ADVERTISEMENT

ಎಪಿಎಂಸಿ ಚುನಾವಣೆ ಬಹಿಷ್ಕಾರ: ನಿರ್ಧಾರ

ವಿಠಲಾಪುರ ಗ್ರಾಮದ ಮಾರುತೇಶ್ವರ ಕೆರೆ ಅಭಿವೃದ್ಧಿ ಸೇವಾ ಸಮಿತಿ ನೇತೃತ್ವ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:24 IST
Last Updated 5 ಜನವರಿ 2017, 9:24 IST

ಗಂಗಾವತಿ: ಕೆರೆ ತುಂಬಿಸುವ ಯೋಜನೆಯ ಅಸಮರ್ಪಕ ಅನುಷ್ಠಾನ ವಿರೋಧಿಸಿ ಈ ಬಾರಿಯ ಎಪಿಎಂಸಿ ಚುನಾವಣೆ ಬಹಿಷ್ಕರಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಾಲ್ಲೂಕಿನ ವಿಠಲಾಪುರ ಗ್ರಾಮದ ರೈತರು ತಿಳಿಸಿದರು.

ತಾಲ್ಲೂಕಿನ ವಿಠಲಾಪುರ ಗ್ರಾಮದ ಮಾರುತೇಶ್ವರ ಕೆರೆ ಅಭಿವೃದ್ಧಿ ಸೇವಾ ಸಮಿತಿ ನೇತೃತ್ವದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ರೈತರು ಬಳಿಕ ತಹಶೀಲ್ದಾರ್ ಕಚೇರಿಯಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ  ಮನವಿ ಸಲ್ಲಿಸಿದರು. ಕೆರೆ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಗುಂಡಪ್ಪ ಬಡಗಿ ಮಾತನಾಡಿ, ತಾಲ್ಲೂಕಿನ ಎಂಟು ಕೆರೆಗಳ ಅಭಿವೃದ್ಧಿ ಯೋಜನೆ ಸಿದ್ಧಪಡಿಸಲಾಗಿತ್ತು.

ಆದರೆ ಕನಕಗಿರಿ ಕ್ಷೇತ್ರದ ಏಳು ಕೆರೆ ತುಂಬಿಸಲಾಗಿದೆ. ಆದರೆ ಗಂಗಾವತಿ ಕ್ಷೇತ್ರದ ಒಂದು ಕೆರೆ ತುಂಬಿಸಿಲ್ಲ’ ಎಂದರು. ‘ಶಾಸಕ ಶಿವರಾಜ ತಂಗಡಗಿ ತಮ್ಮ ಕ್ಷೇತ್ರದ ಕೆರೆಗಳನ್ನು ಮಾತ್ರ ತುಂಬಿಸುವ ಮೂಲಕ ಸ್ವಾರ್ಥ ಮೆರೆದಿದ್ದಾರೆ. ಯೋಜನೆ ರಾಜಕೀಯ ಪ್ರೇರಿತವಾಗಿದ್ದು, ಈ ಬಗ್ಗೆ ಸ್ಥಳೀಯ ಶಾಸಕ ಇಕ್ಬಾಲ್ ಅನ್ಸಾರಿ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಕೇವಲ ಐದು ಕಿ.ಮೀ. ಅಂತರದ ಕೆರೆ ತುಂಬಿಸಿಲ್ಲ. ಆದರೆ 17ರಿಂದ 23 ಕಿ.ಮೀ. ಅಂತರದ ಕೆರೆಗಳನ್ನು ತುಂಬಿಸಲಾಗಿದೆ. ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಲು ಗಂಗಾವತಿ ಎಪಿಎಂಸಿಯ ಚುನಾವಣೆ ಬಹಿಷ್ಕಾರದ ನಿರ್ಣಯ ಕೈಗೊಳ್ಳಲಾಗಿದೆ’ ಎಂದರು.

ರೈತ ಮುಖಂಡರಾದ ಎಂ. ಖಾದರಸಾಬ್, ಸತ್ಯನಾರಾಯಣ, ರಾಮಣ್ಣ ಅಂಗಡಿ, ವೆಂಕೋಬ ಜಾಧವ,  ಅಮರೇಶ ಮೆತಗಲ್, ನಾಗರಾಜ ಹೊಸಗುಡ್ಡ, ದುರುಗಪ್ಪ ವಟಲಪರವಿ, ದೊಡ್ಡಬಸವ, ಚಿದಾನಂದ ಪತ್ತಾರ, ಗುಂಡಪ್ಪ ನಿಲೋಗಲ್, ದೊಡ್ಡ ವಿರುಪಾಕ್ಷಿ, ಪರಶುರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.