ADVERTISEMENT

ಸಾಕ್ಷ್ಯಾಧಾರ ಒದಗಿಸಿದರೆ ನ್ಯಾಯ ಕೊಡಿಸಲು ಸಾಧ್ಯ

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಾಗೃತಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ಮೇ 2017, 9:10 IST
Last Updated 12 ಮೇ 2017, 9:10 IST
ಸಾಕ್ಷ್ಯಾಧಾರ ಒದಗಿಸಿದರೆ ನ್ಯಾಯ ಕೊಡಿಸಲು ಸಾಧ್ಯ
ಸಾಕ್ಷ್ಯಾಧಾರ ಒದಗಿಸಿದರೆ ನ್ಯಾಯ ಕೊಡಿಸಲು ಸಾಧ್ಯ   
ಕೋಲಾರ: ‘ದೌರ್ಜನ್ಯ ಪ್ರಕರಣಗಳಲ್ಲಿ ಸಮರ್ಪಕ ಸಾಕ್ಷ್ಯಾಧಾರ ಒದಗಿಸಿದರೆ ಮಾತ್ರ ತಪ್ಪಿತಸ್ಥರನ್ನು ಶಿಕ್ಷಿಸಿ ದೌರ್ಜನ್ಯಕ್ಕೊಳಗಾದವರಿಗೆ ನ್ಯಾಯ ಕೊಡಿಸಲು ಸಾಧ್ಯ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.
 
ನಗರದಲ್ಲಿ ಗುರುವಾರ ನಡೆದ ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ತಾಲ್ಲೂಕು ಮಟ್ಟದಲ್ಲಿ ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ವಿಶೇಷ ಮತ್ತು ಗಂಭೀರ ಪ್ರಕರಣಗಳನ್ನು ಪರಿಹರಿಸಲಾಗುವುದು’ ಎಂದರು.
 
‘ಹಲವಾರು ವರ್ಷಗಳಿಂದ ಬಾಕಿ ಇದ್ದ ದೌರ್ಜನ್ಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತಿದೆ. ವಸತಿ ಶಾಲೆಗಳಿಗೆ ಜಾಗ ಮೀಸಲಿರಿಸಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ವಿವಿಧ ಭವನಗಳಿಗೆ ಸರ್ಕಾರಿ ಜಾಗ ಗುರುತಿಸಿ ಮಂಜೂರಾತಿ ನೀಡಲಾಗುತ್ತಿದೆ.
 
ವಿವಿಧ ಯೋಜನೆಗಳ ಅನುದಾನ ಬಾಕಿ ಉಳಿದಿದ್ದು, ಅದು ಸರ್ಕಾರಕ್ಕೆ ವಾಪಸ್‌ ಹೋಗದಂತೆ ಕಾಮಗಾರಿಗಳಿಗೆ ಬಳಕೆ ಮಾಡಬೇಕು. ಎಸ್ಎಪಿ ಮತ್ತು ಎಸ್‌ಟಿಪಿ ಹಣವನ್ನು ನಿಯಮಾನುಸಾರ ವೆಚ್ಚ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
 
ನಿರ್ದೇಶನ ನೀಡಲಿದೆ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಯೋಜನೆಗಳಿಗೆ ಅನುದಾನವನ್ನು ಯಾವ ರೀತಿ ವೆಚ್ಚ ಮಾಡಬೇಕೆಂಬ ಬಗ್ಗೆ ಸರ್ಕಾರವೇ ನಿರ್ದೇಶನ ನೀಡಲಿದೆ. ಅದರಂತೆ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆಗೆ (ಟಿಎಸ್‌ಪಿ) ಅನುದಾನವನ್ನು ನಿಗದಿತ ಅವಧಿಯಲ್ಲಿ ಬಳಸಬೇಕು’ ಎಂದರು.
 
‘ವಸತಿನಿಲಯಗಳಿಗೆ ಅನುದಾನ ಬಳಸಲು ಕೆಲ ತಾಂತ್ರಿಕ ಅಡಚಣೆ ಎದುರಾಗಿರುವ ಕಾರಣ ಕೊನೆ ಹಂತದಲ್ಲಿ ತುರಾತುರಿಯಲ್ಲಿ ಅನುದಾನ ವೆಚ್ಚ ಮಾಡಲು ಹೋಗಿ ಲೋಪದೋಷಗಳಾಗಿವೆ. ಮುಂದಿನ ದಿನಗಳಲ್ಲಿ ಇದಕ್ಕೆ ಅವಕಾಶ ಕೊಡದೆ ಪೂರ್ವಭಾವಿಯಾಗಿ ಯೋಜನೆ ರೂಪಿಸಿ ಅನುದಾನ ಬಳಸಬೇಕು. ಜತೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿ ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.
 
ಭ್ರಷ್ಟಾಚಾರ: ಜಾಗೃತಿ ಸಮಿತಿ ಸದಸ್ಯ ವೆಂಕಟರಾಮ್ ಮಾತನಾಡಿ, ‘ಮಾಲೂರು ತಾಲ್ಲೂಕಿನ ತಾಳಕುಂಟೆ ಹಾಗೂ ಯಶವಂತಪುರ ಗ್ರಾಮದಲ್ಲಿ ಸುವರ್ಣ ಗ್ರಾಮದಲ್ಲಿ ರಸ್ತೆಗಳನ್ನು ನಿರ್ಮಿಸಿ ಒಂದೇ ಕಾಮಗಾರಿಗೆ ಮೂರು ಬಿಲ್‌ ಮಂಜೂರು ಮಾಡಿ ಭ್ರಷ್ಟಾಚಾರ ನಡೆಸಲಾಗಿದೆ’ ಎಂದು ಆರೋಪಿಸಿದರು.
 
‘ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳ ಸಂಬಂಧ ಪೊಲೀಸರು ಪ್ರತಿ ದೂರು ದಾಖಲಿಸಿಕೊಳ್ಳುವ ಮೂಲಕ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದ್ದಾರೆ. ಕೆಲ ಪೊಲೀಸ್‌ ಸಿಬ್ಬಂದಿ ಅಪರೂಪಕ್ಕೆ ಒಂದೆರಡು ಪ್ರಕರಣ ದಾಖಲಿಸುತ್ತಿದ್ದಾರೆ’ ಎಂದು ಸಮಿತಿ ಸದಸ್ಯ ಅಂಬರೀಷ್‌ ದೂರಿದರು. 
 
‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಶಾಸಕರಿಗೆ ನೀಡಿರುವುದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಶಾಸಕರು ಅಧಿಕಾರ ದುರ್ಬಳಕೆ ಮಾಡಿಕೊಂಡು ಫಲಾನುಭವಿಗಳ ಆಯ್ಕೆ ಮಾನದಂಡವನ್ನು ಗಾಳಿಗೆ ತೂರಿ ತಮ್ಮ ಬೆಂಬಲಿಗರಿಗೆ ಸರ್ಕಾರದ ಸವಲತ್ತುಗಳನ್ನು ಕೊಡುತ್ತಿದ್ದಾರೆ’ ಎಂದು ಹೇಳಿದರು.
 
ದಲಿತರಿಗೆ ಹಂಚಿಕೆ: ಸಮಿತಿಯ ಮತ್ತೊಬ್ಬ ಸದಸ್ಯ ಮುನಿಯಪ್ಪ ಮಾತನಾಡಿ, ‘ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ತಿರುಮಲಕೊಪ್ಪ ಗ್ರಾಮದಲ್ಲಿನ ಸರ್ವೆ ನಂಬರ್ 21ರಲ್ಲಿನ 20 ಎಕರೆ ಜಾಗವನ್ನು ನವೋದಯ ವಿದ್ಯಾಲಯಕ್ಕೆ ಮಂಜೂರು ಮಾಡಲಾಗಿತ್ತು. ಇದನ್ನು ವಿರೋಧಿಸಿ ಹೋರಾಟ ನಡೆಸಿದ್ದರಿಂದ ಜಿಲ್ಲಾಧಿಕಾರಿ ಆ ಜಾಗದ ಮಂಜೂರಾತಿ ಆದೇಶವನ್ನು ಹಿಂಪಡೆದು ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
 
‘ಜಿಲ್ಲಾಧಿಕಾರಿಯು ಮಾಲೂರಿನ ಮಾಸ್ತಿ ಗ್ರಾ.ಪಂ ವ್ಯಾಪ್ತಿಯ ತಿಮ್ಮನಾಯಕನಹಳ್ಳಿಯ 12 ಎಕರೆ ಭೂಮಿ ಮತ್ತು ನೀಲಕಂಠ ಆಗ್ರಹಾರದಲ್ಲಿನ 3 ಎಕರೆ ಜಮೀನಿನ ಒತ್ತುವರಿ ತೆರವುಗೊಳಿಸಿ ಸ್ವಾಧೀನಕ್ಕೆ ತೆಗೆದುಕೊಂಡು 52 ದಲಿತ ಕುಟುಂಬಗಳಿಗೆ ಹಂಚಿಕೆ ಮಾಡಿದ್ದಾರೆ. ಅವರ ದಿಟ್ಟ ಕ್ರಮವನ್ನು ಸ್ವಾಗತಿಸುತ್ತೇವೆ’ ಎಂದರು.
 
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ, ಸಮಿತಿ ಸದಸ್ಯರಾದ ಎಂ.ರವೀಂದ್ರಕುಮಾರ್, ಸುಧಾಕರ್ ಯಾದವ್ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.