ADVERTISEMENT

ಕುಡಿವ ನೀರಿಗೆ ಹಾಹಾಕಾರ

​ಪ್ರಜಾವಾಣಿ ವಾರ್ತೆ
Published 27 ಮೇ 2017, 7:36 IST
Last Updated 27 ಮೇ 2017, 7:36 IST

ಕನಕಗಿರಿ: ಸಮೀಪದ ಲಾಯದುಣಸಿ ಗ್ರಾಮಸ್ಥರು ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. 3 ಕೊಳವೆಬಾವಿಗಳು ಕೈಕೊಟ್ಟಿದ್ದು ಜನ ನೀರಿಗಾಗಿ ಪರದಾಡುವಂತಾಗಿದೆ.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ನಾಯಕ ಸೇರಿ ನಾಲ್ಕು ಸದಸ್ಯರಿದ್ದರೂ ನೀರು ಪೊರೈಕೆಗೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಗ್ರಾಮದಲ್ಲಿ 1200 ಜನಸಂಖ್ಯೆ ಇದೆ. ನೀರಿಗಾಗಿ ದೂರದ ಪಂಪ್‌ಸೆಟ್‌ಗಳನ್ನು ಹುಡುಕಿಕೊಂಡು ಜನರು ಅಲೆದಾಡುತ್ತಿದ್ದಾರೆ. ಗ್ರಾಮಸ್ಥರು ಕೂಲಿ ಬಿಟ್ಟು ನೀರಿಗಾಗಿ ಹರಸಾಹಸ ಮಾಡುವಂತಾಗಿದೆ’ ಎಂದು ಕಾಳಪ್ಪ  ಹೇಳಿದರು.

‘ಎರಡು ತಿಂಗಳ ಹಿಂದೆ ಕೊರೆದ ಕೊಳವೆಬಾವಿಯಲ್ಲಿ 2 ಇಂದು ನೀರು ಬಂದಿತ್ತು. ಈಗ ಅದು ನಿಂತು ಹೋಗಿದೆ. ಅಂತರ್ಜಲ ಕುಸಿದ ಕಾರಣ ನೀರು ಲಭ್ಯವಾಗುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನರಸಪ್ಪ ನಾಯಕ ಹಾಗೂ ಅಭಿವೃದ್ಧಿ ಅಧಿಕಾರಿ ರಾಮುನಾಯಕ ತಿಳಿಸಿದರು.

ADVERTISEMENT

‘ಕೊಳವೆಬಾವಿ ಕೊರೆಸದಂತೆ ಮೇಲಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ನೋಡಿದರೆ ನೀರಿನ ಅಭಾವ ಹೆಚ್ಚಾಗಿದೆ’ ಎಂದು ಅವರು ಹೇಳಿದರು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕುಡಿಯುವ ನೀರಿನ ವಿಷಯದಲ್ಲಿ ಮೂಗಿಗೆ ತುಪ್ಪ ಸವರುವ ಬದಲಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಆಲಿಸಬೇಕೆಂದು ನರಸಪ್ಪ ತಿಳಿಸಿದರು.  

ಅಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಮಕ್ಕೆ ನೀರು ಪೊರೈಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಾ ರಮೇಶ ನಾಯಕ ಪ್ರತಿಕ್ರಿಯೆ ನೀಡಿದರು.
 

* * 

ಗ್ರಾಮದಲ್ಲಿ ನೀರಿನ ಕೊರತೆ ಇರುವುದು ನಿಜ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳೊಂದಿಗೆ ಚರ್ಚಿಸಿ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು.
ಶಾಂತಾ ರಮೇಶ ನಾಯಕ,
ಜಿಲ್ಲಾ ಪಂಚಾಯಿತಿ  ಸ್ಥಾಯಿ ಸಮಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.