ADVERTISEMENT

ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2017, 6:38 IST
Last Updated 29 ನವೆಂಬರ್ 2017, 6:38 IST

ಕೊಪ್ಪಳ: ಪೌರಕಾರ್ಮಿಕರು, ಸ್ವಚ್ಛತಾ ಕಾರ್ಮಿಕರ ಮಕ್ಕಳಿಗೆ ಪಿಯುಸಿ ವರೆಗೆ ಉಚಿತ ಶಿಕ್ಷಣ ನೀಡಲು ಸರ್ಕಾರ ಮುಂದಾಗಿದೆ ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣ ದಲ್ಲಿ ಸೋಮವಾರ ರಾಜ್ಯ ಸ್ವಚ್ಛತಾ ಕಾರ್ಮಿಕರ ಆಯೋಗ, ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಸ್ವಚ್ಛತಾ ಕಾರ್ಮಿ ಕರೊಂದಿಗಿನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

'ಕಿತ್ತೂರು ರಾಣಿ ಚನ್ನಮ್ಮ ಸೇರಿದಂತೆ ಪ್ರತಿಷ್ಠಿತ ಶಾಲೆಗಳಲ್ಲಿ ಪೌರಕಾರ್ಮಿಕರ ಮಕ್ಕಳಿಗೆ ಪ್ರವೇಶ ಪರೀಕ್ಷೆ ಇಲ್ಲದೇ ನೇರ ದಾಖಲಾತಿಗಾಗಿ ಸರ್ಕಾರ ಅನುವು ಮಾಡಿದೆ. ರಾಜ್ಯದಲ್ಲಿ ಪ್ರತಿಷ್ಠಿತ ಶಾಲೆಗಳಲ್ಲಿ ಇವರಿಗೆ 1,830 ಸ್ಥಾನಗಳನ್ನು ಮೀಸಲಿಟ್ಟಿದೆ. ಇತರ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಸಿಕ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ’ ಎಂದರು.

ADVERTISEMENT

‘ದೇಶದಲ್ಲಿ ಮೊದಲ ಬಾರಿಗೆ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ರಾಜ್ಯ ಸರ್ಕಾರ ಸ್ಥಾಪಿಸಿದೆ. ಪೌರ ಕಾರ್ಮಿಕರಿಗೆ ₹7.5 ಲಕ್ಷ ವೆಚ್ಚದಲ್ಲಿ ಮನೆಗಳ ನಿರ್ಮಾಣ ಮಾಡಲು ಗೃಹಭಾಗ್ಯ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗೆ ರಾಜ್ಯದಲ್ಲಿ ₹75 ಕೋಟಿ ಅನುದಾನ ನೀಡಲಾಗಿದೆ' ಎಂದರು.

'ಸರ್ಕಾರ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಿದೆ. ಇದರ ಅನ್ವಯ ಭವಿಷ್ಯನಿಧಿ ಮತ್ತು ಕಾರ್ಮಿಕ ವಿಮಾ ಯೋಜನೆ ಒಳಗೊಂಡು ಕನಿಷ್ಠ ವೇತನ ನೀಡುತ್ತಿದೆ. ಪೌರಕಾರ್ಮಿಕರಿಗೆ ರಾಜ್ಯಸರ್ಕಾರ ನೀಡುತ್ತಿರುವ ಸೌಲಭ್ಯಗಳು ದೇಶದ ಯಾವುದೇ ರಾಜ್ಯದಲ್ಲಿಯೂ ಇಲ್ಲ. ಬೆಳಗಿನ ಉಪಾಹಾರ, ವರ್ಷಕ್ಕೆ ಎರಡು ಜೊತೆ ಬಟ್ಟೆ, ಸುರಕ್ಷಾ ಪರಿಕರಗಳನ್ನು ನೀಡಲಾಗುತ್ತಿದೆ’ ಎಂದು ಹೇಳಿದರು.

‘ಪೌರಕಾರ್ಮಿಕರಿಗೆ ಆರೋಗ್ಯ, ಮಕ್ಕಳ ಶಿಕ್ಷಣ, ಶೌಚಾಲಯ ನಿರ್ಮಾಣ, ವೈದ್ಯಕೀಯ ಸೇವೆಗಾಗಿ ಹಣ ಮೀಸಲಿಡಲಾಗಿದೆ. ಆರೋಗ್ಯ ಭದ್ರತೆಗಾಗಿ ₹9.65 ಲಕ್ಷ ಹಣ ನಿಗಮದ ಜ್ಯೋತಿ ಸಂಜೀವಿನಿಗೆ ನೀಡಲಾಗಿದೆ. ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿ ಯೋಜನೆಯ ಅಡಿ ₹100 ಕೋಟಿ ಸರ್ಕಾರ ಬಜೆಟ್‌ನಲ್ಲಿ ಮೀಸಲಿಟ್ಟಿದೆ’ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕ ದೇವಪ್ಪ ಮಾತನಾಡಿ, 'ಪೌರಕಾರ್ಮಿಕರು ಮರಣ ಹೊಂದಿದರೆ ಅನುಕಂಪದ ಆಧಾರದ ಮೇಲೆ ಅವರ ಮಕ್ಕಳಿಗೆ ಕೆಲಸಕ್ಕೆ ತೆಗೆದುಕೊಳ್ಳಲು ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರಬೇಕು ಎಂಬ ನಿಯಮ ಸಡಿಲಿಸಬೇಕು. ನಗರದಲ್ಲಿ 24 ಗುತ್ತಿಗೆ ಕಾರ್ಮಿಕರಿದ್ದು, 18ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಕಾಯಂಗೊಳಿಸುವಂತೆ' ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ವೆಂಕಟೇಶ, 'ಪೌರಕಾರ್ಮಿಕರ ಕೆಲಸಕ್ಕೆ ಯಾವುದೇ ವಿದ್ಯಾರ್ಹತೆ ನಿಗದಿಪಡಿಸಿಲ್ಲ. 20ವರ್ಷ ಸೇವೆ ಸಲ್ಲಿಸಿದ ನೌಕರರಿಗೆ ಕಾಯಂ ಕೆಲಸ ಒದಗಿಸುವ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಎಂದರು.

ಆಯೋಗದ ಸದಸ್ಯ ಗೋಕುಲ ನಾರಾಯಣಸ್ವಾಮಿ, ಉಪನಿರ್ದೇಶಕ ಮಂಜುನಾಥ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀಕಾಂತ, ನಗರಸಭೆ ಪೌರಾಯುಕ್ತ ಪರಮೇಶ್ವರ ಇದ್ದರು.

* * 

ಸರ್ಕಾರ ಕನಿಷ್ಠ ವೇತನ ಕಾಯ್ದೆ ಜಾರಿಗೊಳಿಸಿದೆ. ಇದರ ಅನ್ವಯ ಪಿಎಫ್ ಮತ್ತು ಇಎಸ್ಐ ಒಳಗೊಂಡು ಕನಿಷ್ಠ ವೇತನ ನೀಡುತ್ತಿದೆ.
ಎಂ.ಆರ್‌.ವೆಂಕಟೇಶ, ಅಧ್ಯಕ್ಷ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.