ADVERTISEMENT

ಕೊಪ್ಪಳ: ಜಾಗೃತಿಗಾಗಿ ಮಕ್ಕಳ ಪತ್ರ ಚಳವಳಿ

ಮುನಿರಾಬಾದ್‌ನಲ್ಲಿ ಶಿಕ್ಷಕರೊಂದಿಗೆ ಪೂರ್ವಭಾವಿ ಸಭೆ: ಸಿಇಒ ವೆಂಕಟರಾಜಾ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2017, 5:21 IST
Last Updated 18 ಜನವರಿ 2017, 5:21 IST
ಕೊಪ್ಪಳ: ಜಾಗೃತಿಗಾಗಿ ಮಕ್ಕಳ ಪತ್ರ ಚಳವಳಿ
ಕೊಪ್ಪಳ: ಜಾಗೃತಿಗಾಗಿ ಮಕ್ಕಳ ಪತ್ರ ಚಳವಳಿ   

ಕೊಪ್ಪಳ:  ಶಾಲಾ ಮಕ್ಕಳು ತಮ್ಮ ಮನೆಗಳಲ್ಲಿ ಶೌಚಾಲಯ ಹೊಂದುವಂತೆ ಮಕ್ಕಳ ಪತ್ರ ಚಳವಳಿ ಕೈಗೊಂಡು ಜಾಗೃತಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಹೇಳಿದರು.

ಶೌಚಾಲಯ ನಿರ್ಮಾಣಕ್ಕಾಗಿ ಮಕ್ಕಳ ಪತ್ರ ಚಳವಳಿ ಮೂಲಕ ಜಾಗೃತಿ ಮೂಡಿಸುವ ಸಂಬಂಧ ಮುನಿರಾಬಾದ್‌ನಲ್ಲಿ ಶಿಕ್ಷಕರೊಂದಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸೋಮವಾರ ಅವರು ಮಾತನಾಡಿದರು.

ಶೌಚಾಲಯ ನಿರ್ಮಿಸಿಕೊಂಡು ಬಳಸುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಶಾಲಾ ಮಕ್ಕಳು ತಮ್ಮ ಮನೆಗಳಲ್ಲಿ ಶೌಚಾಲಯ ಹೊಂದುವಂತೆ ಪತ್ರ ಚಳವಳಿ ಮೂಲಕ ಜಾಗೃತಿ ಮೂಡಿಸಬೇಕು. ತಮ್ಮ ಶಾಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಶಾಲೆ ಎಂದು ಘೋಷಿಸಿದ  ಶಿಕ್ಷಕರನ್ನು ಜಿಲ್ಲಾ ಪಂಚಾಯಿತಿ ವತಿಯಿಂದ ಸನ್ಮಾನಿಸಲಾಗುವುದು.

ಅಲ್ಲದೇ ಮಾರ್ಚ್‌15ರ ಒಳಗಾಗಿ ಬಯಲು ಬಹಿರ್ದೆಸೆ ಮುಕ್ತ ಶಾಲೆ ಎಂದು ಘೋಷಿಸಬೇಕು ಎಂದರು. ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಮಾತನಾಡಿ, ಶಾಲೆಯಲ್ಲಿರುವ ಎಲ್ಲ ಮಕ್ಕಳ ಮನೆಗಳಲ್ಲಿ ಶೌಚಾಲಯ ಹೊಂದುವಂತೆ ಶಿಕ್ಷಕರು ಶಾಲೆಯಲ್ಲಿ ನಿರಂತರವಾಗಿ ಜಾಗೃತಿ ಮೂಡಿಸಬೇಕು.

ಈ ಕುರಿತು 15 ದಿನಗಳಿಗೊಮ್ಮೆ ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುವ ಸಭೆಗೆ ಮಾಹಿತಿ ನೀಡಬೇಕು. ಶೌಚಾಲಯ ನಿರ್ಮಾಣ ಮಾಡಿಸಿಕೊಂಡ ಮಕ್ಕಳಿಗೆ ಬ್ಯಾಂಡ್, ಬ್ಯಾಡ್ಜ್ ಹಾಗೂ ಕ್ಯಾಪ್‌ಗಳನ್ನು ನೀಡಿ ಪ್ರೇರೇಪಿಸಲಾಗುವುದು. ಬಯಲು ಬಹಿರ್ದೆಸೆ ಮುಕ್ತ ಶಾಲೆ ಎಂದು ಘೋಷಿಸುವ ಮೂಲಕ ಜಿಲ್ಲೆಯನ್ನು ರಾಜ್ಯದಲ್ಲೆಯೇ ಮಾದರಿಯನ್ನಾಗಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದರು.

ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ್‌, ಮುನಿರಾಬಾದ್‌ ಆರೋಗ್ಯ ಅಧಿಕಾರಿ ಡಾ.ಲಿಂಗರಾಜ್, ಚನ್ನಬಸಪ್ಪ ಮಗ್ಗದ, ಶರಣಪ್ಪ ಗೌರಿಪುರ ಇದ್ದರು.

*

ಮಕ್ಕಳ  ಉತ್ತಮ ಭವಿಷ್ಯ , ಉತ್ತಮ ಸಮಾಜ ರೂಪಿಸುವಲ್ಲಿ ಶಿಕ್ಷಕರದ್ದು ಮುಖ್ಯವಾದ ಪಾತ್ರ. ಶೌಚಾಲಯ ನಿರ್ಮಿಸಿ ಬಳಸುವಂತೆ ಜಾಗೃತಿ ಮೂಡಿಸಬೇಕು.
-ವೆಂಕಟರಾಜಾ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೊಪ್ಪಳ ಜಿಲ್ಲಾ ಪಂಚಾಯಿತಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.