ADVERTISEMENT

15 ದಿನಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ

ಅಧಿಕಾರಿಗಳ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 10:35 IST
Last Updated 13 ಜುಲೈ 2017, 10:35 IST
15 ದಿನಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ
15 ದಿನಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸಿ   

ಕೋಲಾರ: ‘ರಾಜ್ಯದ ಎಲ್ಲಾ ಇಲಾಖೆಗಳಲ್ಲೂ ಮುಂದಿನ 15 ದಿನದೊಳಗೆ ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆಯಾಗಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ಸರ್ಕಾರಿ ಇಲಾಖೆಗಳಲ್ಲಿ ಕನ್ನಡ ಅನುಷ್ಠಾನ ಸಂಬಂಧ ನಗರದಲ್ಲಿ ಬುಧವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ‘ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರ್ಕಾರದ ಯಾವುದೇ ಇಲಾಖೆಯಲ್ಲಿ ಕನ್ನಡ ವೆಬ್‌ಸೈಟ್‌ ಮತ್ತು ವಾಟ್ಸ್‌ಆ್ಯಪ್‌ ಬಳಕೆಯಾಗುತ್ತಿಲ್ಲ. ಸ್ಥಳೀಯವಾಗಿ ಜನರಿಗೆ ಹತ್ತಿರವಾಗಿರುವ ನಗರಸಭೆಗಳಲ್ಲೂ ಇಂಗ್ಲಿಷ್‌ ವೆಬ್‌ಸೈಟ್‌ ಬಳಕೆಯಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಒಳಗೊಂಡ ಜಾಗೃತಿ ಸಮಿತಿ ರಚಿಸಿ ಆಡಳಿತದಲ್ಲಿ ಕನ್ನಡದ ಅನುಷ್ಠಾನ ಎಷ್ಟರ ಮಟ್ಟಿಗೆ ಆಗಿದೆ ಎನ್ನುವುದರ ಬಗ್ಗೆ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಶೀಲನೆ ನಡೆಸಬೇಕು’ ಎಂದು ಸೂಚಿಸಿದರು.

ADVERTISEMENT

‘ಕಾರ್ಯ ಒತ್ತಡದಿಂದಾಗಿ ಕನ್ನಡ ಅನುಷ್ಠಾನ ಸಂಬಂಧ ಸಭೆಗಳನ್ನು ನಡೆಸಲು ಸಾಧ್ಯವಾಗಿಲ್ಲ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಹೇಳಿಕೆ ನೀಡಿದ್ದರಿಂದ ಸಿಡಿಮಿಡಿಯಾದ ಅಧ್ಯಕ್ಷರು, ‘ನೀವು ಆ ರೀತಿ ಹೇಳಬಾರದು. ಸಭೆ ನಡೆಸುವುದು ನಿಮ್ಮ ಕರ್ತವ್ಯ. ಜನರ ಭಾಷೆಯಲ್ಲಿ ಆಡಳಿತ ನಡೆಯಬೇಕು. ಸ್ಥಳೀಯ ಭಾಷೆಗೆ ಆದ್ಯತೆ ನೀಡಬೇಕು. ಅದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ’ ಎಂದರು.

ಎಲ್ಲರ ಹೊಣೆ: ‘ಪ್ರತಿ ಜಿಲ್ಲೆಗೂ ಒಂದೊಂದು ವಿಶಿಷ್ಟತೆ ಇದೆ. ಮಂಗಳೂರಿನದೆ ಬೇರೆ, ಕೋಲಾರದ್ದು ಬೇರೆ. ಈ ವಿಭಿನ್ನ ಸಂಸ್ಕೃತಿಯಲ್ಲಿ ಸ್ಥಳೀಯ ವಾತಾವರಣದ ಮೇಲೆ ಆಡಳಿತ ವ್ಯವಸ್ಥೆ ನಿಂತಿದೆ. ಬಹುಭಾಷಾ ಸಂಸ್ಕೃತಿಯಲ್ಲಿ ನಾಡಿನ ಭಾಷಾ ಸೊಗಡನ್ನು ಉಳಿಸಿಕೊಳ್ಳುವುದು ಎಲ್ಲರ ಹೊಣೆ’ ಎಂದು ಕಿವಿಮಾತು ಹೇಳಿದರು.

‘ಭಾಷೆಗೆ ಸಂಬಂಧಿಸಿದ ಸಭೆಗಳು ನಡೆಯುವಾಗ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಭಾಗವಹಿಸಬೇಕು. ಯಾರೂ ಸಭೆಯನ್ನು ಉಪೇಕ್ಷಿಸುವಂತಿಲ್ಲ. ಜತೆಗೆ ನಾಮಕಾವಸ್ಥೆಗೆ ಸಭೆಗೆ ಬಂದು ಹೋಗುವುದಲ್ಲ. ಮೇಲಾಧಿಕಾರಿಯ ಅನುಮತಿ ಇಲ್ಲದೆ ಸಭೆಗೆ ಗೈರಾಗುವಂತಿಲ್ಲ. ಇಂದಿನ ಸಭೆಗೆ ಗೈರಾಗಿರುವ ಗ್ರಂಥಾಲಯ, ಸಾರಿಗೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ’ ಎಂದು ಜಿಲ್ಲಾಧಿಕಾರಿಗೆ ಆದೇಶಿಸಿದರು.

ಪರವಾನಗಿ ರದ್ದುಪಡಿಸಿ: ‘ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಗಳಲ್ಲಿ ಭಾಷೆ ವಿಷಯವನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಕನ್ನಡ ಅನುಷ್ಠಾನಕ್ಕೆ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು. ಅಂಗಡಿ ಮುಂಗಟ್ಟುಗಳ ನಾಮಫಲಕಗಳು ಕನ್ನಡದಲ್ಲಿರಬೇಕು. ಕನ್ನಡ ಭಾಷೆಯಲ್ಲಿ ನಾಮಫಲಕ ಹಾಕದ ಅಂಗಡಿಗಳ ಪರವಾನಗಿ ರದ್ದುಪಡಿಸಿ. ಹೆದ್ದಾರಿಗಳಲ್ಲಿನ ಸೂಚನಾ ಫಲಕಗಳು ಕನ್ನಡದಲ್ಲಿರಬೇಕು’ ಎಂದು ತಿಳಿಸಿದರು.

ಸಾಮ್ರಾಜ್ಯ ಸೃಷ್ಟಿ: ಕೋಲಾರ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪೆನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದ ಬಗ್ಗೆ ಕಿಡಿಕಾರಿದ ಅಧ್ಯಕ್ಷರು, ‘ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ಭೂಮಿ ಕೊಡಬೇಕು. ಇಲ್ಲಿನ ನೆಲ, ಜಲ ಬಳಸಿಕೊಳ್ಳುವುದರ ಜತೆಗೆ ತೆರಿಗೆಯಲ್ಲೂ ವಿನಾಯಿತಿ ಪಡೆದಿರುವ ಕಂಪೆನಿಗಳು ಕನ್ನಡಿಗರಿಗೆ ಮೋಸ ಮಾಡುತ್ತಿವೆ. ಕನಿಷ್ಠ ಭದ್ರತಾ ಸಿಬ್ಬಂದಿ ಕೆಲಸ ಕೊಡದೆ ವಂಚಿಸುತ್ತಿವೆ. ಈ ಕಂಪೆನಿಗಳು ತಮ್ಮದೇ ಸಾಮ್ರಾಜ್ಯ ಸೃಷ್ಟಿಸಿಕೊಂಡಿವೆ’ ಎಂದರು.

‘ಅಧಿಕಾರಿಗಳು ಜಿಲ್ಲೆಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ನನಗೆ ಕೊಡಬೇಕು. ಕೈಗಾರಿಕೆಗಳು ತಮ್ಮ ಧೋರಣೆ ಬದಲಿಸಿಕೊಳ್ಳಬೇಕು. ಇಲ್ಲವಾದರೆ ಸ್ಥಳೀಯರು ಕಂಪೆನಿಗಳ ವಿರುದ್ಧ ತಿರುಗಿಬೀಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಕಾವೇರಿ, ಪ್ರಾಧಿಕಾರದ ಕಾರ್ಯದರ್ಶಿ ಕೆ. ಮುರಳೀಧರ್, ಸದಸ್ಯರಾದ ಪ್ರಭಾಕರ್ ಪಟೇಲ್, ಗಿರೀಶ್, ಕೆ. ಪುಟ್ಟಸ್ವಾಮಿ, ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.