ADVERTISEMENT

ಆಯೋಗದ ವರದಿ ಜಾರಿಗೆ ವಿರೋಧ

ಮೀಸಲಾತಿ ಮರುಹಂಚಿಕೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ: ತಂಗಡಗಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2017, 9:56 IST
Last Updated 24 ಜನವರಿ 2017, 9:56 IST
ಆಯೋಗದ ವರದಿ ಜಾರಿಗೆ ವಿರೋಧ
ಆಯೋಗದ ವರದಿ ಜಾರಿಗೆ ವಿರೋಧ   

ಕೊಪ್ಪಳ: ಮೀಸಲಾತಿಯನ್ನು ಹಂಚಿಕೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿ ವಿರೋಧಿಸಿ ಸೋಮವಾರ ನಗರದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ನ್ಯಾ.ಸದಾಶಿವ ಆಯೋಗದ ವರದಿಯನ್ನು ತಿರುಚಿ, ಪರಿಶಿಷ್ಟ ಜಾತಿಗಳಲ್ಲಿ ಒಳಜಗಳ ಹಚ್ಚುವ ಕೆಲಸ ನಡೆಯುತ್ತಿದೆ. ವರದಿ ಜಾರಿಯಾದರೆ ಭೋವಿ, ಬಂಜಾರ ಸೇರಿದಂತೆ 100 ಸಮುದಾಯಗಳಿಗೆ ಅನ್ಯಾಯವಾಗಲಿದೆ.

ಕೇವಲ ಒಂದು ಸಮುದಾಯದ ಹಿತಕ್ಕಾಗಿ ಉಳಿದ 100 ಸಮುದಾಯಗಳನ್ನು ಹತ್ತಿಕ್ಕುವುದು ಸರಿಯಲ್ಲ ಎಂದು ಹೇಳಿದರು. ಎಲ್ಲ ಸಮುದಾಯಗಳಲ್ಲಿ ಬೆರಳೆಣಿಕೆ ಶ್ರೀಮಂತರಿದ್ದಾರೆ. ಅಂತಹವರನ್ನು ನೋಡಿ ವರದಿ ತಯಾರಿಸುವುದು ವೈಜ್ಞಾನಿಕ ಕ್ರಮವಲ್ಲ. ನಮಗಿನ್ನೂ ಮೀಸಲಾತಿ ಅವಶ್ಯಕತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವರದಿ ಪರಿಶಿಲಿಸುತ್ತೇನೆ ಎಂದಿದ್ದಾರೆಯೇ ಹೊರತು ಜಾರಿ ಮಾಡುವುದಾಗಿ ಹೇಳಿಲ್ಲ. ನಮ್ಮ ಹೋರಾಟ ಸರ್ಕಾರದ ವಿರುದ್ಧ ಅಲ್ಲ. ವರದಿ ಜಾರಿ ವಿರುದ್ಧ. ಯಾವುದೇ ಕಾರಣಕ್ಕೂ ನಾವು ವರದಿ ಜಾರಿಗೆ ಬಿಡುವುದಿಲ್ಲ. ಫೆಬ್ರುವರಿಯಲ್ಲಿ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮಾಜಿ ಸಚಿವ ರೇವುನಾಯಕ ಬೆಳಮಗಿ, ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಮುಕುಂದರಾವ್‌ ಭವಾನಿಮಠ ಮಾತನಾಡಿದರು. ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಬಂಜಾರ ಸಮುದಾಯದ ಬಳಿರಾಮ್ ಮಹಾರಾಜ, ದೇಶಿಕೇಂದ್ರ ವೃಷಬೇಂದ್ರ ಸ್ವಾಮೀಜಿ, ರಾಜ್ಯ ಭೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಾಧ್ಯಕ್ಷ ರವಿ ಮಾಕಳೆ, ಭರತ್ ನಾಯ್ಕ ಇದ್ದರು. 

ವರದಿ ಜಾರಿಗೆ ವಿರೋಧಿಸಿ ನಗರದ ಸಾರ್ವಜನಿಕ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭೋವಿ, ಬಂಜಾರ, ಸುಡುಗಾಡು ಸಿದ್ಧರು, ಹಗಲು ವೇಷಗಾರ ಸಮುದಾಯದ ಜನತೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.