ADVERTISEMENT

ವಚನ ಸಾಹಿತ್ಯ ಹುಲ್ಲಿನ ಬಣವೆ

ವಿಮರ್ಶಕ ವಿ.ಚಂದ್ರಶೇಖರ ನಂಗಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 11:39 IST
Last Updated 15 ಜನವರಿ 2018, 11:39 IST
ಕೋಲಾರದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್‌ನಿಂದ ಭಾನುವಾರ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಾಹಿತಿಗಳು ಪಾಲ್ಗೊಂಡಿದ್ದರು.
ಕೋಲಾರದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್‌ನಿಂದ ಭಾನುವಾರ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸಾಹಿತಿಗಳು ಪಾಲ್ಗೊಂಡಿದ್ದರು.   

ಕೋಲಾರ: ‘ವಚನ ಸಾಹಿತ್ಯ ದೊಡ್ಡ ಹುಲ್ಲಿನ ಬಣವೆ ಇದ್ದ ಹಾಗೆ. ಅದರಲ್ಲಿ ಸೂಜಿ ಹುಡುಕುವ ಪ್ರಯತ್ನದಲ್ಲಿ ಕೆಲ ಸಂಶೋಧಕರು ತಮಗೆ ಅನಿಸಿದ ಅಭಿಪ್ರಾಯಗಳನ್ನು ನೀಡುತ್ತಿರುವುದು ವಿಷಾದರ ಸಂಗತಿ’ ಎಂದು ವಿಮರ್ಶಕ ವಿ.ಚಂದ್ರಶೇಖರ ನಂಗಲಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಜಿಲ್ಲಾ ವಚನ ಸಾಹಿತ್ಯ ಪರಿಷತ್‌ನಿಂದ ಭಾನುವಾರ ನಡೆದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಚನಗಳಿಗೆ ಪ್ರಸ್ತುತ ಮೇಕಪ್‌ಗಳು ಹೆಚ್ಚಾಗಿದ್ದು, ವಚನಗಳ ನಿಜ ಮುಖಗಳು ಕಾಣದಾಗಿವೆ’ ಎಂದು ತಿಳಿಸಿದರು.

ADVERTISEMENT

‘ನಿರಂಕುಶಮತಿಯಿಂದ ಬಣವೆ ಪ್ರವೇಶಿಸಿದರೆ ಸೂಜಿ ಸಿಗುವುದರಲ್ಲಿ ಸಂಶಯವಿಲ್ಲ. ಅಂತಹ ನಿರಂಕುಶಮತಿಯರು ಎಲೆಮರೆಕಾಯಿ
ಯಂತೆ ಇಂದಿಗೂ ಇದ್ದರೂ ಅವರಿಗೆ ನಾಡಿನಾದ್ಯಂತ ಎಲ್ಲಿಯೂ ಗೌರವ ಸಿಗದಿರುವುದು ವಿಷಾದನೀಯ’ ಎಂದರು.

‘ಪಂಪ ಪ್ರಶಸ್ತಿಯನ್ನು ಜಿಲ್ಲೆಗೆ ತಂದುಕೊಟ್ಟ ಎಲ್.ಬಸವರಾಜು ಅವರು ಏನು ಮಾಡಿದ್ದಾರೆ ಎನ್ನುವ ವಿಚಾರವನ್ನು ಅರ್ಥಮಾಡಿಕೊಳ್ಳದವರು ಇದ್ದಾರೆ. ಹುಸಿ ವಚನಗಳು ಯಾವುದು ಎನ್ನುವುದೇ ಅರ್ಥವಾಗುತ್ತಿಲ್ಲ. ಹೀಗಾಗಿ ಅಂಕುಶಮತಿಗಳಿಂದ ಪಾರಾಗಿ ನಿರಂಕುಶಮತಿಗಳಾದರೆ ಮಾತ್ರವೇ ನಿಜ ವಚನಗಳನ್ನು ಅರಿಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

‘ಮೊದಲು ಹುಟ್ಟಿದ ಕವಿಗಿಂತ ತದ ನಂತರ ಹುಟ್ಟಿದ ಕವಿಗಳೇ ಜೋರಾಗಿರುತ್ತಾರೆ. ಹೀಗಾಗಿ ಯಾರೋಮಹಾನ್ ವ್ಯಕ್ತಿಗಳ ವಚನಗಳನ್ನು ತಿರುಚಿ ಬರೆಯುವವರದ್ದೇ ಕಾರು ಬಾರು ಜೋರಾಗಿರುತ್ತದೆ. ಮೂಲ ಮರೆಯಾಗುತ್ತದೆ’ ಎಂದು ವಿಷಾದಿಸಿದರು.

ಕಾಳಿನ ಸಾಹಿತ್ಯ ಸಂಗ್ರಹಿಸಿ: ‘ಕಣದ, ಸುಗ್ಗಿಯ ಹಬ್ಬ ಸಂಕ್ರಾಂತಿ. ಕಣದಲ್ಲಿ ರೈತ ಬೆಳೆಯನ್ನು ಒಕ್ಕಿದಾಗ ಜೆಳ್ಳು-ಕಾಳು ಎರಡೂ ಬೀಳುತ್ತವೆ. ಬಳಿಕ ಜೆಳ್ಳನ್ನು ತೂರಿ ಕಾಳನ್ನು ಸಂಗ್ರಹಿಸಿಕೊಳ್ಳುತ್ತಾನೆ. ಅಂತೆಯೇ ವಚನ ಸಾಹಿತ್ಯದಲ್ಲಿಯೂ ಜೆಳ್ಳು-ಕಾಳು ಎರಡೂ ಇದ್ದು, ಜೆಳ್ಳಿನ ಸಾಹಿತ್ಯ ತೂರಿ ಕಾಳಿನ ಸಾಹಿತ್ಯ ಸಂಗ್ರಹಿಸಿಕೊಳ್ಳಲು ನಿರಂಕುಶಮತಿಗಳಿಂದ ಮಾತ್ರ ಸಾಧ್ಯ’ ಎಂದರು.

‘ಬಸವಣ್ಣನವರು ವಚನಗಳನ್ನು ನೀಡಿ ಅವರು ಹಿಂದೆ ಉಳಿದರು. ಆದರೆ ಇಂದು ರಾಜಕಾರಣಿಗಳು, ಮಠಾಧೀಶರು ಮುಂದೆ ಇದ್ದಾರೆ. ಹೀಗಾಗಿ ವಚನಗಳ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸಿ ಶುದ್ಧರೂಪದ ವಚನಗಳನ್ನು ಭಾಷಾಂತರಿಸಬೇಕಿದೆ’ ಎಂದು ಸಾಹಿತಿ ಸ.ರಘುನಾಥ್ ಹೇಳಿದರು.

ವಚನ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ.ತ್ಯಾಗರಾಜು ಮಾತನಾಡಿ, ‘ವಚನ ಸಾಹಿತ್ಯವು ಶೋಷಿತರು, ಅನಕ್ಷರಸ್ಥರಿಂದ ಹುಟ್ಟಿದ ಮೇರು ಸಾಹಿತ್ಯವಾಗಿದೆ. ಸದ್ಯ ಎಡ-ಬಲ ಎನ್ನುವ ಕಿತ್ತಾಟದಲ್ಲಿ ಸಾಹಿತ್ಯ ಸೊರಗುತ್ತಿದ್ದು, ಯುವ ಸಾಹಿತಿಗಳು ದಿಕ್ಕಾಪಾಲಾಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನಿಜವಾದ ಸಾಹಿತಿಗಳಿಗೆ ಆದ್ಯತೆ ಸಿಗುತ್ತಿಲ್ಲ. 15 ದಿನ ಕಚೆರಿಗೆ ಓಡಾಡಿದರೆ ಸಾಕು ಸಾಹಿತ್ಯ ಕೃಷಿ ಇಲ್ಲದಿದ್ದರೂ, ಪ್ರಶಸ್ತಿ, ಸನ್ಮಾನ ಸಿಗುತ್ತದೆ. ಈ ಸ್ಥಿತಿ ಬದಲಾಗಬೇಕು ಇಲ್ಲದಿದ್ದರೆ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹಾಗೇನು ಆಗಿಲ್ಲ: ವಚನ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಎಂ.ವಿ.ತ್ಯಾಗರಾಜ್ ಭಾಷಣದಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಅಸಮಧಾನ ವ್ಯಕ್ತಪಡಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್, ‘ಈ ಪರಿಸ್ಥಿತಿ ಬೇರೆ ಎಲ್ಲೂ ಇಲ್ಲವೇ. ಕನ್ನಡ ಸಾಹಿತ್ಯ ಪರಿಷತ್ತನ್ನೇ ಉದಾಹರಿಸುತ್ತಿದ್ದೀರಿ, ನಮ್ಮಲ್ಲಿ ಹಾಗೇನು ಆಗಿಲ್ಲ’ ಎಂದು ತಿರುಗೇಟು ನೀಡಿದರು.

ಪರಿಷತ್ತಿನ ರಾಜ್ಯ ಘಟಕದ ಕಾರ್ಯದರ್ಶಿ ದೇವರಾಜ್, ಜಿಲ್ಲಾ ಘಟಕದ ಅಧ್ಯಕ್ಷ ಡಾ.ನಾ.ಮುನಿರಾಜು, ಉಪಾಧ್ಯಕ್ಷ ಕೆ.ಪಿ.ಮೋಹನ್, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಜೆ.ಜಿ.ನಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.