ADVERTISEMENT

ಹಸಿರು ಸೇವೆಗೆ ಅರಸಿ ಬಂದ ಪ್ರಶಸ್ತಿ

ತೊಳಸನದೊಡ್ಡಿ ಗ್ರಾಮದ ಪ್ರಾಥಮಿಕ ಶಾಲೆಗೆ ಅಂತರರಾಷ್ಟ್ರೀಯ ಮಟ್ಟದ ಗರಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 9:33 IST
Last Updated 17 ಜನವರಿ 2017, 9:33 IST
ಹಸಿರು  ಸೇವೆಗೆ ಅರಸಿ ಬಂದ ಪ್ರಶಸ್ತಿ
ಹಸಿರು ಸೇವೆಗೆ ಅರಸಿ ಬಂದ ಪ್ರಶಸ್ತಿ   

ಮಾಲೂರು: ಶಿಕ್ಷಕರ ಆಸಕ್ತಿ ಹಾಗೂ ವಿದ್ಯಾರ್ಥಿಗಳ ಶ್ರಮದ ಫಲವಾಗಿ ತಾಲ್ಲೂಕಿನ ತೊಳಸನದೊಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ  2015–16 ಸಾಲಿನ ಅಂತರರಾಷ್ಟ್ರೀಯ ಮಟ್ಟದ ‘ಹಸಿರು ಧ್ವಜ ಪ್ರಶಸ್ತಿ’ ತನ್ನ ಮುಡಿಗೆರಿಸಿಕೊಂಡಿದೆ.

1ನೇ ತರಗತಿಯಿಂದ 4ನೇ  ತರಗತಿಯವರೆಗೆ 13 ಜನರು ವಿದ್ಯಾರ್ಥಿಗಳು ಈ  ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯಶಿಕ್ಷಕ ಮಾಸ್ತಿ ಮಂಜುನಾಥ್ ಅವರು ಶಾಲೆಯ ಆವರಣದಲ್ಲಿ ತರಕಾರಿ, ಹಣ್ಣು ಸೇರಿದಂತೆ ವಿವಿಧ ರೀತಿಯ ಗಿಡಮರಗಳನ್ನು ಬೆಳೆಸಿ ಪೋಷಿಸಿದ್ದಾರೆ.

ನೀರಿನ ಸೌಲಭ್ಯ ಇಲ್ಲದಿದ್ದರೂ ಶಾಲೆಯ ಅಕ್ಕ ಪಕ್ಕದ ರೈತರ ಮನವೊಲಿಸಿ ಕೃಷಿ  ಭೂಮಿಯಿಂದ ನೀರು ಸಂಗ್ರಹಿಸಿ ಶಾಲೆಯ ಆವರಣದಲ್ಲಿ ಹಸಿರು ಕಂಗೊಳಿಸುವಂತೆ ಮಾಡಿ ದೇಶದ ಗಮನ ಸೆಳೆದಿದ್ದಾರೆ.

ಪರಿಸರ ಕಾಳಜಿ ಮೈಗೂಡಿಸಿಕೊಂಡಿರುವ ಮಂಜುನಾಥ್ ಅವರು ಶಾಲೆಯ ಮಕ್ಕಳು ಮತ್ತು ಗ್ರಾಮಸ್ಥರ ಸಹಕಾರದಿಂದ ಶಾಲೆಯಲ್ಲಿ ಅಚ್ಚು ಕಟ್ಟಾದ ಕೈ ತೋಟ, ವಿವಿಧ ಜಾತಿಯ ಗಿಡಮರಗಳನ್ನು ಬೆಳೆಸಿ ಗಮನ ಸೆಳೆದಿದ್ದಾರೆ.

ಜೀವ ವೈವಿಧ್ಯ ಜಾಗೃತಿ : ಶಾಲೆಯ ಆವರಣದಲ್ಲಿ ಔಷಧಿ ಗಿಡಗಳು, ತರಕಾರಿ, ಸೊಪ್ಪು ಸೇರಿದಂತೆ ಗಿಡಮರಗಳನ್ನು ಬೆಳೆಸಲಾಗಿದೆ. ಹುಣಸೆ ಮರದಲ್ಲಿ ವಾಸವಾಗಿರುವ ಗಿಳಿ, ಗೊರವಂಕ, ಕೋಗಿಲೆ ಮತ್ತು ಅಳಿಲುಗಳ ತುಂಟಾಟ ಶಾಲೆಯ ಸೊಬಗು ಹೆಚ್ಚಿಸಿವೆ. ಶಾಲೆಯ ಬಲಭಾಗದ ಆವರಣದಲ್ಲಿ ಜೇನುಪೆಟ್ಟಿಗೆಯಲ್ಲಿನ ಜೇನು ನೊಣಗಳ ಜೊತೆಗೆ ಮೀನಿನ ತೊಟ್ಟಿಯನ್ನು ನಿರ್ಮಿಸಿ ವಿವಿಧ ಜಾತಿಯ ಮೀನುಗಳನ್ನು ಪೋಷಿಸಲಾಗಿದೆ.

ಕೈತೋಟದಲ್ಲಿ ಬೆಳೆಸಲಾದ ಹಣ್ಣುಗಳನ್ನು ಶಾಲೆಯ ಮಕ್ಕಳಿಗೆ ತಿನ್ನಲು ಕೊಡುತ್ತಾರೆ. ಶಾಲೆಯಲ್ಲಿ ಬೀಜಗಳ ಶೇಖರಣೆಗೆ ಇಟ್ಟಿರುವ ಡಬ್ಬಕ್ಕೆ ಪ್ರತಿದಿನ ಮಕ್ಕಳು ತಮಗೆ ದೊರಕುವ ಯಾವುದೇ ಹಣ್ಣಿನ ಬೀಜಗಳನ್ನು ತಂದು ಹಾಕಬೇಕು. ತಿಂಗಳಿಗೊಮ್ಮೆ ಸಂಗ್ರಹವಾಗುವ  ಬೀಜಗಳನ್ನು ಶಿಕ್ಷಕ ಮಂಜುನಾಥ್ ಮಕ್ಕಳೊಂದಿಗೆ ಗ್ರಾಮದ ಗುಡ್ಡ ಗಾಡು ಪ್ರದೇಶಗಳಿಗೆ ತೆರಳಿ  ಕಲ್ಲು ಬಂಡೆಗಳ ಸಂದಿಗಳಲ್ಲಿ ಮಣ್ಣು ತೆಗೆದು ಶಾಲೆಯಲ್ಲಿ ಸಂಗ್ರಹಿಸಿರುವ  ವಿವಿಧ ಜಾತಿಯ ಹಣ್ಣಿನ ಬೀಜಗಳನ್ನು  ಬಿತ್ತನೆ ಮಾಡುತ್ತಾರೆ. ಇದರಿಂದ  ಗಿಡಮರಗಳ ಸಂಖ್ಯೆ ಹೆಚ್ಚಾಗಿ ಬೆಳೆದು ಉತ್ತಮ ಪರಿಸರದ ಜೊತೆಗೆ  ಪ್ರಾಣಿ ಪಕ್ಷಿಗಳು ವಾಸಿಸಲು ಅನೂಕಲವಾಗುವಂತೆ ನೋಡಿಕೊಳ್ಳುತ್ತಾ ಬಂದಿದ್ದಾರೆ.

ಆರೋಗ್ಯ, ಸ್ವಚ್ಛತೆ: ಹಸಿ ಹಾಗೂ ಒಣ ಕಸವನ್ನು ಸಂಗ್ರಹಿಸಲು ಪ್ರತ್ಯೇಕ ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಈ ಮೂಲಕ ಮಕ್ಕಳಲ್ಲಿ ಆರಂಭದಿಂದಲೂ ಸ್ವಚ್ಛತೆಯ ಅರಿವು ಮೂಡಿಸಲಾಗಿದೆ.

ಶಾಲಾ ಆವರಣದಲ್ಲಿ ಚಾರಣದ ಅನುಭವಕ್ಕಾಗಿ ಹುಣಸೆ ಮರದಲ್ಲಿ ಕೃತಕವಾಗಿ ಹಗ್ಗದಲ್ಲಿ ಮೆಟ್ಟಿಲು ನಿರ್ಮಿಸಿ ಮರಕ್ಕೆ ಕಟ್ಟಿ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಧೈರ್ಯ ತುಂಬುತ್ತಾರೆ.

ಬಿಸಿ ಊಟಕ್ಕೆ ಅಗತ್ಯವಿರುವ ತರಕಾರಿಯನ್ನು ಶಾಲೆಯ ಆವರಣದಲ್ಲಿಯೇ ಬೆಳೆಯಲಾಗುತ್ತಿದೆ. ಈ ಸ್ವಚ್ಛತಾ ಕಾರ್ಯ ಶಾಲೆಗೆ ಸೀಮಿತ ಮಾಡದೆ  ಇತರೇ  ಅಕ್ಕ ಪಕ್ಕದ  ಸರ್ಕಾರಿ ಶಾಲೆಗಳು ಮತ್ತು ಗ್ರಾಮಗಳಿಗೆ  ಮಕ್ಕಳೊಂದಿಗೆ ತೆರಳಿ ಗಿಡಗಳನ್ನು ಅವರಿಗೂ ನೀಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಕೈಗೊಂಡಿದ್ದಾರೆ.

2014– 15ನೇ ಸಾಲಿನ ಪರಿಸರ ಮಿತ್ರ ಪ್ರಶಸ್ತಿ ಮುಡಿಗೇರಿಸಿ ಕೊಂಡಿರುವ ಈ ಶಾಲೆಗೆ   ರಾಜ್ಯ ಸರ್ಕಾರ ಸಾಲು ಮರದ ತಿಮ್ಮಕ್ಕ ಹಸಿರು ಪ್ರಶಸ್ತಿ ನೀಡಿ ಗೌರವಿಸಿದೆ.

ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಇಕೋ ಇತ್ತಿಚೇಗೆ ಗುಜರಾತ್‌ನ  ಅಲಹಬಾದ್ ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2015–16ನೇ ಸಾಲಿನ ಅಂತರರಾಷ್ಟ್ರೀಯ ಮಟ್ಟದ  ಪರಿಸರ ಶಾಲೆಗಳ  ಹಸಿರು ಧ್ವಜ ಪ್ರಶಸ್ತಿ ನೀಡಿ ಗೌರವಿಸಿದೆ.
  -ವಿ. ರಾಜಗೋಪಾಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.