ADVERTISEMENT

ಕ್ರೀಡೆಯಿಂದ ದೈಹಿಕ, ಮಾನಸಿಕ ಬಲ ಹೆಚ್ಚಳ

ಕೊಪ್ಪಳ: ಜಿಲ್ಲಾ ಪೊಲೀಸ್‌ ಕ್ರೀಡಾಕೂಟ ಉದ್ಘಾಟಿಸಿದ ನ್ಯಾಯಾಧೀಶೆ ವಿಜಯಲಕ್ಷ್ಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2017, 9:56 IST
Last Updated 23 ಜನವರಿ 2017, 9:56 IST
ಕ್ರೀಡೆಯಿಂದ ದೈಹಿಕ, ಮಾನಸಿಕ ಬಲ ಹೆಚ್ಚಳ
ಕ್ರೀಡೆಯಿಂದ ದೈಹಿಕ, ಮಾನಸಿಕ ಬಲ ಹೆಚ್ಚಳ   

ಕೊಪ್ಪಳ: ವೈಯಕ್ತಿಕ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ದೈಹಿಕ ಶಕ್ತಿ ಹಾಗೂ ಮಾನಸಿಕ ಬಲವನ್ನು ಕ್ರೀಡೆಯಿಂದ ಪಡೆಯಬಹುದು ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವಿಜಯಲಕ್ಷ್ಮಿ ಎಸ್‌. ಉಪನಾಳ ಹೇಳಿದರು. ನಗರದ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ವಾರ್ಷಿಕ ಪೊಲೀಸ್‌ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.  

ಕ್ರೀಡೆ ದೇಹವನ್ನಷ್ಟೆ ಅಲ್ಲ, ಧನಾತ್ಮಕ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ. ಅಲ್ಲದೆ ಭಾತೃತ್ವ, ಗೌರವ, ಸಹೋದರತ್ವ ಭಾವನೆ ಬೆಳೆಯಲು ಕಾರಣ. ಕ್ರೀಡೆ ಜೀವನದ ಅವಿಭಾಜ್ಯ ಅಂಗ ಎಂದು ಅವರು ತಿಳಿಸಿದರು.

ಕ್ರೀಡಾಪಟುಗಳು ಸೋಲು–ಗೆಲುವು ಎರಡನ್ನೂ ಸಮಾನ ಭಾವನೆಯಿಂದ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಕ್ರೀಡಾಕೂಟಗಳಲ್ಲಿ ಬೇರೆ ಬೇರೆ ಭಾಗದ ಜನ ಒಂದೆಡೆ ಸೇರುವುದರಿಂದ ಅವರವರ ಸಂಸ್ಕೃತಿ, ಸಂಸ್ಕಾರದ ಪರಿಚಯವಾಗುತ್ತದೆ. ಇದು ನಾವೆಲ್ಲ ಒಂದು ಎಂಬ ಭಾವನೆ ಬೆಳೆಯಲು ಸಹಕಾರಿ ಎಂದರು.

ಕ್ರೀಡೆ ಶಿಕ್ಷಣದ ಒಂದು ಭಾಗವಾಗಬೇಕು. ಆದರೆ ಇತ್ತೀಚಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣಕ್ಕೆ ಮಾತ್ರ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಕ್ರೀಡಾಪಟುಗಳಿಗೂ ಬಹಳಷ್ಟು ಬೇಡಿಕೆ ಇರುವುದು ಕಂಡು ಬರುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದು ಅವರು ಹೇಳಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್‌ ಸ್ವಾಗತಿಸಿದರು. ಸಿಪಿಐ ರುದ್ರೇಶ್‌ ಉಜ್ಜನಕೊಪ್ಪ ನಿರೂಪಿಸಿದರು. ಡಿವೈಎಸ್‌ಪಿ ಸಂದಿಗವಾಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.