ADVERTISEMENT

ಕುಷ್ಟಗಿ: ತಾ.ಪಂ ಬಳಿ ಕೂಲಿಕಾರ್ಮಿಕರ ಧರಣಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 9:03 IST
Last Updated 8 ನವೆಂಬರ್ 2017, 9:03 IST

ಕುಷ್ಟಗಿ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ವಿವಿಧ ಗ್ರಾಮಗಳ ಕೃಷಿಕೂಲಿಕಾರರು ತಾಲ್ಲೂಕು ಪಂಚಾಯಿತಿ ಬಳಿ ಮಂಗಳವಾರ ಧರಣಿ ನಡೆಸಿದರು. ಕೆ.ಬೋದೂರು, ಬಳೂಟಗಿ, ಮೆಣೆದಾಳ ಗ್ರಾಮಗಳ ಮಹಿಳೆಯರು ಸೇರಿದಂತೆ ಅನೇಕ ಜನರು ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಿಜಕಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕೆ.ಬೋದೂರಿನ ಸುಮಾರು 160 ಕೂಲಿಕಾರರು ಕಳೆದ ಆಗಸ್ಟ್‌ನಲ್ಲಿ ಏಳು ದಿನಗಳವರೆಗೆ ಹೊಸಳ್ಳಿ ಕೆರೆಯಲ್ಲಿ ಹೂಳೆತ್ತುವ ಕೆಲಸದಲ್ಲಿ ಭಾಗಿಯಾಗಿದ್ದರು. ಈವರೆಗೂ ಕೂಲಿ ಹಣ ಪಾವತಿಸಿಲ್ಲ. ಟ್ರ್ಯಾಕ್ಟರ್‌ ಬಾಡಿಗೆ ಪಾವತಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತಾಯಿಸುತ್ತಿದ್ದಾರೆ. ಹೊಸದಾಗಿ ಕೆಲಸವನ್ನೂ ನೀಡುತ್ತಿಲ್ಲ’ ಎಂದು ಕೂಲಿಕಾರರಾದ ಮುತ್ತಣ್ಣ ತೊಣಸಿಹಾಳ, ಬಸವರಾಜ ಗೊರೆಬಾಳ, ಮಂಜುನಾಥ ಗೊರೆಬಾಳ ದೂರಿದರು.

ಬಳೂಟಗಿ ಗ್ರಾಮ: ‘ಬಳೂಟಗಿ ಗ್ರಾಮದ ಕೂಲಿಕಾರರು ಮೇ ತಿಂಗಳಿಂದ ಆಗಸ್ಟ್‌ನಲ್ಲಿ 14 ದಿನಗಳವರೆಗೆ ಮುದೇನೂರು ಕೆರೆ ಮತ್ತಿತರೆಡೆ ಹೂಳೆತ್ತುವ ಕೆಲಸ ನಿರ್ವಹಿಸಿದ್ದು ಒಟ್ಟು 500 ಮಾನವ ದಿನಗಳಾಗಿದ್ದವು. ಆದರೆ ಇಲ್ಲಿಯವರೆಗೂ ಕೂಲಿಹಣ ಪಾವತಿಸಿಲ್ಲ.

ADVERTISEMENT

ಪರಿಕರ ವೆಚ್ಚ ನೀಡಿಲ್ಲ. ಟ್ರ್ಯಾಕ್ಟರ್‌ ಬಾಡಿಗೆ ನೀಡಿಲ್ಲ ಮತ್ತು ಹೊಸದಾಗಿ ಕೆಲಸ ನೀಡುವುದಕ್ಕೂ ಮೀನಮೇಷ ಎಣಿಸಲಾಗುತ್ತಿದೆ’ ಎಂದು ಗ್ರಾಮದ ಅಮರೇಗೌಡ ಪೊಲೀಸ್‌ ಪಾಟೀಲ, ಶಂಕರಮ್ಮ ಸುಂಕದ, ವೀರೇಶ ಬಳೂಟಗಿ, ಶೇಖರಪ್ಪ ಎಲಿಗಾರ, ಮಾರುತೆಪ್ಪ ಈಳಗೇರ, ಸೋಮಣ್ಣ ಗುನ್ನಿ, ಶರಣಗೌಡ ಪೊಲೀಸ್‌ ಪಾಟೀಲ, ಶಿವಪ್ಪ ಈಳಗೇರ ಸಮಸ್ಯೆ ವಿವರಿಸಿದರು.

‘ಅದೇ ರೀತಿ ಮೆಣೆದಾಳ ಪಂಚಾಯಿತಿ ವ್ಯಾಪ್ತಿಯ ಹುಲಿಕೆರೆಯಲ್ಲಿ ಸುಮಾರು 205 ಜನರು ಆಗಸ್ಟ್‌ನಲ್ಲಿ ಎರಡು ವಾರಗಳವೆಗೆ ಕೆಲಸ ನಿರ್ವಹಿಸಿದ್ದರೂ ಕೂಲಿಹಣ ಪಾವತಿಯಾಗಿಲ್ಲ’ ಎಂದು ನಾಗಪ್ಪ ಗುಳೇದ ದೂರಿದರು.

ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಆರ್‌.ಕೆ.ದೇಸಾಯಿ ಮಾತನಾಡಿ, ‘ಧರಣಿ ನಡೆಸುತ್ತಿರುವವರ ಬೇಡಿಕೆ ಗಳು ಈಡೇರುವವರೆಗೆ ಜಾಗಬಿಟ್ಟು ಕದಲುವುದಿಲ್ಲ’ ಎಂದು ಹೇಳಿದರು. ಸ್ಥಳಕ್ಕೆ ಭೇಟಿ ನೀಡಿದ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಮೋಹನ್‌ ಕೂಲಿಕಾರರ ಸಮಸ್ಯೆ ಆಲಿಸಿದರು. ಈ ಬಗ್ಗೆ ಪರಿಶೀಲಿಸಿ ಸಂಬಂಧಿಸಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.