ADVERTISEMENT

‘ಆರ್ಥಿಕ ಲಾಭಕ್ಕೆ ಸಿರಿಧಾನ್ಯ ಬೆಳೆಯಿರಿ’

ಆತ್ಮ ಯೋಜನೆ ಅಡಿ ನಡೆದ ಸಿರಿಧಾನ್ಯ ಕಿಸಾನ್ ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 8:32 IST
Last Updated 20 ಜುಲೈ 2017, 8:32 IST

ಹನುಮಸಾಗರ: ರೈತರು ಸಿರಿಧಾನ್ಯ ಬೆಳೆದು ಆರ್ಥಿಕವಾಗಿ ಲಾಭ ಗಳಿಸಬಹುದು. ಜತೆಗೆ ಆರೋಗ್ಯಕರ ಬದುಕಿಗೂ ಸಿರಿಧಾನ್ಯ ಪೂರಕವಾಗಿದೆ ಎಂದು ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಮುಂದಾಳು ಡಾ.ಎಂ.ಬಿ.ಪಾಟೀಲ ತಿಳಿಸಿದರು.

ಮಂಗಳವಾರ ಸಮೀಪದ ಪುರ್ತಗೇರಿ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಕೃಷಿ ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ಆತ್ಮ ಯೋಜನೆ ಅಡಿ ನಡೆದ ಸಿರಿಧಾನ್ಯ ಕಿಸಾನ್ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕಡಿಮೆ ನೀರು, ಕೊಟ್ಟಿಗೆ ಗೊಬ್ಬರ ಬಳಸಿ  ಸಿರಿಧಾನ್ಯಗಳಾದ ನವಣೆ, ರಾಗಿ ಮತ್ತು ಸಾವೆ ಬೆಳೆಯಬಹುದು. ಈ ಭಾಗದ ಮಳೆಯ ಪ್ರಮಾಣ, ಹವಾಮಾನ, ಮಣ್ಣು ಇಂತಹ ಬೆಳೆಗಳಿಗೆ ಹೆಚ್ಚು ಸೂಕ್ತವಾಗಿವೆ. ಅಧಿಕ ಖರ್ಚು ಮಾಡುವ ಹಾಗೂ ರಸಗೊಬ್ಬರ ಸುರಿಯುವ ಅವಶ್ಯಕತೆಯೂ ಇಲ್ಲ’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕಮತರ ಮಾತನಾಡಿ, ‘ಸಿರಿಧಾನ್ಯ ಬೆಳೆಗಳು ತಾಪಮಾನ ವೈಪರಿತ್ಯ ಸಹಿಷ್ಣುತೆ ಹೊಂದಿವೆ.  ಕಡಿಮೆ ತೇವಾಂಶದಲ್ಲಿ ಉತ್ತಮ ಇಳುವರಿ ಕೊಡಬಲ್ಲ, ಪರಿಸರ ಮಿತ್ರ ಬೆಳೆಗಳಾಗಿವೆ. ಕೀಟ ಮತ್ತು ರೋಗ ಸಮಸ್ಯೆ ಕಡಿಮೆ ಇದ್ದು ಸಾವಯವ ಕೃಷಿಗೆ ಸೂಕ್ತವಾಗಿವೆ. ರಾಗಿ,  ನವಣೆ, ಹಾರಕ, ಊದಲು ಮುಂತಾದವು ಈ ವರ್ಗಕ್ಕೆ ಸೇರಿದವುಗಳಾಗಿವೆ’ ಎಂದು ಹೇಳಿದರು.

ಜಿಲ್ಲಾ ಆಹಾರ ಭದ್ರತಾ ಸಲಹೆಗಾರ ಎಸ್.ಬಿ.ಕೋಣಿ ಮಾತನಾಡಿ, ‘ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದಕ್ಕಾಗಿ ವಿಶೇಷ ಪ್ಯಾಕೇಜ್‌ಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ ಕುಂಟನಗೌಡರ್ ಹಾಗೂ ಶೈಲಜಾ ಕರಪಡೆ ಗೋಷ್ಠಿ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಧ್ಯಕ್ಷತೆ ಮಹಾದೇವಿ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಅಂಟರಠಾಣ, ಪುರ್ತಗೇರಿ, ಹೂಲಗೇರಿ, ಹನುಮಸಾಗರ ಭಾಗದ ನೂರಾರು ರೈತರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಸಂದೇಹಗಳಿಗೆ ಉತ್ತರ ಪಡೆದುಕೊಂಡರು. ಸಹಾಯಕ ಕೃಷಿ ಅಧಿಕಾರಿಗಳಾದ ಅರುಣ ಕ್ಯಾಲಕೊಂಡ, ಸಿ.ಕೆ.ಕಮ್ಮಾರ. ಕೆ.ಆರ್‌.ಭಜಂತ್ರಿ, ಕೃಷಿ ಇಲಾಖಾ ಆತ್ಮ ಯೋಜನೆಯ ಸಿಬ್ಬಂದಿ, ರೈತ ಸಂಪರ್ಕ ಕೇಂದ್ರದ ಸಿಬ್ಬಂದಿ, ಅನವುಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.