ADVERTISEMENT

ಕೃಷಿಗೆ ನೀರಿಲ್ಲ: ಕೊಳವೆಬಾವಿ, ಬದಲಿ ಸಿದ್ಧತೆ

ತುಂಗಭದ್ರಾ ನೀರಾವರಿ ಜಮೀನುಗಳಿಗೆ ಬೇಸಿಗೆ ಬೆಳೆಗೆ ನೀರು ತತ್ವಾರ: ಆದೇಶ

​ಪ್ರಜಾವಾಣಿ ವಾರ್ತೆ
Published 17 ಜನವರಿ 2017, 6:49 IST
Last Updated 17 ಜನವರಿ 2017, 6:49 IST
ಕೃಷಿಗೆ ನೀರಿಲ್ಲ: ಕೊಳವೆಬಾವಿ, ಬದಲಿ ಸಿದ್ಧತೆ
ಕೃಷಿಗೆ ನೀರಿಲ್ಲ: ಕೊಳವೆಬಾವಿ, ಬದಲಿ ಸಿದ್ಧತೆ   

ಮುನಿರಾಬಾದ್‌: ರೈತರು ಭತ್ತದ ಬದಲು ಬೇರೆ  ಪರ್ಯಾಯ ಬೆಳೆ ಬೆಳೆಯಲು ಸಜ್ಜಾಗಿದ್ದು, ನೀರಿಗಾಗಿ ತಮ್ಮ ಜಮೀನಿನಲ್ಲಿ ಕೊಳವೆಬಾವಿ ಕೊರೆಸುವುದಕ್ಕೆ ಮುಂದಾಗಿದ್ದಾರೆ.

‘ತುಂಗಭದ್ರಾ ನೀರಾವರಿ ಯೋಜನೆ ಅಚ್ಚುಕಟ್ಟು ವ್ಯಾಪ್ತಿಯ ಜಮೀನುಗಳಿಗೆ ವರ್ಷದ ಎರಡನೇ(ಬೇಸಿಗೆಹಿಂಗಾರು) ಬೆಳೆಗೆ ನೀರು ಹರಿಸಲಾಗುವುದಿಲ್ಲ ದಯವಿಟ್ಟು ಭತ್ತ ಬೆಳೆಯಬೇಡಿ’ ಎಂದು ನೀರಾವರಿ ನಿಗಮ, ಕೃಷಿ ಇಲಾಖೆ ಖಡಾಖಂಡಿತವಾಗಿ  ತಿಳಿಸಿದ ಬೆನ್ನಲ್ಲೇ ಈ ಸ್ಥಿತಿ ನಿರ್ಮಾಣವಾಗಿದೆ.

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮತ್ತು ಮೇಲ್ಮಟ್ಟದ ಕಾಲುವೆ ವ್ಯಾಪ್ತಿಯ ರೈತರು ಭತ್ತದ ಕೊಯ್ಲು ಮುಗಿಸಿ ಎರಡನೇ ಬೆಳೆಗೆ ಸಿದ್ಧತೆ ಮಾಡಿಕೊಂಡಿದ್ದರು. ಕಳೆದ ವಾರ ಬೆಂಗಳೂರಿನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ(ಐಸಿಸಿ)ಸಭೆಯಲ್ಲಿ ಹಿಂಗಾರು ಬೆಳೆಗೆ ನೀರು ಹರಿಸಲು ಸಾಧ್ಯವಿಲ್ಲ ಎಂಬ ತೀರ್ಮಾನಕ್ಕೆ ಬರಲಾಯಿತು.

ಅಚ್ಚುಕಟ್ಟು ವ್ಯಾಪ್ತಿಯ ಜಮೀನುಗಳಲ್ಲಿ ಭತ್ತದ ಸಸಿಗಳನ್ನು ಬೆಳೆಸಿದ್ದು, ಕೆಲವು ಕಡೆ ಈಗಾಗಲೇ ಸಸಿನಾಟಿ ಕೂಡ ನಡೆದಿದೆ. ಈ ಪೈಕಿ ಕೆಲವು ರೈತರು ಪಂಪ್‌ಸೆಟ್‌ ನೀರಿನ ಮೇಲೆ ಅವಲಂಬನೆ ಹೊಂದಿದ್ದಾರೆ. ಪ್ರಸ್ತುತ ಕೆಲವು ರೈತರು ಅಂತರ್ಜಲ ಬಳಸಲು ಕೊಳವೆಬಾವಿ ಕೊರೆಸುತ್ತಿದ್ದಾರೆ. ಅಚ್ಚುಕಟ್ಟು ವ್ಯಾಪ್ತಿಯ ಅಗಳಕೇರಾ, ಶಿವಪುರ, ಹರ್ಲಾಪುರ ಮತ್ತು ಆನೆಗೊಂದಿಯ ಕೆಲವು ಭಾಗಗಳಲ್ಲಿ ಕೊಳವೆಬಾವಿ ಕೊರೆಯುವ ಸದ್ದು ಕೇಳಿ ಬರುತ್ತಿದೆ.

ಇದೇ ವೇಳೆ ಕಡಿಮೆ ನೀರು ಬೇಡುವ ದ್ವಿದಳಧಾನ್ಯ ಅಲಸಂದೆ, ಉದ್ದು, ಸಾಸಿವೆ ಬೆಳೆಯಲು ರೈತರು ಸಜ್ಜಾಗಿದ್ದು, ಶಿವಪುರ ಮತ್ತು ಹರ್ಲಾಪುರ ಭಾಗದಲ್ಲಿ ಮೆಕ್ಕೆಜೋಳ, ಶೇಂಗಾ ಬೆಳೆಯುವ ನಿರ್ಧಾರ ಕೈಗೊಂಡಿದ್ದಾರೆ. ನದಿಪಾತ್ರದ ಜಮೀನುಗಳಲ್ಲಿ ಮಾತ್ರ ಕೆಲವು ಜಮೀನುಗಳಲ್ಲಿ ಭತ್ತ ಬೆಳೆಯಲಾಗುತ್ತಿದೆ.
ಲಕ್ಷಾಂತರ ಎಕರೆ ಜಮೀನು ಖಾಲಿ(ಬೀಳು)ಬೀಳುವ ಆತಂಕ ನಿರ್ಮಾಣವಾಗಿದೆ.

ಸಾಲದ ಚಿಂತೆ:  ಮಾಡಿದ ಸಾಲ ತೀರಿಸಲು ಏನಾದರೂ ಮಾಡಬೇಕಲ್ಲ ಅದಕ್ಕೆ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದೇವೆ. ನೀರಾವರಿ ಭಾಗದಲ್ಲಿ ಕೂಡ ಬರದ ಭೀಕರತೆಯನ್ನು ಈ ವರ್ಷ ಕಾಣುತ್ತಿದ್ದೇವೆ ಎನ್ನುತ್ತಾರೆ ಶಿವಪುರದ ರೈತ ಅಮೀನಸಾಬ್‌.

ತುಂಗಭದ್ರಾ ಜಲಾಶಯದ ಇತಿಹಾಸದಲ್ಲೇ ಈಬಾರಿ ಮಳೆಕೊರತೆಯಿಂದ ಅತಿಕಡಿಮೆ ನೀರು ಸಂಗ್ರಹವಾಗಿದೆ. ಪ್ರಸ್ತುತ ಉಳಿದಿರುವ 6–7ಟಿಎಂಸಿ ಅಡಿ ನೀರನ್ನು ಮೂರು ಜಿಲ್ಲೆಯ ಜನ ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕೆ ಸರ್ಕಾರ ಮೀಸಲಾಗಿಟ್ಟಿದೆ. ರೈತ ಸಮುದಾಯ ಸೇರಿದಂತೆ ಎಲ್ಲರೂ ನೀರಿಗಾಗಿ ಆಕಾಶಕ್ಕೆ ಮುಖಮಾಡಿ ನಿಲ್ಲುವಂತ ಪರಿಸ್ಥಿತಿ ಬಂದಿದೆ.

ನೀರು ಸಿಕ್ಕೀತೆ:  ಕೊಳವೆಬಾವಿ ಕೊರೆದ ತಕ್ಷಣ ನಿರೀಕ್ಷಿತ ಮಟ್ಟದಲ್ಲಿ ನೀರು ಸಿಗುವ ಭರವಸೆ ಇಲ್ಲ. ಕೆಲವು ಭಾಗದಲ್ಲಿ 1.5–2 ಇಂಚು ಪ್ರಮಾಣದಲ್ಲಿ ನೀರು ಸಿಗಬಹುದು, ಆದರೆ ಕನಿಷ್ಟ 2.5ರಿಂದ 3ಇಂಚು ಸಿಕ್ಕರೆ ಲಾಭದಾಯಕ ಎನ್ನುತ್ತಾರೆ ಇಲ್ಲಿನ ರೈತರು. ಗುರುರಾಜ ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.