ADVERTISEMENT

ಕೊಪ್ಪಳ: ತರಕಾರಿಗಳ ಬೆಲೆ ಗಗನಕ್ಕೆ

ಟೊಮೆಟೊ ಭಾರ; ಮೆಣಸಿನಕಾಯಿ ಬಲು ಖಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 7:43 IST
Last Updated 20 ಜುಲೈ 2017, 7:43 IST
ಕೊಪ್ಪಳದ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಗ್ರಾಹಕರ ನಿರೀಕ್ಷೆಯಲ್ಲಿದ್ದ ವ್ಯಾಪಾರಿ ಮಹಿಳೆ
ಕೊಪ್ಪಳದ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಗ್ರಾಹಕರ ನಿರೀಕ್ಷೆಯಲ್ಲಿದ್ದ ವ್ಯಾಪಾರಿ ಮಹಿಳೆ   

ಕೊಪ್ಪಳ: ನಗರದಲ್ಲಿ ಟೊಮೆಟೊ ಮತ್ತು ಹಸಿ ಮೆಣಸಿನಕಾಯಿ ಬೆಲೆ ವಿಪರೀತ ಏರಿಕೆಯಾಗಿದೆ. ತರಕಾರಿ ಬೆಳೆಗಳಿಗೆ ಬೇಕಾದಷ್ಟು ಪ್ರಮಾಣದ ಮಳೆ ಆಗಿದ್ದರೂ ಇದ್ದಕ್ಕಿದ್ದಂತೆಯೇ ಬೆಲೆ ಏರಿಬಿಟ್ಟಿದೆ. 20 ದಿನಗಳ ಹಿಂದಷ್ಟೇ ₹ 20ರಿಂದ 30ರಷ್ಟಿದ್ದ ಟೊಮೆಟೊ ದರ ಇಂದು ಪ್ರತಿ ಕೆಜಿಗೆ ₹ 80ರಿಂದ 100ರಷ್ಟು ಏರಿದೆ.

‘ಗ್ರಾಹಕರು ಪರದಾಡುವಂತಾಗಿದ್ದು ರಾಜ್ಯವ್ಯಾಪಿ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಏನೂ ಮಾಡಲಾಗದೆ ಅಸಹಾಯಕರಾಗಿದ್ದೇವೆ’ ಎನ್ನುತ್ತಾರೆ ನಗರದ ಜೆ.ಪಿ. ಮಾರುಕಟ್ಟೆಯ ತರಕಾರಿ ವ್ಯಾಪಾರಿಗಳು.

‘ಮಾರುಕಟ್ಟೆಗೆ ಆವಕ ಕಡಿಮೆಯಾಗಿರುವುದು, ಇರುವ ಉತ್ಪನ್ನಗಳು ಹುಬ್ಬಳ್ಳಿ, ಬೆಳಗಾವಿಯಂಥ ದೊಡ್ಡ ಮಾರುಕಟ್ಟೆಗಳಿಗೆ ಹೆಚ್ಚಿನ ದರದ ನಿರೀಕ್ಷೆಯಲ್ಲಿ ಹೋಗುತ್ತಿರುವುದು ಸ್ಥಳೀಯ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ’ ಎಂದು ವ್ಯಾಪಾರಿಗಳು ವಿಶ್ಲೇಷಿಸುತ್ತಾರೆ.

ADVERTISEMENT

ಆದರೆ, ತರಕಾರಿ ಹೆಚ್ಚು ಬೆಳೆಯುವ ಚಿಲವಾಡಗಿ ಪ್ರದೇಶದ ರೈತರು ಹೇಳುವ ಪ್ರಕಾರ, ‘ಸರಿಯಾದ ಪ್ರಮಾಣದಲ್ಲಿ ಮಳೆ ಇಲ್ಲದೆ ಟೊಮೆಟೊ ಬೆಳೆಯುವುದೇ ಅಸಾಧ್ಯವಾಗಿದೆ. ಇದು ಉತ್ಪಾದನೆಯ ಮೇಲೇ ಪರಿಣಾಮ ಬೀರಿದೆ. ಸಹಜವಾಗಿ ನಾವು ಮಾರುಕಟ್ಟೆಗೆ ಕೊಡುವುದಾದರೂ ಹೇಗೆ’ ಎಂದು ಮರು ಪ್ರಶ್ನೆ ಹಾಕುತ್ತಾರೆ.
ಆದರೆ, ಇತರ ತರಕಾರಿಗಳು ಹೇಗೆ ಬೆಲೆ ಸ್ಥಿರತೆ ಕಾಯ್ದುಕೊಂಡಿವೆ ಎಂಬ ಪ್ರಶ್ನೆಗೆ ನಿಖರ ಉತ್ತರ ಸಿಗುತ್ತಿಲ್ಲ.

ಹೋಟೆಲ್‌ ಉದ್ಯಮಿಗಳು, ಬೀದಿಬದಿ ತರಕಾರಿ ವ್ಯಾಪಾರಿಗಳೂ ಗ್ರಾಹಕರಿಗೆ ಸಮಜಾಯಿಷಿ ನೀಡಲಾಗದೆ, ಇತ್ತ ಬೆಲೆ ಏರಿಕೆ ಪರಿಣಾಮವನ್ನು ನಿಭಾಯಿಸಲಾಗದ ಸ್ಥಿತಿಯಲ್ಲಿದ್ದಾರೆ.

ಮಳೆಗಾಲದಲ್ಲೇ ಹೀಗಾದರೆ ಮುಂದೆ ಬೇಸಗೆಯಲ್ಲಿ ಬೆಲೆಯ ಏರಿಕೆ ಹೇಗಿರಬಹುದು ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.