ADVERTISEMENT

ಗಾಣಧಾಳ ಆರೋಗ್ಯ ಕೇಂದ್ರ ರೋಗಗ್ರಸ್ಥ!

ಉಮಾಶಂಕರ ಬ.ಹಿರೇಮಠ
Published 18 ನವೆಂಬರ್ 2017, 8:55 IST
Last Updated 18 ನವೆಂಬರ್ 2017, 8:55 IST
ಯಲಬುರ್ಗಾ ತಾಲ್ಲೂಕು ಗಾಣಧಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಹುಲ್ಲು ಬೆಳೆದಿರುವುದು
ಯಲಬುರ್ಗಾ ತಾಲ್ಲೂಕು ಗಾಣಧಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಹುಲ್ಲು ಬೆಳೆದಿರುವುದು   

ಯಲಬುರ್ಗಾ: ತಾಲ್ಲೂಕು ಕೇಂದ್ರದಿಂದ 50 ಕಿ.ಮೀ ದೂರದಲ್ಲಿರುವ ಗಾಣಧಾಳ ಗ್ರಾಮವು ಅಭಿವೃದ್ಧಿಯಿಂದ ವಂಚಿತವಾಗಿದೆ. ಗ್ರಾಮಸ್ಥರ ಆರೋಗ್ಯ ರಕ್ಷಣೆ ಹಿತದೃಷ್ಟಿಯಿಂದ ನಿರ್ಮಿಸಲಾದ ಪ್ರಾಥಮಿಕ ಆರೋಗ್ಯ ಕೇಂದ್ರವು ಸಹ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಆರೋಗ್ಯ ಕೇಂದ್ರಕ್ಕೆ ಒಬ್ಬ ನರ್ಸ್‌, ‘ಡಿ’ ದರ್ಜೆ ಸಿಬ್ಬಂದಿ ಹೊರತುಪಡಿಸಿದರೆ ವೈದ್ಯರಿಲ್ಲ. ಹಿರೇವಡ್ರಕಲ್ಲ, ಕಟಗಿಹಳ್ಳಿ, ಮರಕಟ್ಟ, ವನಜಬಾವಿ ಸೇರಿದಂತೆ ಒಟ್ಟು 12 ಗ್ರಾಮಗಳು ಈ ಕೇಂದ್ರದ ವ್ಯಾಪ್ತಿಗೆ ಬರುತ್ತವೆ. ಆದರೆ ವೈದ್ಯರು ಇಲ್ಲದ ಕಾರಣ ಕೆಲ ಗ್ರಾಮಸ್ಥರು ಇಲ್ಲಿ ಬರುವ ಬದಲು ಬೇರೆಡೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ.

‘ಇಲ್ಲಿನ ವೈದ್ಯರು ನಾಲ್ಕು ತಿಂಗಳ ಹಿಂದೆಯೇ ರಾಜೀನಾಮೆ ನೀಡಿದ್ದು, ಈವರೆಗೆ ಹೊಸ ವೈದ್ಯರ ನೇಮಕಾತಿ ಆಗಿಲ್ಲ. ವೈದ್ಯರಿಲ್ಲದೆ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ವೈದ್ಯಾಧಿಕಾರಿಗಳ ಎದುರು ಅಳಲು ತೋಡಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯ ನಿವಾಸಿ ಪ್ರವೀಣಕುಮಾರ ಪಾಟೀಲ ತಿಳಿಸಿದರು.

ADVERTISEMENT

‘ಆರೋಗ್ಯ ಕೇಂದ್ರದ ಸುತ್ತಲೂ ಗಿಡಗಂಟಿಗಳು ಬೆಳೆದಿವೆ. ಸುತ್ತಮುತ್ತ ತ್ಯಾಜ್ಯದ ರಾಶಿಗಳಿವೆ. ಜಾನುವಾರುಗಳನ್ನು ಆರೋಗ್ಯ ಕೇಂದ್ರದ ಸುತ್ತಮುತ್ತ ಕಟ್ಟಿ ಹಾಕಲಾಗುತ್ತದೆ. ಸುತ್ತಮುತ್ತಲ ಆವರಣವನ್ನು ಗಲೀಜು ಮಾಡಲಾಗುತ್ತಿದೆ’ ಎಂದು ತಿಳಿಸಿದರು.

‘ಆರೋಗ್ಯ ಕೇಂದ್ರಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವುದು, ಸಿಬ್ಬಂದಿ ನೇಮಿಸುವುದು ಸರ್ಕಾರದ ಆದ್ಯ ಕರ್ತವ್ಯ. ಜನಪ್ರತಿನಿಧಿಗಳು ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸಬೇಕು. ನಿರ್ಲಕ್ಷ್ಯ ತೋರಬಾರದು’ ಎಂದು ಕನ್ನಡಪರ ಸಂಘಟನೆ ಶರಣಗೌಡ ವನಜಬಾವಿ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.