ADVERTISEMENT

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 9:42 IST
Last Updated 25 ಡಿಸೆಂಬರ್ 2017, 9:42 IST

ಹನುಮಸಾಗರ: ‘ರಾಜ್ಯದಲ್ಲಿ ಮಕ್ಕಳ ಮೇಲೆ ನಿರಂತರವಾಗಿ ಅತ್ಯಾಚಾರದಂತಹ ಪ್ರಕರಣ ಹೆಚ್ಚುತ್ತಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ, ಇಂತಹ ಪ್ರಕರಣಗಳು ನಡೆಯದಂತೆ ಸರ್ಕಾರ ಕಠಿಣ ಶಿಕ್ಷೆ ಜಾರಿಗೆ ತರಬೇಕು’ ಎಂದು ಮುಖಂಡ ಸೂಚಪ್ಪ ಭೋವಿ ಸರ್ಕಾರವನ್ನು ಒತ್ತಾಯಿಸಿದರು.

ವಿಜಯಪುರ ಜಿಲ್ಲೆಯಲ್ಲಿನ ಶಾಲಾ ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಭಾನುವಾರ ಇಲ್ಲಿನ ಜೈಭೀಮ ಅಸೋಸಿಯೇಷನ್‌, ಮಾದಿಗರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಹೋಬಳಿ ಘಟಕದ ಅಧ್ಯಕ್ಷ ಹನುಮಂತ ಪೂಜಾರ ಮಾತನಾಡಿ, ‘ಇಂತಹ ಹೀನಕೃತ್ಯಗಳಿಂದಾಗಿ ಇಂದು ದಲಿತ ಬಾಲಕಿಯರು ಶಿಕ್ಷಣದಿಂದ ವಂಚಿತವಾಗುವಂತಾಗಿದೆ. ಜನರಲ್ಲಿ ಭಯ ಮೂಡಿದೆ. ಈ ನೀಚ ಕೃತ್ಯದಲ್ಲಿ ಭಾಗಿಯಾದವರನ್ನು ಗಲ್ಲುಶಿಕ್ಷೆಗೆ ಗುರಿಪಡಿಸಿದಾಗ ಮಾತ್ರ ಸಮಾಜದಲ್ಲಿ ಇಂತಹ ಪ್ರಕರಣಗಳು ನಡೆಯುವುದು ಕಡಿಮೆಯಾಗುತ್ತವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಗಾಂಧಿ ವೃತ್ತದ ಬಳಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಿದರು. ಬಳಿಕ ಉಪತಹಶೀಲ್ದಾರ ಕಚೇರಿಗೆ ತೆರಳಿ ಕಂದಾಯ ಇಲಾಖೆಯ ಶಿರಸ್ತೇದಾರರಿಗೆ ಮನವಿ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ ವಡ್ಡರ, ಚಂದ್ರು ಹಿರೇಮನಿ, ಜಿಲ್ಲಾ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ನಾಗಪ್ಪ ಹಿರೇಮನಿ, ಉಪಾಧ್ಯಕ್ಷ ನೀಲಪ್ಪ ಕುದರಿ, ಕಾರ್ಯದರ್ಶಿ ಚಂದ್ರಶೇಖರ ಪೂಜಾರ, ಚಂದಪ್ಪ ಕುದರಿ, ರಮೇಶ ಬಡಿಗೇರ, ವಸಂತ ಕಟ್ಟಿಮನಿ, ವಾಲ್ಮೀಕಿ ಸಮಾಜದ ಮುಖಂಡ ನಾಗರಾಜ ಕಂದಗಲ್‌, ಯಮನೂರ ಇಲಕಲ್‌, ಹನುಮಂತ ಕಟ್ಟಿಮನಿ, ದುರಗಪ್ಪ ಮಡಿವಾಳರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.