ADVERTISEMENT

ಕುಷ್ಟಗಿ: ಬರ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 6:30 IST
Last Updated 18 ಫೆಬ್ರುವರಿ 2017, 6:30 IST
ಕುಷ್ಟಗಿ: ತಾಲ್ಲೂಕಿನಲ್ಲಿ ಜನರಿಗೆ ಕುಡಿಯುವ ನೀರು ಮತ್ತು ಉದ್ಯೋಗ ನೀಡುವ ವಿಷಯದಲ್ಲಿ ತಕ್ಷಣ ಸ್ಪಂದಿಸುವಂತೆ ಜಿಲ್ಲಾ ಪಂಚಾಯಿತಿ ಆಡಳಿತ ಅಧಿಕಾರಿಗಳಿಗೆ ಸೂಚಿಸಿದೆ.
 
ಬರ ಪರಿಸ್ಥಿತಿ ಕಾರಣಕ್ಕೆ ಕುಡಿಯುವ ನೀರು ಪೂರೈಕೆ ಮತ್ತು ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಕಾಮಗಾರಿಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಬಿ.ನಾಗರಳ್ಳಿ ಮತ್ತು ಉಪ ಕಾರ್ಯದರ್ಶಿ ಎನ್‌.ಕೆ.ತೊರವಿ ಅವರು, ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ತಾಕೀತು ಮಾಡಿದರು.
 
ಬೆರಳೆಣಿಕೆ ಹಳ್ಳಿಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲ ಕಡೆ ನೀರಿನ ಸಮಸ್ಯೆ ಈಗಲೇ ತೀವ್ರಗೊಂಡಿರುವುದು ಸಭೆಯಲ್ಲಿ ವ್ಯಕ್ತವಾಯಿತು. ಕೊಳವೆಬಾವಿಗಳಲ್ಲಿ ನೀರಿಲ್ಲ, ಇದ್ದ ಬಾವಿಗಳಲ್ಲಿನ ನೀರು ತಳಕಂಡಿದೆ, ಎಷ್ಟೇ ಸಂಖ್ಯೆ ಅಥವಾ ಆಳದಲ್ಲಿ ಕೊರೆದರೂ ನೀರು ಸಿಗುತ್ತಿಲ್ಲ ಎಂಬುದನ್ನು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
 
ಖಾಸಗಿ ಕೊಳವೆಬಾವಿಗಳಲ್ಲಿಯೂ ನೀರಿನ ಕೊರತೆ ಇದೆ, ದೂರದಿಂದ ಕೊಳವೆಮಾರ್ಗ ಅಳವಡಿಸಿ ನೀರು ಪೂರೈಕೆ ಮಾಡಲಾಗುತ್ತಿದೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದರು.
 
ಟ್ಯಾಂಕರ್‌ಗೆ ಬೇಡಿಕೆ: ಜಿಲ್ಲಾ ಪಂಚಾಯಿತಿ ಸದಸ್ಯರು ಹೊಸ ಕೊಳವೆಬಾವಿಗಳಿಗೆ ಬೇಡಿಕೆ ಇಟ್ಟರು.  ಕೊಳವೆಬಾವಿಗಳಲ್ಲಿ ನೀರು ಬರುವುದೇ ಅಪರೂಪ,ಎಂಬುದನ್ನು ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಎಇಇ ಅರವಿಂದ ಜೋಷಿ ವಿವರಿಸಿದರು. ಟ್ಯಾಂಕರ್‌ ನೀರು ಪೂರೈಸುವಂತೆ ಸದಸ್ಯರು ಒತ್ತಾಯಿಸಿದರು.
 
ಜಿಂದಾಲ್‌ ಮಾರ್ಗ: ಜಿಂದಾಲ್‌ ಕಂಪೆನಿಗೆ ಸೇರಿದ ಕೊಳವೆಮಾರ್ಗದ ನೀರನ್ನು ಪಕ್ಕದಲ್ಲಿರುವ ಕೆಲ ಗ್ರಾಮಗಳಿಗೆ ವಿತರಿಸುವ ಸಂಬಂಧ ಪತ್ರ ವ್ಯವಹಾರ ನಡೆಸುವಂತೆ ಅಧಿಕಾರಿಗಳಿಗೆ ಸಭೆ ಸೂಚಿಸಿತು.
 
ಶುದ್ಧೀಕರಣ ಘಟಕ:  ತಾಲ್ಲೂಕಿನ ಅನೇಕ ಹಳ್ಳಿಗಳಲ್ಲಿ ಸ್ಥಾಪಿಸಿರುವ ನೀರಿನ ಶುದ್ಧೀಕರಣ ಘಟಕಗಳು ಕಾರ್ಯಾರಂಭ ಮಾಡಿಲ್ಲ, ನಿರ್ವಹಣೆ ಇಲ್ಲದೆ ಕೆಲವೆಡೆ ಸ್ಥಗಿತವಾಗಿವೆ ಎಂದು ಸದಸ್ಯರು ದೂರಿದರು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟರಾಜಾ ತಿಳಿಸಿದರು.
 
ಮಧ್ಯವರ್ತಿಗಳದ್ದೇ ಸಾಧನೆ:  ಜಿ.ಪಂ ಸದಸ್ಯ ಕೆ.ಮಹೇಶ್‌, ಮಧ್ಯವರ್ತಿಗಳ ಹಾವಳಿ ಇರುವಲ್ಲಿ ಮಾತ್ರ ಹೆಚ್ಚು ಪ್ರಗತಿಯಾಗಿದೆ, ಅವರ ಉಪಟಳ ಇರದ ಕಡೆದ ಕಡಿಮೆ ಕೆಲಸ ಆಗಿದೆ ಎಂದು ಹೇಳಿದರು.ಎರಡು ದಿನದಲ್ಲಿ ಎಲ್ಲ ಕಡೆ ಕೆಲಸ ಆರಂಭಿಸಬೇಕು ಇಲ್ಲದಿದ್ದರೆ ಶಿಸ್ತುಕ್ರಮ ಜರುಗಿಸುವುದಾಗಿ ಉಪಕಾರ್ಯದರ್ಶಿ ತೊರವಿ ಎಚ್ಚರಿಕೆ ನೀಡಿದರು. 
 
ಗೋಶಾಲೆ:  ಸರ್ಕಾರದ ಆದೇಶದಂತೆ ಎರಡು ದಿನಗಳ ಒಳಗೆ ಇನ್ನೂ ಮೂರು ಹೋಬಳಿ ವ್ಯಾಪ್ತಿಯಲ್ಲಿ ಗೋಶಾಲೆ ಆರಂಭಿಸುವುದಾಗಿ ತಹಶೀಲ್ದಾರ್‌ ಎಂ.ಗಂಗಪ್ಪ ಸಭೆಗೆ ತಿಳಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್‌.ಬಿ.ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮವ್ವ ನೀರಲೂಟಿ, ಸದಸ್ಯರಾದ, ಕೆ.ಮಹೇಶ್‌, ಭೀಮಣ್ಣ ಅಗಸಿಮುಂದಿನ, ಹನುಮಗೌಡ ಪಾಟೀಲ, ಶರಣಮ್ಮ ಜೇನರ, ವಿಜಯಲಕ್ಷ್ಮಿ ಪಲ್ಲೇದ, ನೇಮಣ್ಣ ಮೇಲಸಕ್ರಿ, ವಿಜಯ ನಾಯಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟ ರಾಜಾ, ತಾ.ಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರ, ಉಪಾಧ್ಯಕ್ಷೆ ಮಂಜುಳಾ ಪೊಲೀಸಪಾಟೀಲ, ಕಾರ್ಯ ನಿರ್ವಹಣಾಧಿಕಾರಿ ಡಾ.ಮೋಹನ್‌ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.