ADVERTISEMENT

ಹಿರಿಯ ನಾಗರಿಕರ ಅಭಿವೃದ್ಧಿಗೆ ಸೇವೆ ಒದಗಿಸಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2017, 8:59 IST
Last Updated 21 ಆಗಸ್ಟ್ 2017, 8:59 IST

ಕೋಲಾರ: ‘ಹಿರಿಯ ನಾಗರಿಕರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅಗತ್ಯ ಸೇವೆಗಳನ್ನು ಒದಗಿಸಲು ಮುಂದಾಗಬೇಕು’ ಎಂದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿ ಜಯಂತ್ ಪಟೇಲ್ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರದಿಂದ ಭಾನುವಾರ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರಿಗೆ ಕಾನೂನು ಸೌಕರ್ಯಗಳ ಯೋಜನೆ 2016ನ್ನು ಅನುಷ್ಠಾನಗೊಳಿಸಲು ನಡೆದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹಿರಿಯ ನಾಗರಿಕರ ರಕ್ಷಣೆ ಹಾಗೂ ಪೋಷಣೆಗಾಗಿ ಜಾರಿಗೊಳಿಸಿರುವ ‘ಪೋಷಕರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ 2017’ರ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರವೇ ವಿಶೇಷ ನ್ಯಾಯಾಧಿಕರಣ ರೂಪಿಸಬೇಕು. ಹಿರಿಯ ನಾಗರಿಕರಿಗೆ ಎಲ್ಲ ಅಗತ್ಯ ಸೇವೆಗಳನ್ನು ಒದಗಿಸಲು ಅನುವು ಮಾಡಿಕೊಡಬೇಕು’ ಎಂದರು.

ADVERTISEMENT

‘ಆರೋಗ್ಯ, ಮಾನಸಿಕ ಸಂತುಲನ ಹಾಗೂ ಇತರ ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಿರುವ ಹಿರಿಯ ನಾಗರಿಕರಿಗೆ ಹಕ್ಕು ರಕ್ಷಣೆಗಾಗಿ ಇರುವ ಕಾನೂನು ಬಗ್ಗೆ ಅರಿವು ಮೂಡಿಸುವುದರ ಜತೆಗೆ ಅಂತಹ ಸೇವೆಗಳನ್ನು ಅವರಿಗೆ ತಲುಪಿಸುವಂತಹ ಕಾರ್ಯ ಅನುಷ್ಠಾನ ಮಾಡಲು ಅಯಾ ಇಲಾಖೆಗಳು ಮುಂದಾಗಬೇಕು. ಪ್ರಾಧಿಕಾರವು ಈ ನಿಟ್ಟಿನಲ್ಲಿ ಇಲಾಖೆಗಳು ಹಾಗೂ ನಾಗರಿಕರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ’ ಎಂದು ತಿಳಿಸಿದರು.

‘ನ್ಯಾಯಾಲಯಗಳಿಗೆ ಬರುವ ಪ್ರಕರಣಗಳಲ್ಲಿ ಪೋಷಕರಿಂದ ಮಕ್ಕಳ ವಿರುದ್ಧ ಅಥವಾ ಜೀವನಾಂಶಕ್ಕಾಗಿ ಬರುವ ಪ್ರಕರಣಗಳು ಅತೀ ವಿರಳ. ಹಿರಿಯ ನಾಗರಿಕರಿಗೆ ಹಕ್ಕು ರಕ್ಷಣೆಗಾಗಿ ಇರುವಂತ 2007ರ ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು. ಸಾಮಾನ್ಯ ನ್ಯಾಯಾಲಯ ಪ್ರಕ್ರಿಯೆಯ ಬದಲಾಗಿ ಅವರಿಗೆ ವಿಶೇಷ ನ್ಯಾಯಾಧಿಕರಣ ರೂಪಿಸಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಹಿರಿಯ ನಾಗರಿಕರನ್ನು ಪ್ರತಿಯೊಬ್ಬರು ಗೌರವಿಸುವಂತಾಗಬೇಕು. ಅವರ ಅಭಿವೃದ್ಧಿಗಾಗಿ ಜಾರಿಗೊಳಿಸಿರುವ ಯೋಜನೆಗಳನ್ನು ಕಾರ್ಯಗತಗೊಳಿಸಲು ಪ್ರತಿಯೊಬ್ಬರು ಮುಂದಾಗಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ತಿಳಿಸಿದರು.

ಹಿರಿಯರು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವಾಗ ಉತ್ತಮ ಸೇವೆ ಸಲ್ಲಿಸಿರುತ್ತಾರೆ. ಅವರ ಮಾರ್ಗದರ್ಶನ ಪ್ರತಿಯೊಬ್ಬರಿಗೂ ಮುಖ್ಯ. ಅವರು ವೃದ್ಧರಾದಾಗ ಮೂಲೆಗುಂಪು ಮಾಡುವ ಬದಲು ನೆಮ್ಮದಿಯ ಬದುಕು ಕಟ್ಟಿಕೊಡಬೇಕಾದ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.

ಬೆಂಗಳೂರಿನ ನಿಮ್ಹಾನ್ಸ್‌ನ ಪ್ರಾಧ್ಯಾಪಕ ಪ್ರೊ.ಜಿ.ಗುರುರಾಜ್, ‘ಹಿರಿಯ ನಾಗರಿಕರು ತಮ್ಮ ಆರೋಗ್ಯದ ಕಡೆ ಗಮನಹರಿಸಿದಾಗ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಹಿರಿಯ ನಾಗರಿಕರ ಆರೋಗ್ಯ ಕಾಪಾಡಲು ಸಾರ್ವಜನಿಕ ಆರೋಗ್ಯ ವೀಕ್ಷಣಾಲಯವನ್ನು ಸ್ಥಾಪಿಸಲಾಗಿದೆ. ಅವರ ಸಬಲೀಕರಣಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಜಿಲ್ಲೆಯನ್ನು ಪೈಲೆಟ್ ಯೋಜನೆಯಾಗಿ ಆಯ್ಕೆ ಮಾಡಿಕೊಂಡಿರುವುದು ಶ್ಲಾಘನೀಯ’ ಎಂದರು.

‘ನಿಮ್ಹಾನ್ಸ್ ವತಿಯಿಂದ ಹಿರಿಯ ನಾಗರಿಕರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಗ್ರ ಪೋಷಣೆ ಹಾಗೂ ರಕ್ಷಣೆಗಾಗಿ ಬೆಂಗಳೂರಿನ ಮೆದುಳು ಸಂಶೋಧನಾ ಕೇಂದ್ರ, ದೇವರಾಜ್ ಅರಸು ವೈದ್ಯಕೀಯ ಕಾಲೇಜು ಸಹಯೋಗದೊಂದಿಗೆ ಶ್ರೀನಿವಾಸಪುರದಲ್ಲಿ ಯೋಜನೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು’ ಎಂದು ಹೇಳಿದರು.

‘ಈ ಯೋಜನೆಯಿಂದ ಸುಮಾರು 10 ಸಾವಿರ ಹಿರಿಯ ನಾಗರಿಕಗೆ ಅನುಕೂಲವಾಗಲಿದೆ. ಪ್ರಾರಂಭದ ಹಂತದಲ್ಲಿಯೇ ಸಮಸ್ಯೆಯನ್ನು ಗುರುತಿಸಿ ಪರಿಹಾರ ಒದಗಿಸುವುದು ಯೋಜನೆಯ ಉದ್ದೇಶವಾಗಿದೆ’ ಎಂದು ವಿವರಿಸಿದರು.

ರಾಜ್ಯ ಕಾನೂನು ಸೇವೆ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎಸ್.ಮಹಾಲಕ್ಷ್ಮಿ ನೇರಳೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಬಿ.ಕಾವೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರೋಹಿಣಿ ಕಟೋಚ್ ಸಪೆಟ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್, ವಕೀಲರ ಸಂಘದ ಅಧ್ಯಕ್ಷ ಸಿ.ರಾಮಕೃಷ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ ಜಿ.ಶಿರೋಳ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.