ADVERTISEMENT

₹ 25 ಸಾವಿರ ಸಾಲ ಮನ್ನಾ: ರಾಜಣ್ಣ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 10:03 IST
Last Updated 7 ಏಪ್ರಿಲ್ 2017, 10:03 IST

ಕೊರಟಗೆರೆ: ರೈತರ ₹ 25 ಸಾವಿರವರೆಗಿನ ಸಾಲ ಮನ್ನಾ ಮಾಡುವ ಸಂಭವವಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.

ತಾಲ್ಲೂಕಿನ ಹೊಳವನಹಳ್ಳಿಯಲ್ಲಿ ಏಪ್ರಿಲ್ 10 ರಂದು ಉದ್ಘಾಟನೆಯಾಗಲಿರುವ ಡಿಸಿಸಿ ಬ್ಯಾಂಕ್ ನೂತನ ಶಾಖೆಯ ಕಟ್ಟಡ  ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದರು.

‘ಮುಂದಿನ ಸಲ ಚುನಾವಣೆ ಹತ್ತಿರ ಬಂದಾಗ ಸಾಲ ಮನ್ನಾ ಮಾಡುವ ಸಾಧ್ಯತೆ ಇದೆ. ಹೀಗಾಗಿ ಡಿಸಿಸಿ ಬ್ಯಾಂಕ್‌ನಲ್ಲಿ ರೈತರು ಸಾಲ ಪಡೆದು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ ಈ ಕಾರಣದಿಂದ ಅರ್ಹ ರೈತರನ್ನು ಗುರುತಿಸಿ ಅವರಿಗೆ ₹ 25 ಸಾವಿರ ಸಾಲ ನೀಡಲು ಕಾರ್ಯಕ್ರಮ ರೂಪಿಸಲಾಗಿದೆ. ಸರ್ಕಾರ 2012ರಲ್ಲಿ ₹ 25 ಸಾವಿರ ವರೆಗೆ ಸಾಲ ಮನ್ನಾ ಮಾಡಿತ್ತು’ ಎಂದು ನೆನಪು ಮಾಡಿಕೊಂಡರು.

‘ಹೊಳವನಹಳ್ಳಿ ನೂತನ ಶಾಖೆ ಏ.10 ರಂದು ಉದ್ಘಾಟನೆಯಾಗಲಿದೆ. ಈ ಶಾಖೆ ವ್ಯಾಪ್ತಿಯಲ್ಲಿ 71 ಗ್ರಾಮ ಒಳಪಡಲಿವೆ.  3672 ಕುಟುಂಬಗಳು ಸಾಲ ಪಡೆಯಬಹುದಾಗಿದೆ. ಈ ಶಾಖೆಯಲ್ಲಿ 5 ಪ್ರಾಥಮಿಕ ಸಹಕಾರ ಸಂಘಗಳು, 26 ಹಾಲು ಉತ್ಪಾದಕರ ಸಂಘಗಳು  ವ್ಯವಹರಿಸಲಿವೆ’ ಎಂದು ತಿಳಿಸಿದರು.

ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಬ್ಯಾಂಕ್‌ ನಿರ್ದೇಶಕ ಎಸ್.ಹನುಮಾನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಟಿ.ವಿ.ನರಸಿಂಹಮೂರ್ತಿ, ತೆಂಗು ನಾರು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜಿ. ವೆಂಕಟಾಚಲಯ್ಯ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಎಂ. ಸೈಯದ್ ರಿಯಾಸತ್ ಅಲಿ, ವ್ಯವಸ್ಥಾಪಕ ಜಿ. ಮಹೇಶ್ ಕುಮಾರ್, ಮೇಲ್ವಿಚಾರಕ ಜೆ. ಬೋರಣ್ಣ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.