ADVERTISEMENT

ಹೋರಾಟಕ್ಕೆ ಕನ್ನಡ ಹೆಸರು ಬಳಕೆ: ಸಂಘಟನೆಗಳಿಗೆ ಕಳಂಕ

​ಪ್ರಜಾವಾಣಿ ವಾರ್ತೆ
Published 31 ಜುಲೈ 2017, 4:59 IST
Last Updated 31 ಜುಲೈ 2017, 4:59 IST

ಕೋಲಾರ: ‘ಅನೇಕರು ಹೋರಾಟಕ್ಕೆ ಕನ್ನಡದ ಹೆಸರು ಹೇಳಿಕೊಂಡು ಜೀವನ ನಡೆಸುತ್ತಿರುವುದು ನಿಜವಾದ ಹೋರಾಟಗಾರರಿಗೆ ಕಳಂಕ ತರುವಂತಾಗಿದೆ’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಬೇಸರವ್ಯಕ್ತಪಡಿಸಿದರು.

ನಗರದ ಕುವೆಂಪು ಉದ್ಯಾನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ಕುಮಾರ್ ಶೆಟ್ಟಿ ಬಣ) ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಡಾ.ರಾಜ್‌ಕುಮಾರ್‌ ಅವರ ಪುತ್ಥಳಿ ಅನಾವರಣ ಹಾಗೂ ಜಿಲ್ಲಾ ಸ್ವಾಭಿಮಾನಿ ಕನ್ನಡಿಗರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡವನ್ನು ಕಟ್ಟಲು ಒಬ್ಬರಿಂದ ಅಥವಾ ಒಂದು ಸಂಘಟನೆಯಿಂದ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಎಲ್ಲ ಪಾತ್ರಗಳನ್ನು ಮಾಡುವ ಏಕೈಕ ಶಕ್ತಿ ಹೊಂದಿದ್ದ ವರನಟ ಡಾ.ರಾಜ್‌ಕುಮಾರ್ ಅವರು ಪ್ರಪಂಚದಲ್ಲಿಯೇ ಮಹಾನ್ ನಟರಾಗಿದ್ದರು. ಅವರ ನಟನೆಯಿಂದಾಗಿ ಅನೇಕ ಮಹನೀಯರ ಜೀವನಚರಿತ್ರೆಗಳನ್ನು ನಾವೆಲ್ಲರೂ  ಅರ್ಥಮಾಡಿಕೊಳ್ಳಲಾಗಿದೆ ಎಂದರು.

ADVERTISEMENT

ಸತತ 30 ವರ್ಷಗಳ ಕಾಲ ಅವರೊಂದಿಗೆ ಒಡನಾಡಿಯಾಗಿದ್ದ ತಮಗೆ ಅನೇಕ ಅನುಭವಗಳು ಅವರಿಂದಾಗಿವೆ. ಅಭಿಮಾನಿಗಳನ್ನು ದೇವರು ಎಂದು ಕರೆ ಮೊದಲಿಗರು ಡಾ.ರಾಜ್ ಎಂದ ಅವರು ಪ್ರೇಕ್ಷಕರಿಲ್ಲದೆ ಕಲಾವಿದರ ಜೀವನ ವ್ಯರ್ಥವಾಗುತ್ತದೆ ಎಂದು ಹೇಳಿದರು.

ಕೋಲಾರದಲ್ಲಿ ಪುತ್ಥಳಿ ಅನಾವರಣೆ ಮಾಡಿರುವುದು ಶ್ಲಾಘನೀಯ. ಪುತ್ಥಳಿ ಸುತ್ತಲು ರಾಜ್ ಅವರ ನಟನೆಯ ಚಿತ್ರಗಳು, ಅವರಿಗೆ ಸಂದಿರುವ ಪ್ರಶಸ್ತಿಗಳು ಸೇರಿದಂತೆ ಜೀವನ ಚರಿತ್ರೆಯ ಮಾಹಿತಿ ಹಾಕಿದರೆ ಸೂಕ್ತ ಎಂದರು.

ರಾಜ್‌ಕುಮಾರ್ ಇದ್ದಾಗ ಸರ್ಕಾರಗಳು ಅವರಿಗೆ ಹೆದರುತ್ತಿದ್ದವು. ಅಂತಹ ಹೋರಾಟದ ಸ್ಪೂರ್ತಿಯನ್ನು ಪಡೆದ ಚಲನಚಿತ್ರ ವಾಣಿಜ್ಯ ಮಂಡಳಿಯು ನಾಡು- ನುಡಿ, ನೆಲ-ಜಲ ರಕ್ಷಣೆಗಾಗಿ ಹಲವಾರು ಸಂಘಟನೆಗಳನ್ನು ಒಳಗೊಂಡಂತೆ ಕನ್ನಡಪರ ಒಕ್ಕೂಟಕ್ಕೆ ಸಂಪೂರ್ಣ ಬೆಂಬಲ ನೀಡಿ, ಹೋರಾಟಗಳಲ್ಲಿ ಭಾಗಿಯಾಗುತ್ತಿದೆ ಎಂದು  ತಿಳಿಸಿದರು.

‘ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ವ್ಯರ್ಥವಾಗಿ ಸಮುಕ್ಕೆ ಸೇರುತ್ತಿರುವ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಹರಿಸಲು ಯಾವುದೇ ವಿರೋಧವಿಲ್ಲ’ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ  ಪ್ರವೀಣ್‌ಕುಮಾರ್ ಶೆಟ್ಟಿ ಸ್ಪಷ್ಟಪಡಿಸಿದರು.

‘ಮಳೆಗಾಲದಲ್ಲಿ ಸುಮಾರು ಟಿಎಂಸಿ ನೀರು ವ್ಯರ್ಥವಾಗಿ ಸಮುಕ್ಕೆ ಹರಿಯುತ್ತಿದೆ. ಆ ಭಾಗದಲ್ಲಿ ಹೆಚ್ಚಾಗಿ ನೀರು ಶೇಖರಣೆಯಾಗುತ್ತಿರುವುದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಬೇರೆಯ ಕಡೆಯ ವ್ಯಕ್ತಿಗಳು ಇದಕ್ಕೆ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದರು.

ಬಯಲು ಸೀಮೆಗೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಯೋಜನೆಯನ್ನು ಜಾರಿ ಮಾಡುವವರೆಗೂ ಜನಪ್ರತಿನಿಧಿಗಳಿಗೆ ಮತ ನೀಡದಂತೆ ಎಲ್ಲರೂ ಒಗ್ಗಟ್ಟಾಗಬೇಕು. ನಿಮ್ಮ ನೀರಿನ ಹೋರಾಟಕ್ಕೆ ವೇದಿಕೆಯಿಂದ ಸಂಪೂರ್ಣ ಬೆಂಬಲ ನೀಡುತ್ತೆವೆ ಎಂದು ಪ್ರಕಟಿಸಿದರು.

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು. ವೇದಿಕೆಯ ರಾಜ್ಯ ಘಟಕದ ಉಪಾಧ್ಯಕ್ಷ ಶಿವರಾಜುಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಚಂಬೆರಾಜೇಶ್, ನಗರಸಭಾ ಸದಸ್ಯರಾದ ಮಂಜುನಾಥ್, ಎಸ್.ಆರ್.ಮುರಳಿಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿರೆಡ್ಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕರಾದ ಪ್ರಕಾಶ್, ವಿ.ಕೆ.ರಾಜೇಶ್, ವೆಂಕಟೇಶ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರಾಜೇಶ್ವರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.