ADVERTISEMENT

ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಹೋರಾಟ

ರೈತ ಸೇನೆಯ ರಾಜ್ಯ ಘಟಕದ ಅಧ್ಯಕ್ಷರ ಎಚ್ಚರಿಕೆ; ಸರಾಗವಾಗಿ ನಡೆಯುವ ಮಧ್ಯವರ್ತಿಗಳ ಕೆಲಸ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2017, 6:59 IST
Last Updated 27 ಮಾರ್ಚ್ 2017, 6:59 IST
ಕೋಲಾರ: ‘ಜಿಲ್ಲೆಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿರುವ ಕಂದಾಯ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲಾಗುವುದು’ ಎಂದು ರಾಜ್ಯ ರೈತ ಸೇನೆಯ ರಾಜ್ಯ ಘಟಕ ಅಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದರು.
 
ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸೇನೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಸುಮಾರು ವರ್ಷಗಳಿಂದ ಬರಪರಿಸ್ಥಿತಿ ಎದುರಾಗಿದೆ. ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ’ ಎಂದು ದೂರಿದರು.
 
‘ಸಮಸ್ಯೆ ಹೇಳಿಕೊಂಡು ರೈತರೇ ನೇರವಾಗಿ ತಾಲ್ಲೂಕು ಕಚೇರಿಗೆ ಹೋದರೆ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಪಂದಿಸುತ್ತಿಲ್ಲ. ಅದೇ ಮಧ್ಯವರ್ತಿಗಳ ಮೂಲಕ ಹೋದರೆ ಎರಡು ಮೂರು ದಿನಗಳಲ್ಲೇ ಕೆಲಸ ಆಗುತ್ತದೆ. ಇಂತಹ ಅಧಿಕಾರಿಗಳನ್ನು ಜಿಲ್ಲಾಡಳಿತ ಹತೋಟಿಯಲ್ಲಿ ಇಡಬೇಕು’ ಎಂದು ಒತ್ತಾಯಿಸಿದರು.
 
‘ರೈತರು ಪಹಣಿ ತಿದ್ದುಪಡಿ, ಪೋಡಿ, ಖಾತೆ ಮಾಡಿಸಿಕೊಳ್ಳಲು ಹೋದರೆ ಸುಲಭವಾಗಿ ಆಗುವುದಿಲ್ಲ. ಈ ಹಿಂದೆ ಕಂದಾಯ ಇಲಾಖೆ ರೈತರ ಭೂ ದಾಖಲೆಗಳನ್ನು ಸರಿಪಡಿಸುವ ಪೋಡಿ, ಕಂದಾಯ ಅದಾಲತ್ ನಡೆಸಿತು. ಅದಾಲತ್‌ನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳು ಇದುವರೆಗೂ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
 
‘ಬರಗಾಲದಲ್ಲಿ ಸರ್ಕಾರ ರೈತರ ಬೆಳೆಗಳಿಗೆ ಬರಪರಿಹಾರ ಕಲ್ಪಿಸಲು ಯೋಜನೆ ರೂಪಿಸಿ ಅರ್ಜಿಗಳನ್ನು ಆಹ್ವಾನಿಸಿತು. ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆಗಳು ಬೆಳೆ ನಷ್ಟವಾಗಿರುವ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತು. ಅದೇ ರೀತಿ ರೈತರು ಸಹ ಸೂಕ್ತ ದಾಖಲೆಗಳೊಂದಿಗೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದರು’ ಎಂದು ಅವರು ತಿಳಿಸಿದರು.
 
‘ಅರ್ಜಿ ಸಲ್ಲಿಸಿದ ಕೆಲ ದಿನಗಳ ನಂತರ ಸಂಬಂಧಪಟ್ಟ ಇಲಾಖೆಯ ಕಚೇರಿ ಭೇಟಿ ನೀಡಿ ಪರಿಹಾರದ ಹಣ ಬಂದಿಲ್ಲ ಎಂದು ಅಧಿಕಾರಿಗಳನ್ನು ಕೇಳಿದರೆ ದಾಖಲೆಗಳು ಸರಿಯಿಲ್ಲ ಎಂಬ ನೆಪ ಹೇಳುತ್ತಾರೆ. ಪರಿಹಾರ ನೀಡು ವಲ್ಲೂ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳನ್ನು ಜಿಲ್ಲಾಡಳಿತ ಹತೋಟಿಗೆ ತೆಗೆದುಕೊಳ್ಳದಿದ್ದರೆ ಶೀಘ್ರ ದಲ್ಲೇ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು. 
 
ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕೆಂಪಣ್ಣ, ಜಿಲ್ಲಾ ಘಟಕದ ಸಂಚಾಲಕ ನಾಗೇಶ್, ತಾಲ್ಲೂಕು ಘಟಕದ ಕಾರ್ಯಾಧ್ಯಕ್ಷ ಕೃಷ್ಣಪ್ಪ, ಬಂಗಾರಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್, ನಗರ ಘಟಕದ ಅಧ್ಯಕ್ಷ ಮಧುಸೂಧನ್ ಇದ್ದರು.
 
ತಾಲ್ಲೂಕು ಕಚೇರಿಯಲ್ಲಿ ರೈತ ಪಹಣಿ ಪಡೆದುಕೊಳ್ಳಲು   ಗಂಟೆ ಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ  ಸ್ಥಿತಿ ಇದೆ. ಮತ್ತೊಂದು ಕೌಂಟರ್ ತೆರೆಯುವಂತೆ ತಹಶೀಲ್ದಾರ್‌ ಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಕೆ.ವೈ.ಗಣೇಶ್‌ಗೌಡ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.