ADVERTISEMENT

ಏತ ನೀರಾವರಿ ಶೀಘ್ರ ಪೂರ್ಣ: ಪಾಟೀಲ

ಅಳವಂಡಿ – ಬೆಟಗೇರಿ ಏತನೀರಾವರಿ ಯೋಜನೆಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 6:15 IST
Last Updated 11 ಮಾರ್ಚ್ 2017, 6:15 IST
ಏತ ನೀರಾವರಿ ಶೀಘ್ರ ಪೂರ್ಣ: ಪಾಟೀಲ
ಏತ ನೀರಾವರಿ ಶೀಘ್ರ ಪೂರ್ಣ: ಪಾಟೀಲ   
ಕೊಪ್ಪಳ: ಅಳವಂಡಿ ಬೆಟಗೇರಿ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನು ಮೂರರಿಂದ ನಾಲ್ಕು ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಗೊಂಡು ಸುಮಾರು 6 ಸಾವಿರ ಎಕರೆ ಪ್ರದೇಶಕ್ಕೆ ನೀರುಣಿಸಲಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು. 
 
ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಶುಕ್ರವಾರ ₹ 87 ಕೋಟಿ ವೆಚ್ಚದ ಅಳವಂಡಿ– ಬೆಟಗೇರಿ ಏತನೀರಾವರಿ ಯೋಜನೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. 
 
ಈ ಯೋಜನೆಗೆ ಹಿಂದಿನ ಸರ್ಕಾರಗಳು ಹಲವು ಬಾರಿ ಶಂಕುಸ್ಥಾಪನೆ ಮಾಡಿ ಹೋಗಿವೆ. ಆದರೆ, ಅದು ಅನುಷ್ಠಾನಕ್ಕೆ ಬರಲು 60 ವರ್ಷ ಬೇಕಾಯಿತು.  ಮುಂದಿನ ವರ್ಷದೊಳಗೆ ಈ ಯೋಜನೆಯನ್ನು ನಿರ್ಣಾಯಕ ಹಂತಕ್ಕೆ ತಲುಪಿಸಬೇಕು ಎಂದು ಕಾಮಗಾರಿ ಗುತ್ತಿಗೆದಾರರಿಗೆ ತಾಕೀತು ಮಾಡಿದರು. 
 
ತಾಲ್ಲೂಕಿನಲ್ಲಿ ಬಹದ್ದೂರ್‌ಬಂಡಿ ಏತ ನೀರಾವರಿ ಯೋಜನೆಗಯನ್ನು ₹ 188 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.  ನಾಲ್ಕು ತಿಂಗಳಲ್ಲಿ ಅದರ ಕಾಮಗಾರಿ ಆರಂಭಿಸಲಾಗುವುದು. ಈ ಯೋಜನೆಯಿಂದ 12 ಸಾವಿರ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ. ಸಿಂಗಟಾಲೂರು ಏತ ನೀರಾವರಿ ಯೋಜನೆಗೆ ಪರಿಷ್ಕೃತ ಅನುದಾನ ಕೊಟ್ಟಿದ್ದೇವೆ. ಈ ಯೋಜನೆ ಮತ್ತು ಕೃಷ್ಣಾ ‘ಬಿ’ ಸ್ಕೀಂ ಯೋಜನೆ ಸೇರಿ ಕೊಪ್ಪಳ ಏತ ನೀರಾವರಿ ಯೋಜನೆ ಅಡಿ ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕಿನ ಒಂದೂವರೆ ಲಕ್ಷ ಎಕರೆ ಪ್ರದೇಶ ನೀರಾವರಿಗೆ ಒಳಪಡಲಿದೆ ಎಂದರು. 
 
ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೊಪ್ಪಳ ಕ್ಷೇತ್ರದಲ್ಲಿ ಸುಮಾರು 54 ಸಾವಿರ ಎಕರೆ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಲಿದೆ. ಕುಣಿಕೇರಿ ಗ್ರಾಮಕ್ಕೂ ಏತ ನೀರಾವರಿ ಯೋಜನೆ ಒದಗಿಸಲಾಗುವುದು. ಒಟ್ಟಾರೆ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರ್ಕಾರ ₹ 1,450 ಕೋಟಿಗೂ ಹೆಚ್ಚು ಅನುದಾನ ನೀಡಿದೆ ಎಂದರು. 
 
ಶಾಸಕ ಶಿವರಾಜ ತಂಗಡಗಿ ಮಾತನಾಡಿ, ನೀರಾವರಿ ಯೋಜನೆಗಳಿಗೆ ಎಷ್ಟೇ ಭೂಮಿ ಹೋಗಲಿ. ಆದರೆ, ರೈತರು ಯೋಜನೆಯನ್ನು ನಿರಾಕರಿಸಬಾರದು ಎಂದರು. 
ಸಿಗುವಷ್ಟಾದರೂ ನೀರು ಪಡೆಯೋಣ. ಆದ್ದರಿಂದ ಯಾರೂ ಈ ವಿಷಯದಲ್ಲಿ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು. ಪ್ರವಾಹ ಹರಿವು, ಸಮಾನಾಂತರ ಜಲಾಶಯ ಯೋಜನೆಯ ಪರಿಕಲ್ಪನೆಯನ್ನೇ ಅರ್ಥಮಾಡಿಕೊಳ್ಳದ ಕೆಲವರು ಅದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. 
 
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಬಿ.ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಹಿಟ್ನಾಳ್‌, ಕಾಂಗ್ರೆಸ್‌ ಮುಖಂಡ ಸುರೇಶ್‌ ಭೂಮರಡ್ಡಿ ಇದ್ದರು..
 
ಸಮೀಕ್ಷೆ ಸತ್ಯ ಎನ್ನಲಾಗದು
ಕೊಪ್ಪಳ:
ಚುನಾವಣಾ ಫಲಿತಾಂಶ ಪೂರ್ವ ಸಮೀಕ್ಷೆಗಳು ಸತ್ಯವಾಗುತ್ತವೆ ಎನ್ನಲಾಗದು. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್‌ ಸ್ಪಷ್ಟ ಬಹುಮತ ಪಡೆಯಲಿವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕಿನ ಬೆಟಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಗಳು ಹೇಗಿರುತ್ತವೆ ಎಂಬುದು ನಿಮಗೆ (ಮಾಧ್ಯಮಗಳಿಗೆ) ಗೊತ್ತು. ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌ ಗೆಲ್ಲುತ್ತಾರೆಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. ಫಲಿತಾಂಶ ಬಂದಾಗ ಎಲ್ಲವೂ ತಲೆಕೆಳಗಾಗಿತ್ತು. ಇಲ್ಲಿಯೂ ಅದೇ ಆಗಲಿದೆ ಎಂದರು.
ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವು ಸಾಧಿಸ ಲಿದ್ದಾರೆ. ಯಾವುದೇ ಚುನಾವಣಾ ಫಲಿತಾಂಶ ಅಥವಾ ಸಮೀಕ್ಷೆಗಳು ದಿಕ್ಸೂಚಿ ಅಲ್ಲ. ಅದೇನಿದ್ದರೂ ಶೇ 50ರಷ್ಟು ಪಕ್ಷ ಮತ್ತು ಶೇ 50ರಷ್ಟು ಅಭ್ಯರ್ಥಿ ಮೇಲೆ ಅವಲಂಬಿಸಿರುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.