ADVERTISEMENT

ಗಂಗಾವತಿ ಬಂದ್: ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 11:27 IST
Last Updated 5 ಸೆಪ್ಟೆಂಬರ್ 2015, 11:27 IST

ಕಾರಟಗಿ: ಜಿಲ್ಲಾ ವಾಲ್ಮೀಕಿ ಸಮಾಜದಿಂದ ಸೆ. 9ರಂದು ಗಂಗಾವತಿ ಬಂದ್‌ ಹಮ್ಮಿಕೊಂಡಿದ್ದು, ನವಲಿ, ಸಿದ್ದಾಪುರ ಮತ್ತು ಕಾರಟಗಿ ಹೋಬಳಿ ವ್ಯಾಪ್ತಿಯ ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ ಸಮೀಪದ ಮರ್ಲಾನಹಳ್ಳಿ ವಾಲ್ಮೀಕಿ ದೇವಸ್ಥಾನದಲ್ಲಿ ಶುಕ್ರವಾರ ನಡೆಯಿತು.

ಮುಖಂಡರಾದ ಡಾ.ಕೆ.ಎನ್.ಪಾಟೀಲ್ ಮಾತನಾಡಿ, ಆಂಧ್ರಪ್ರದೇಶ ಮೂಲದ ಕಾಪು ಜನಾಂಗದ ಅನೇಕರು ಕೊಂಡಕಾಪು ಎಂದು ಪ್ರಮಾಣ ಪತ್ರ ಪಡೆದು ಪರಿಶಿಷ್ಟ ಪಂಗಡದ ಸೌಲಭ್ಯ ಪಡೆಯುತ್ತಿದ್ದಾರೆ. ನೈಜವಾದ ಜನಾಂಗಕ್ಕೆ ಅನ್ಯಾಯ ಆಗುತ್ತಿದೆ. ಬಾಪಿರಡ್ಡಿಕ್ಯಾಂಪ್‌ನ 25 ಜನರು ಜಾತಿ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದು, ಹೋರಾಟಕ್ಕೆ ಅಣಿಯಾಗುತ್ತಿದ್ದಂತೆ 21 ಪ್ರಮಾಣ ಪತ್ರಗಳನ್ನು ಅಧಿಕಾರಿಗಳು ವಾಪಸ್ ಪಡೆದು ಕೊಂಡಿದ್ದಾರೆ. ಪ್ರಮಾಣ ಪತ್ರ ನೀಡಿದ ಅಧಿಕಾರಿಗಳನ್ನು ವಜಾಗೊಳಿಸಬೇಕು. ಎಸ್.ಟಿ. ಜನಾಂಗಕ್ಕೆ ಶೇಕಡಾ 7.5ರಷ್ಟು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಮುಖಂಡ ನಾಗರಾಜ ಬಿಲ್ಗಾರ್, ಶಿವರಡ್ಡಿ ನಾಯಕ ಮಾತನಾಡಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವೇತನ, ವಿವಿಧ ಇಲಾಖೆಗಳಿಂದ ₨ 2.16 ಕೋಟಿ ಮಂಜೂರಾಗಿದ್ದರೂ ಬಳಕೆಯಾಗುತ್ತಿಲ್ಲ.  ನಮ್ಮ ಹಕ್ಕು ಪಡೆಯಲು ಹೋರಾಟ ಅನಿವಾರ್ಯ ಎಂದರು.

ಪ್ರಮುಖರಾದ ಅಂಭಣ್ಣ ನಾಯಕ, ಶಿವಣ್ಣ ಚಳ್ಳೂರು, ವೀರಣ್ಣ ಬೇರಗಿ, ಶರಣಪ್ಪ  ವಕೀಲ, ದ್ಯಾವಣ್ಣ ಅಚ್ಚೋಳ್ಳಿ, ಅಯ್ಯಪ್ಪ ಯರಡೋಣ, ದೊಡ್ಡಪ್ಪ, ರಾಮನಗೌಡ ಬುಕನಟ್ಟಿ, ಹನುಮಯ್ಯ ನಾಯಕ, ಗದ್ದೆಪ್ಪ ನಾಯಕ, ಗುಂಡಪ್ಪ ಮರ್ಲಾನಹಳ್ಳಿ, ತಿಮ್ಮಣ್ಣ ಹಾಲಸಮುದ್ರ ಸೇರಿದಂತೆ ಕಾರಟಗಿ, ಮರ್ಲಾನಹಳ್ಳಿ, ಸೋಮನಾಳ, ನಂದಿಹಳ್ಳಿ, ಸಿದ್ದಾಪುರ, ಕಕ್ಕರಗೋಳ, ಜಮಾಪುರ, ಬೂದಗುಂಪಾ, ಯರಡೋಣ, ಚಳ್ಳೂರು, ಹುಳ್ಕಿಹಾಳ, ಹುಳ್ಕಿಹಾಳ ಕ್ಯಾಂಪ್, ಗುಂಡೂರು, ತೋಂಡಿಹಾಳ, ಹಗೇದಾಳ, ರವಿನಗರ, ಬಸವಣ್ಣಕ್ಯಾಂಪ್, ಮೈಲಾಪುರ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.