ADVERTISEMENT

ಕಿಮ್ಸ್‌ನಲ್ಲಿ ಯೋಗ, ನಿಸರ್ಗ ಚಿಕಿತ್ಸಾ ಕೇಂದ್ರ?

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:41 IST
Last Updated 17 ಜುಲೈ 2017, 5:41 IST

ಕೊಪ್ಪಳ: ನಗರದ ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಘಟಕ ಸ್ಥಾಪಿಸಲು ಸೂಕ್ತವಾಗಿದೆ ಎಂದು ಕೇಂದ್ರ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಮಿತಿ ಅಭಿಪ್ರಾಯಪಟ್ಟಿದೆ. ಸಂಸದ ಸಂಗಣ್ಣ ಕರಡಿ ಅವರ ಆಹ್ವಾನದ ಮೇರೆಗೆ ಶನಿವಾರ ಕಿಮ್ಸ್‌ಗೆ ಭೇಟಿ ನೀಡಿದ್ದ ಸಮಿತಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಮಿತಿ ಸದಸ್ಯ ಹಾಗೂ ಸಂಶೋಧಕ ಡಾ.ವಾದಿರಾಜ ಮಾತನಾಡಿ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಮಿತಿಯು ಕೇಂದ್ರ ಆರೋಗ್ಯ ಸಚಿವಾಲಯದ ಆಯುಷ್ ವಿಭಾಗದ ಅಂಗ ಸಂಸ್ಥೆ. ನೈಸರ್ಗಿಕವಾಗಿ ರೋಗಗಳನ್ನು ಗುಣಪಡಿಸುವ ಚಿಕಿತ್ಸಾ ಪದ್ಧತಿಯನ್ನು ದೇಶದ ಎಲ್ಲೆಡೆ ಸ್ಥಾಪಿಸುವ ಉದ್ದೇಶವಿದೆ. ಇದಕ್ಕಾಗಿ ದೇಶಾದ್ಯಂತ ಒಟ್ಟು 10 ಇಂತಹ ಚಿಕಿತ್ಸಾಲಯಗಳನ್ನು ತೆರೆಯುವ ಪ್ರಸ್ತಾವವಿದ್ದು, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಆ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.

ಸಮಿತಿ ಸದಸ್ಯರು, ಸಂಸದರು ಹಾಗೂ ಕಿಮ್ಸ್ ನಿರ್ದೇಶಕ ಡಾ. ಶಂಕರ ಮಲಾಪುರೆ ಅವರೊಂದಿಗೆ ಕಿಮ್ಸ್ ಕಟ್ಟಡ ಹಾಗೂ ಪರಿಸರ ಪರಿಶೀಲಿಸಿದ ಡಾ.ವಾದಿರಾಜ, ಕಿಮ್ಸ್ ಆವರಣ ಇಂತಹ ಚಿಕಿತ್ಸಾ ಪದ್ಧತಿ ಸ್ಥಾಪಿಸಲು ಅತ್ಯಂತ ಸೂಕ್ತ. ಇಲ್ಲಿ ಪ್ರಶಾಂತ ವಾತಾವರಣವಿದ್ದು, ಯೋಗ ಮತ್ತು ನೈಸರ್ಗಿಕ ಚಿಕಿತ್ಸೆ ನೀಡಲು ಸಮರ್ಥ ವಾಗಿದ್ದು, ಮುಂದಿನ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.

ADVERTISEMENT

ಸಂಸದ ಸಂಗಣ್ಣ ಕರಡಿ ಮಾತನಾಡಿ, ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ವಿಜ್ಞಾನಕ್ಕೆ ಜಗತ್ತಿನಾದ್ಯಂತ ತೀವ್ರ ಬೇಡಿಕೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಸಂಶೋಧನಾ ಸಮಿತಿ ಉದ್ದೇಶಿಸಿರುವ ಚಿಕಿತ್ಸಾ ಘಟಕದ ಜತೆಗೆ, ಈ ಕುರಿತ ಕೋರ್ಸ್ ಆರಂಭಿಸುವ ಪ್ರಸ್ತಾವ ಬಂದರೆ, ಅದಕ್ಕೂ ಸಹಕರಿಸುವುದಾಗಿ ಹೇಳಿದರು. ಡಾ.ವಿಕ್ರಮ ಪೈ, ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಕರಡಿ ಇದ್ದರು. 

ನೈಸರ್ಗಿಕ ಚಿಕಿತ್ಸಾ ಘಟಕದಲ್ಲಿರುವುದೇನು?: ಪ್ರತಿ ಘಟಕದಲ್ಲಿ ಒಬ್ಬ ಯೋಗ ಮತ್ತು ನಿಸರ್ಗ ಚಿಕಿತ್ಸಾ ವೈದ್ಯರು, ಇಬ್ಬರು ಯೋಗ ಪರಿಣತರು, ನಾಲ್ವರು ಚಿಕಿತ್ಸಕರು, ಇಬ್ಬರು ಸಹಾಯಕರು ಹಾಗೂ ಒಬ್ಬರು ಸ್ವಾಗತಕಾರಿಣಿ/ಡಿಟಿಪಿ ಆಪರೇಟರ್ ಸೇರಿದಂತೆ ಒಟ್ಟು 10 ಜನ ಇರುತ್ತಾರೆ. ಇವರೆಲ್ಲರ ಜವಾಬ್ದಾರಿಯನ್ನು ನಮ್ಮ ಸಂಸ್ಥೆಯೇ ನಿರ್ವಹಿಸುತ್ತದೆ. ಇಡೀ ಘಟಕ ಒಪಿಡಿ (ಹೊರರೋಗಿ ವಿಭಾಗ) ರೀತಿ ಕೆಲಸ ಮಾಡುತ್ತದೆ.

ವೈದ್ಯರು ರೋಗಿಗಳನ್ನು ನಮ್ಮ ಘಟಕಕ್ಕೆ ಶಿಫಾರಸು ಮಾಡಬಹುದು ಅಥವಾ ರೋಗಿಗಳೇ ನೇರವಾಗಿ ಬರಬಹುದು. ಇಡೀ ಘಟಕಕ್ಕೆ 3 ಸಾವಿರ ಚದರ ಅಡಿ ಸ್ಥಳ ಬೇಕು. ಚಿಕಿತ್ಸಾ ಕೊಠಡಿಗಳ ಜತೆಗೆ ಶತಕರ್ಮ, ಮಣ್ಣಿನ ಸ್ನಾನ, ವ್ಯಾಯಾಮ ಚಿಕಿತ್ಸೆ ಮುಂತಾದವನ್ನು ನೀಡಬೇಕಾಗುತ್ತದೆ ಎಂದು ಸಮಿತಿ ಸದಸ್ಯರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.