ADVERTISEMENT

ಅಂಜನಾದ್ರಿಯಲ್ಲಿ ಪೂಜೆ ವಿವಾದ

ಅಂಜನಾದ್ರಿಯಲ್ಲಿ ಪೂಜೆ ವಿವಾದ

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 9:20 IST
Last Updated 14 ಜನವರಿ 2017, 9:20 IST
ಗಂಗಾವತಿ: ತಾಲ್ಲೂಕಿನ ಐತಿಹಾಸಿಕ ಹಾಗೂ ಪೌರಾಣಿಕೆ ಹಿನ್ನೆಲೆ ಹೊಂದಿರುವ ಅಂಜನಾದ್ರಿ ಬೆಟ್ಟದಲ್ಲಿ ಈಗ ಪೂಜೆಯ ವಿವಾದ ತಲೆದೋರಿದೆ. ವಿದ್ಯಾದಾಸ ಬಾಬಾ ಹಾಗೂ ತುಳಸಿ ಬಾಬಾ ಅವರ ಮಧ್ಯೆ ವಿವಾದ ಏರ್ಪಟ್ಟಿದ್ದು ಭಕ್ತರಲ್ಲಿ ಗೊಂದಲ ಮೂಡಿಸಿದೆ. 
 
ಆನೆಗೊಂದಿ ರಾಜ ಮನೆತನದವರ ನೇತೃತ್ವದಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ರಚಿಸಲಾಗಿದ್ದು, ಅಂಜನಾದ್ರಿ ಬೆಟ್ಟದ ಪೂಜಾ ಕೈಂಕರ್ಯಕ್ಕೆ ತುಳಸಿದಾಸ ಅವರನ್ನು ಮುಂದುವರಿಸಲು ಸಮಿತಿ ಉತ್ಸುಕವಾಗಿದೆ. 
 
ಆದರೆ ಕಳೆದ ಹತ್ತು ವರ್ಷದಿಂದ ಪೂಜೆ ಸೇರಿದಂತೆ ಬೆಟ್ಟವನ್ನು ಅಭಿವೃದ್ಧಿ ಪಡಿಸುವ ಮೂಲಕ ವಿದ್ಯಾದಾಸ ಬಾಬಾ, ರಾಜ್ಯದ ಪ್ರಸಿದ್ಧ ಯಾತ್ರಾಸ್ಥಳಗಳ ಪೈಕಿ ಅಂಜನಾದ್ರಿ ಬೆಟ್ಟವನ್ನು ಮುಂಚೋಣಿ ಸ್ಥಾನಕ್ಕೆ ತಂದು ನಿಲ್ಲಿಸಿದ್ದಾರೆ ಎಂದು ಭಕ್ತರು ಹೇಳುತ್ತಾರೆ. 
 
ಪೂಜೆಯ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ತುಳಸಿದಾಸ ಬಾಬಾ ನೇತೃತ್ವದಲ್ಲಿನ ದಾವೆಯನ್ನು ಸ್ಥಳೀಯ ನ್ಯಾಯಾಲಯ ವಜಾಗೊಳಿಸಿ ವಿದ್ಯಾದಾಸ ಬಾಬಾ ಅವರ ಅರ್ಜಿಯನ್ನು ಎತ್ತಿ ಹಿಡಿದಿದೆ. 
 
ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತುಳಸಿದಾಸ ಬಾಬಾ ಧಾರವಾಡದ ಸಂಚಾರಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. 
ಈ ಮಧ್ಯೆ ಅಂಜನಾದ್ರಿ ಬೆಟ್ಟದಲ್ಲಿ ಎರಡು ಗುಂಪಿನ ಭಕ್ತರ ಮಧ್ಯೆ ಶುಕ್ರವಾರ ವಿವಾದ ತಲೆದೋರಿದೆ.
 
ವಯೋಸಹಜ ಸ್ಥಿತಿಯಿಂದಾಗಿ ನಿಶಕ್ತರಾಗಿರುವ ತುಳಸಿದಾಸ ಬಾಬಾ, ದೇವಾಲಯದಲ್ಲಿ ಆಶ್ರಯ ನೀಡುವಂತೆ ಸಮಿತಿಯನ್ನು ಕೋರಿದ್ದಾರೆ. 
ಸಮಿತಿ ಸದಸ್ಯರು ಬೆಟ್ಟದ ಮೆಟ್ಟಿಲು ಬಳಿ ಇರುವ ಕಾರ್ಯಾಲಯದ ಬೀಗವನ್ನು ಅನಧಿಕೃತವಾಗಿ ಮುರಿದು ಬಾಬಾಗೆ ಆಶ್ರಯ ನೀಡಿದ್ದಾರೆ’ ಎಂದು ವಿದ್ಯಾದಾಸ ಬಾಬಾ ಬೆಂಬಲಿಗರು ಆರೋಪಿಸಿದ್ದಾರೆ. 
ಈ ಸಂಬಂಧ ತುಳಸಿದಾಸ ಬಾಬಾ ಅವರನ್ನು ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಸಮಿತಿ ಕಾರ್ಯವನ್ನು ಆಕ್ಷೇಪಿಸಿ ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ವಿದ್ಯಾದಾಸ ಬಾಬಾ ಶುಕ್ರವಾರ ಗ್ರಾಮೀಣ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 
 
‘ದೇವಸ್ಥಾನ ಅಭಿವೃದ್ಧಿ ಪಡಿಸಿ ದೇಶದಾದ್ಯಂತ ಪ್ರಚಾರ ಪಡಿಸಿದ ಬಳಿಕ ಈಗ ಸಮಿತಿಯವರು ತುಳಸಿದಾಸ ಬಾಬಾ ಅವರನ್ನು ವಿನಾಕಾರಣ ದೇವಸ್ಥಾನದಲ್ಲಿ ಪ್ರವೇಶಿಸುವಂತೆ ಒತ್ತಾಯಿಸುವ ಮೂಲಕ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ವಿದ್ಯಾದಾಸ ಬಾಬಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
 
ಆಂಜನೇಯನ ಜನ್ಮ ಸ್ಥಾನ ಎಂದು ಕರೆಯಲ್ಪಡುವ ಅಂಜನಾದ್ರಿ ಬೆಟ್ಟ ಇತ್ತೀಚಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ. ವಿದೇಶಿಯರು ಇಲ್ಲಿಗೆ ಬಂದು ಹೋಮ–ಹವನ ಮಾಡುತ್ತಾರೆ.
 
**
 ವಿವಾದ ಸೌಹಾರ್ದ ಇತ್ಯರ್ಥಕ್ಕೆ ಉಭಯ ಅರ್ಚಕರು ಸಮ್ಮತಿಸಬೇಕು. ಇಲ್ಲವಾದಲ್ಲಿ ಇಬ್ಬರನ್ನೂ ದೂರವಿಟ್ಟು ಸ್ಥಳೀಯ ಅರ್ಚಕರ ಮೂಲಕ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲು ಚಿಂತನೆ ನಡೆಸಲಾಗುವುದು 
–ಮಹೇಶ ಸಾಗರ , ಅಂಜನಾದ್ರಿಯ ಭಕ್ತ
 
**
ಎಂ.ಜೆ. ಶ್ರೀನಿವಾಸ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.