ADVERTISEMENT

ಕೊಪ್ಪಳ: ಬಾಧಿತ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 6:08 IST
Last Updated 21 ಏಪ್ರಿಲ್ 2017, 6:08 IST

ಕೊಪ್ಪಳ: ‘ತಾಲ್ಲೂಕಿನ ಹಿರೇಬಗನಾಳದ ಹರೇಕೃಷ್ಣ ಮೆಟಾಲಿಕ್ಸ್‌ ಕಂಪೆನಿ ಹೊರಸೂಸುವ ದೂಳಿನಿಂದ ಬೆಳೆ ನಾಶವಾಗಿದೆ’ ಎಂದು ಆರೋಪಿಸಿ ಕಾರ್ಖಾನೆಯಿಂದ ಬಾಧಿತ ರೈತರ ಬೆಂಬಲಿಸುವ ಒಕ್ಕೂಟದ ನೇತೃತ್ವದಲ್ಲಿ ನಗರದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಎದುರು ಧರಣಿ ನಡೆಯಿತು.
ಸಂತ್ರಸ್ತ ರೈತರಾದ ಹನುಮಂತಪ್ಪ ಕಡ್ಲಿ, ಸಿದ್ಧಪ್ಪ ಕಡ್ಲಿ ಮತ್ತು ರಾಮಣ್ಣ ಕಡ್ಲಿ ಕುಟುಂಬದವರು ಮತ್ತು ರೈತ ಮುಖಂಡರು ಮಾತನಾಡಿ, ‘ಕಾರ್ಖಾನೆಯ ವಿಷಕಾರಿ ಕಪ್ಪುದೂಳು ಮತ್ತು ಕರ್ಕಶ ಶಬ್ದದಿಂದ ಪರಿಸರ ಮಾಲಿನ್ಯ ಉಂಟಾಗಿದೆ. ಬೆಳೆ ಸಂಪೂರ್ಣ ನಾಶವಾಗಿದೆ. ರೈತ ಕುಟುಂಬಗಳು ಬೀದಿಪಾಲಾಗಿವೆ. ಕಡ್ಲಿ ಕುಟುಂಬದವರನ್ನು ಕಂಪೆನಿಯವರು ಬದುಕಲು ಬಿಡುತ್ತಿಲ್ಲ’ ಎಂದು ಆರೋಪಿಸಿದರು.

‘ನಷ್ಟ ಪರಿಹಾರಕ್ಕೆ ರೈತರು ಒತ್ತಾಯಿಸುವ ಪರಿಸ್ಥಿತಿ ಬಂದಿದೆ. ಇದಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯೇ ನೇರ ಹೊಣೆ’ ಎಂದು ದೂರಿದರು.
‘ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಬೇಕು. ಭೂಮಿ, ನದಿ ಮಾಲಿನ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಬಾಧಿತ ಗ್ರಾಮ ಮತ್ತು ಜನರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಪುನರ್ವಸತಿ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಹನುಮಂತಪ್ಪ ಹೊಳೆಯಾಚೆ, ವಿಠ್ಠಪ್ಪ ಗೊೋರಂಟ್ಲಿ, ವಕೀಲ ಎ.ವಿ.ಕಣವಿ, ಜೆ.ಬಾರದ್ವಾಜ್, ನಜೀರ್ ಸಾಬ್ ಮೂಲಿಮನಿ, ಕೆ.ಬಿ. ಗೋನಾಳ, ಭೀಮಸೇನ ಕಲಕೇರಿ, ಇಸ್ಮಾಯಿಲ್ ನಾಲಾಬಂದ್, ಗಾಳೆಪ್ಪ ಸುಣಗಾರ, ಡಿ.ಎಚ್.ಪೂಜಾರ, ಹೇಮರಾಜ ವೀರಾಪುರ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.