ADVERTISEMENT

ಹಣಕ್ಕೆ ಬೇಡಿಕೆಯಿಟ್ಟ ಕಾನ್‌ಸ್ಟೆಬಲ್

ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2017, 5:23 IST
Last Updated 25 ಮಾರ್ಚ್ 2017, 5:23 IST
ಮಂಜು
ಮಂಜು   

ಕೆಜಿಎಫ್: ಇಲ್ಲಿನ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್‌ಸ್ಟೆಬಲ್‌ ಮಂಜು, ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್‌ ಚಾಲಕನೊಬ್ಬರ ಬಳಿ ಹಣಕ್ಕೆ ಒತ್ತಾಯಿಸುತ್ತಿರುವ ದೃಶ್ಯ ಶುಕ್ರವಾರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಾಹನದಲ್ಲಿ ಕುಳಿತು ಟ್ರ್ಯಾಕ್ಟರ್‌ ಚಾಲಕರ ಜೊತೆ ಮಾತನಾಡುತ್ತಿರುವ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ₹ 2.5 ಸಾವಿರ ಹಣ ನೀಡುವಂತೆ ಬಲವಂತ ಮಾಡುತ್ತಿರುವುದು ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಕೇಳುತ್ತದೆ.

ಜಿಲ್ಲಾ ಪೊಲೀಸ್‌ ಕೇಂದ್ರದಲ್ಲಿ ವಾಹನ ಚಾಲಕನಾಗಿ ಮಂಜು ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಾನು ಡಿಸಿಐಬಿ, ಡಿಸಿಬಿ ಸ್ಕ್ವಾಡ್‌ಗಳಿಗೆ ಮಾಮೂಲಿ ಕೊಡಬೇಕು. ಎರಡೂವರೆ ಸಾವಿರ ಕೊಡು’ ಈತ ಒತ್ತಾಯಿಸುತ್ತಿದ್ದಾನೆ.

‘ಇತ್ತೀಚಿನ ದಿನಗಳಲ್ಲಿ ಮರಳು ಸಾಗಾಣಿಕೆ ಜಾಸ್ತಿ ಮಾಡುತ್ತಿಲ್ಲ. ಕಡಿಮೆ ಮಾಡಿಕೋ ಮಂಜಣ್ಣ. ಒಂದೂವರೆ ಸಾವಿರ ಕೊಡುತ್ತೇನೆ’ ಎಂದು ಟ್ರ್ಯಾಕ್ಟರ್‌ ಚಾಲಕ ಗೋಗರೆಯುತ್ತಿದ್ದಾನೆ.  

ಆಗ ಕಾನ್‌ಸ್ಟೆಬಲ್ ‘ಆಗೊಲ್ಲ ನನಗೆ ಹೇಳಿದ ಕೆಲಸ ನಾನು ಮಾಡುತ್ತಿದ್ದೇನೆ. ತಿಂಗಳಿಗೆ ಒಮ್ಮೆ ತಾನೇ ಕೊಡು’ ಎಂದು ಆಗ್ರಹಿಸುತ್ತಿದ್ದಾನೆ. ಈ ದೃಶ್ಯ ಎಲ್ಲಿ ಮತ್ತು ಯಾವಾಗ ಚಿತ್ರೀಕರಿಸಲಾಯಿತು ಎಂಬುದು ತಿಳಿದುಬಂದಿಲ್ಲ.

*
ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವ ದೃಶ್ಯಾವಳಿ  ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಬೇಕಾದ ಅಗತ್ಯ ಇದೆ.
-ಬಿ.ಎಸ್.ಲೋಕೇಶ್‌ಕುಮಾರ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.