಡಿಸಿಕೊಂಡಿದ್ದರು.

ಆದರೆ, ಪಕ್ಷದಲ್ಲಿನ ವಿರೋಧಿ ಬಣವು ಶ್ರೀನಿವಾಸಗೌಡರಿಗೆ ಟಿಕೆಟ್‌ ಕೊಡದಂತೆ ವರಿಷ್ಠರ ಮೇಲೆ ಒತ್ತಡ ತಂದಿತ್ತು. ಆ ಬಣವು ವಿಧಾನ ಪರಿಷತ್‌ ಸದಸ್ಯರಾಗಿರುವ ಚಿತ್ರ ನಿರ್ಮಾಪಕ ಸಿ.ಆರ್‌.ಮನೋಹರ್‌ ಅವರನ್ನು ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡಿತ್ತು. ಆದರೆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಲು ಹಿಂದೇಟು ಹಾಕಿದ ಮನೋಹರ್‌ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಕ್ಷೇತ್ರದತ್ತ ಒಲವು ತೋರಿದರು.

ADVERTISEMENT

ಹೀಗಾಗಿ ವರಿಷ್ಠರು ಕೋಲಾರ ಕ್ಷೇತ್ರ ಹೊರತುಪಡಿಸಿ ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಮಾರ್ಚ್‌ನಲ್ಲಿ ಘೋಷಣೆ ಮಾಡಿದ್ದರು. ವರಿಷ್ಠರ ಈ ನಡೆ ಶ್ರೀನಿವಾಸಗೌಡರ ಕಣ್ಣು ಕೆಂಪಾಗಿಸಿತ್ತು. ಪಕ್ಷದ ಆಂತರಿಕ ಬೆಳವಣಿಗೆಗಳಿಂದ ಅಸಮಾಧಾನಗೊಂಡ ಅವರು ಕಾಂಗ್ರೆಸ್‌ನತ್ತ ಮುಖ ಮಾಡಿದರು. ಆದರೆ ಕಾಂಗ್ರೆಸ್‌ನಲ್ಲೂ ಅವರಿಗೆ ಅದೃಷ್ಟ ಕೈಕೊಟ್ಟಿತ್ತು.

ತ್ರಿಶಂಕು ಸ್ಥಿತಿ: ಜೆಡಿಎಸ್‌ ಸಖ್ಯದಿಂದ ಬಹು ದೂರ ಹೋಗಿದ್ದ ಶ್ರೀನಿವಾಸಗೌಡರು ಕಾಂಗ್ರೆಸ್‌ ಸೇರಲೂ ಆಗದೆ ಪಕ್ಷಕ್ಕೆ ವಾಪಸ್‌ ಬರಲೂ ಆಗದೆ ತ್ರಿಶಂಕು ಸ್ಥಿತಿಯಲ್ಲಿದ್ದರು. ಮುಂದಿನ ರಾಜಕೀಯ ನಡೆ ಸಂಬಂಧ ಅವರು ಬೆಂಬಲಿಗರು ಹಾಗೂ ಜೆಡಿಎಸ್‌ ಪಕ್ಷದಲ್ಲಿನ ಆಪ್ತರ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರೂ ಸ್ಪಷ್ಟ ನಿರ್ಧಾರ ತಳೆಯಲಾಗದೆ ಕಾದು ನೋಡುವ ತಂತ್ರ ಅನುಸರಿಸಿದ್ದರು.

ಪಕ್ಷದ ಸ್ಥಳೀಯ ಮುಖಂಡರು ಹಾಗೂ ಒಕ್ಕಲಿಗ ಸಮುದಾಯದ ಪ್ರಮುಖರು ವರಿಷ್ಠರನ್ನು ಭೇಟಿಯಾಗಿ ಶ್ರೀನಿವಾಸಗೌಡರ ಪರ ಲಾಬಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ವಿರೋಧಿ ಬಣವು ವರಿಷ್ಠರ ಮಟ್ಟದಲ್ಲಿ ರಾಜಕೀಯ ದಾಳ ಉರುಳಿಸಿತ್ತು. ವರಿಷ್ಠರು ಅಳೆದು ತೂಗಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ವಕ್ಕಲೇರಿ ರಾಮು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿ ಏ.20ರಂದು ಬಿ ಫಾರಂ ಸಹ ಕೊಟ್ಟಿದ್ದರು.

ಕುಟುಂಬದ ವಿರೋಧ: ರಾಮು ಅವರು ಬಿ ಫಾರಂ ಪಡೆದು ಬೆಂಗಳೂರಿನಿಂದ ಕ್ಷೇತ್ರಕ್ಕೆ ಹಿಂದಿರುಗಿದ ಬೆನ್ನಲ್ಲೇ ಚುನಾವಣೆಗೆ ಸ್ಪರ್ಧಿಸದಂತೆ ಒಕ್ಕಲಿಗ ಸಮುದಾಯದ ಮುಖಂಡರು ಅವರ ಮೇಲೆ ಒತ್ತಡ ಹೇರಿದ್ದರು. ಮತ್ತೊಂದೆಡೆ ಕುಟುಂಬ ಸದಸ್ಯರಿಂದಲೂ ಸ್ಪರ್ಧೆಗೆ ವಿರೋಧ ವ್ಯಕ್ತವಾಗಿತ್ತು.

ಈ ಹಿಂದೆ ಕಾಂಗ್ರೆಸ್‌ ಪಕ್ಷದಲ್ಲಿದ್ದ ರಾಮು ಅವರನ್ನು ಶ್ರೀನಿವಾಸಗೌಡರೇ ಜೆಡಿಎಸ್‌ಗೆ ಕರೆತಂದು ಅವರ ಪತ್ನಿ ಚೌಡೇಶ್ವರಿ ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಮಾಡಲು ಸಾಕಷ್ಟು ಬೆವರು ಹರಿಸಿದ್ದರು. ಅಲ್ಲದೇ, ರಾಮು ಅವರನ್ನು ಒಕ್ಕಲಿಗರ ಸಂಘದ ನಿರ್ದೇಶಕರಾಗಿ ಮಾಡುವಲ್ಲೂ ನಿರ್ಣಾಯಕ ಪಾತ್ರ ವಹಿಸಿದ್ದರು.

ರಾತ್ರೋರಾತ್ರಿ ಬದಲು: ಒಕ್ಕಲಿಗ ಮುಖಂಡರು ಮತ್ತು ಕುಟುಂಬ ಸದಸ್ಯರ ಒತ್ತಡ ಹಾಗೂ ಶ್ರೀನಿವಾಸಗೌಡರ ನೆರವಿನ ಋಣಕ್ಕೆ ಕಟ್ಟುಬಿದ್ದ ರಾಮು ಅವರು ಚುನಾವಣೆಯಲ್ಲಿ ಸ್ಪರ್ಧಿಸದಿರುವ ನಿರ್ಧಾರ ಕೈಗೊಂಡು ಸ್ಥಳೀಯ ಮುಖಂಡರೊಂದಿಗೆ ಶನಿವಾರ ರಾತ್ರಿ ವರಿಷ್ಠರನ್ನು ಭೇಟಿಯಾಗಿ ಬಿ ಫಾರಂ ಹಿಂದಿರುಗಿಸಿದ್ದಾರೆ. ರಾಮು ಸೇರಿದಂತೆ ಸ್ಥಳೀಯ ಮುಖಂಡರೆಲ್ಲ ಶ್ರೀನಿವಾಸಗೌಡರಿಗೆ ಟಿಕೆಟ್‌ ಕೊಡುವಂತೆ ಒಕ್ಕೊರಲಿನಿಂದ ವರಿಷ್ಠರ ಮನವೊಲಿಸಿದ್ದಾರೆ.

ಮುಖಂಡರ ಒತ್ತಾಯಕ್ಕೆ ಮಣಿದ ವರಿಷ್ಠರು ಶ್ರೀನಿವಾಸಗೌಡರಿಗೆ ಬಿ ಫಾರಂ ಕೊಟ್ಟು ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ. ಸಾಕಷ್ಟು ನಾಟಕೀಯ ಬೆಳವಣಿಗೆಯಿಂದ ರಾತ್ರೋರಾತ್ರಿ ಜೆಡಿಎಸ್‌ ಅಭ್ಯರ್ಥಿ ಬದಲಾಗಿದ್ದು, ಪಕ್ಷದಲ್ಲಿನ ಶ್ರೀನಿವಾಸಗೌಡರ ವಿರೋಧಿ ಬಣಕ್ಕೆ ಮುಖಭಂಗವಾಗಿದೆ.

**

ಪಕ್ಷದ ಅಭ್ಯರ್ಥಿಯಾಗಿದ್ದ ರಾಮು ಬಿ ಫಾರಂ ಹಿಂದಿರುಗಿ ಸಿದ್ದಾರೆ. ವರಿಷ್ಠರು ಪಕ್ಷದಲ್ಲಿನ ಗೊಂದ ಲ ಬಗೆಹರಿಸಿದ್ದಾರೆ. ಶ್ರೀನಿವಾಸಗೌಡರ ಗೆಲುವಿಗೆ ಶ್ರಮಿಸುತ್ತೇವೆ
ಕೆ.ಬಿ.ಗೋಪಾಲಕೃಷ್ಣ,ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ

**

ಜೆಡಿಎಸ್‌ ಅಭ್ಯರ್ಥಿಯಾಗಿ ಸೋಮವಾರ (ಏ.23) ನಾಮಪತ್ರ ಸಲ್ಲಿಸುತ್ತೇನೆ. ಮುಖಂಡ ರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇನೆ
– ಕೆ.ಶ್ರೀನಿವಾಸಗೌಡ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.