ADVERTISEMENT

ಎಡೆಬಿಡದೇ ಸುರಿದ ಮಳೆಗೆ ಹಲವಡೆ ಹಾನಿ

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:29 IST
Last Updated 16 ಮೇ 2017, 9:29 IST

ಗಂಗಾವತಿ: ನಗರದಲ್ಲಿ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೂ ಎಡೆಬಿಡದೇ ಸುರಿದ ಭಾರಿ ಮಳೆಗೆ ಜನ ಕಂಗಾಲಾದರು. ಬೈಪಾಸ್ ರಸ್ತೆಯಲ್ಲಿ ಅಪಾರ ಪ್ರಮಾಣ ಮಳೆ ನೀರು ಹರಿದ ಬಂದಿದ್ದರಿಂದ ರಸ್ತೆ ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು.

ಮಹೆಬೂಬನಗರ, ಕಿಲ್ಲಾ ಪ್ರದೇಶ, ಎಚ್.ಆರ್.ಎಸ್. ಕಾಲೋನಿ, ಅಂಗಡಿಸಂಗಣ್ಣ ಕ್ಯಾಂಪ್, ಮುಜಾವರ ಕ್ಯಾಂಪ್, ಭಗತ್‌ಸಿಂಗ್‌ ನಗರ, ಇಸ್ಲಾಂಪುರ, ಹಮಾಲರ ಕಾಲೊನಿಯ ತಗ್ಗು ಪ್ರದೇಶಕ್ಕೆ ಮಳೆ ನೀರು ನುಗ್ಗಿದ್ದರಿಂದ ಜನ ಸುರಕ್ಷಿತ ಪ್ರದೇಶಕ್ಕೆ ತೆರಳಲು ಪರದಾಡಿದರು.

ಮಹೆಬೂನಗರದಲ್ಲಿ ಜಿಲಾನ್ ಎಂಬ ವ್ಯಕ್ತಿಗೆ ಸೇರಿದ್ದ ಗುಡಿಸಲು ಕುಸಿದು ಬಿದ್ದು, ಗೃಹಬಳಕೆ ವಸ್ತುಗಳು ಹಾಳಾಗಿವೆ. ಮಳೆ ಬರುತ್ತಿದ್ದ ಹಿನ್ನೆಲೆ ಕುಟುಂಬದ ಮೂವರು ಸದಸ್ಯರು  ಅದೃಷ್ಟವಶಾತ್ ಸುರಕ್ಷಿತ ಪ್ರದೇಶಕ್ಕೆ ತೆರಳಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಓಣಿಯ ನಿವಾಸಿ ಫೈಜಲ್ ತಿಳಿಸಿದ್ದಾರೆ.

ADVERTISEMENT

ನಗರದ ಬಹುತೇಕ ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡಿತ್ತು. ಬೆಳಗ್ಗೆ ನಗರಸಭೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೀರು ಮಳೆ ನೀರನ್ನು ಚರಂಡಿ ಮೂಲಕ ಸರಾಗವಾಗಿ ಹರಿದು ಹೋಗುವಂತೆ ಮಾಡಿದರು. ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. 

ಉತ್ತಮ ಮಳೆಗೆ ರೈತರ ಹರ್ಷ (ಕನಕಗಿರಿ ವರದಿ): ಪಟ್ಟಣ ಸೇರಿದಂತೆ ಸುತ್ತಮುತ್ತಲಿನ  ಅನೇಕ ಗ್ರಾಮಗಳಲ್ಲಿ ಭಾನುವಾರ ಸಂಜೆ ಉತ್ತಮ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಸಮೀಪದ ಕಲಕೇರಿ, ಜೀರಾಳ, ಸಿಂಗನಾಳ, ಹುಲಿಹೈದರ, ವಡಕಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆ ಬಿದ್ದಿದೆ. ಸುಡುವ ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ವರುಣನ ಕೃಪೆ ಸಂತಸ ಮೂಡಿಸಿದೆ. ಮಳೆಯ ಹೊಡೆತಕ್ಕೆ ಬೆನಕನಾಳ ಗ್ರಾಮದಲ್ಲಿನ ಚೆಕ್‌ ಡ್ಯಾಂ ತುಂಬಿ ಹರಿಯುತ್ತಿದೆ.

ಹುಲಿಹೈದರ ಗ್ರಾಮದಲ್ಲಿ ರಭಸವಾದ ಬೀಸಿದ ಗಾಳಿಗೆ ಗೋ ಶಾಲೆಗೆ ಹಾಕಿದ್ದ ಶೆಡ್‌ ಕಿತ್ತು  ಹೋಗಿದೆ. ಶೆಡ್‌ ಹಾನಿಯಾದ ಬಗ್ಗೆ ತಹಶೀಲ್ದಾರ್ ಅವರಿಗೆ ಸಿಬ್ಬಂದಿ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಿದ್ದಪ್ಪ ಭೇಟಿ ನೀಡಿ ಪರಿಶೀಲಿಸಿದರು.ಜೀರಾಳ, ಬೆನಕನಾಳ, ಕಲಕೇರಿ ಗ್ರಾಮಗಳ ಹೊಲಗಳಲ್ಲಿ ಮಳೆ ನೀರು ನಿಂತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.