ADVERTISEMENT

ಗೋಳು ಕೇಳೋರಿಲ್ಲ ಅತಂತ್ರ ಸ್ಥಿತಿಯಲ್ಲಿ ಬದುಕು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2017, 8:31 IST
Last Updated 6 ನವೆಂಬರ್ 2017, 8:31 IST
ಕುಷ್ಟಗಿ ಮಾರುತಿ ನಗರದ ಗೃಹಮಂಡಳಿಗೆ ಸೇರಿದ ಖಾಲಿ ನಿವೇಶನದಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು
ಕುಷ್ಟಗಿ ಮಾರುತಿ ನಗರದ ಗೃಹಮಂಡಳಿಗೆ ಸೇರಿದ ಖಾಲಿ ನಿವೇಶನದಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಮನೆಗಳನ್ನು ನಿರ್ಮಿಸಿಕೊಂಡಿರುವುದು   

ಕುಷ್ಟಗಿ: ಪಟ್ಟಣದ ಹೊರವಲಯದ ಕಂದಕೂರು ರಸ್ತೆಯಲ್ಲಿ ಗೃಹಮಂಡಳಿಗೆ ಸೇರಿದ ಮಾರುತಿ ನಗರದಲ್ಲಿ ಸುಮಾರು ಮೂರು ನೂರು ಕುಟುಂಬಗಳು ವಾಸಿಸುತ್ತಿದ್ದು ಎರಡು ದಶಕಗಳಿಂದ ಹೋರಾಟ ನಡೆಸುತ್ತಾ ಬಂದರೂ ಮನೆಗಳ ಹಕ್ಕುಪತ್ರ ದೊರೆತಿಲ್ಲ. ಇತ್ತ ಆ ಪ್ರದೇಶ ಪುರಸಭೆಗೆ ಬಡಾವಣೆ ಹಸ್ತಾಂತರಗೊಳ್ಳದ ಕಾರಣ ಅಲ್ಲಿಯ ಜನರು ಅತಂತ್ರ, ಅನಾಥ ಪ್ರಜ್ಞೆಯಲ್ಲಿಯೇ ಬದುಕುವಂತಾಗಿದೆ.

ಎರಡು ದಶಕದ ಹಿಂದೆ ಗೃಹಮಂಡಳಿ ಕೊಳಚೆ ಪ್ರದೇಶದ ನಿವಾಸಿಗಳ ಸಲುವಾಗಿ 200 ಮನೆಗಳನ್ನು ನಿರ್ಮಿಸಿತ್ತು. ಆದರೆ ಆ ಮನೆಗಳಲ್ಲಿ ಪ್ರಾರಂಭದಲ್ಲಿ ವಾಸಿಸಲು ಜನರು ಹಿಂಜರಿದ ಕಾರಣ ಗೃಹಮಂಡಳಿ ₹ 6 ಸಾವಿರ ಪಾವತಿಸಿದ ಯಾರೇ ಆಗಲಿ ಅವರಿಗೆ ಮನೆಗಳನ್ನು ಬಿಟ್ಟುಕೊಟ್ಟಿತ್ತು. ಬಡವರ ಹೆಸರಿನಲ್ಲಿ ಅನೇಕ ಪ್ರಭಾವಿಗಳು ಅಲ್ಲಿ ಮನೆ ಮತ್ತು ನಿವೇಶನಗಳನ್ನು ಗಿಟ್ಟಿಸಿಕೊಂಡು ನಂತರ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಮನೆಯ ಅಗತ್ಯ ಇಲ್ಲದ ಇನ್ನೂ ಕೆಲವರು ಬಾಡಿಗೆ ಕೊಟ್ಟುಹೋಗಿದ್ದಾರೆ ಎಂಬ ಆರೋಪವಿದೆ.

ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಇದ್ದರೂ ಜೆಸ್ಕಾಂ ದಾಖಲೆಗಳಲ್ಲಿ ಗೃಹಮಂಡಳಿ ಎಂಜಿನಿಯರ್ ಹೆಸರಿನಲ್ಲಿರುವುದರಿಂದ ಎಂಜಿನಿಯರ್ ಹೆಸರಿನಲ್ಲಿಯೇ ಜನರು ತಮ್ಮ ಮನೆಯ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಆದರೆ ಮನೆಗಳಲ್ಲಿ ತಾವು ವಾಸಿಸುವ ಮೊದಲೇ ಹತ್ತಾರು ಸಾವಿರ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿದಿದ್ದರೂ ಅದನ್ನೂ ಪಾವತಿಸುವಂತೆ ಜೆಸ್ಕಾಂ ತಾಕೀತು ಮಾಡುತ್ತಿದೆ. ಅಷ್ಟೊಂದು ಹಣ ಪಾವತಿಸುವ ಶಕ್ತಿ ನಮಗೆ ಇಲ್ಲ ಎಂದು ಜನರು ತಿಳಿಸಿದರು.

ADVERTISEMENT

ಮೊಸಳೆಕಣ್ಣೀರು: ಮನೆಗಳ ಮಾಲೀಕತ್ವವೇ ಇಲ್ಲದ ಕಾರಣ ಸರ್ಕಾರದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಗೃಹಮಂಡಳಿಯಿಂದ ಹಕ್ಕುಪತ್ರಗಳನ್ನು ಕೊಡಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾಯಿತು. ಅನೇಕಬಾರಿ ಪ್ರತಿಭಟನೆ, ಧರಣಿ ಸತ್ಯಾಗ್ರಹ, ಉಪವಾಸ ಸತ್ಯಾಗ್ರಹವನ್ನೂ ನಡೆಸಿದೆವು. ಆದರೆ ಹಾಲಿ ಮಾಜಿ ಶಾಸಕರು, ಅಧಿಕಾರಿಗಳಿಂದ ಕೇವಲ ಬಾಯಿಮಾತಿನ ಭರವಸೆಯ ಬಿಟ್ಟರೆ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಲ್ಲ. ಎಲ್ಲರೂ ಬರಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ ಎಂದೆ ಬುಡನ್‍ಸಾಬ್ ಗೌಡರ್, ರೇಣುಕಮ್ಮ, ಲಕ್ಷ್ಮವ್ವ ಇತರರು ಆಕ್ರೋಶ ವ್ಯಕ್ತಪಡಿಸಿದರು.

ಬಯಲಲ್ಲೇ ಬಹಿರ್ದೆಸೆ: ಸುಮಾರು ಮೂರು ನೂರು ಕುಟುಂಬಗಳು ಇರುವ ಇಲ್ಲಿ ಕೆಲವೇ ಜನರಿಗೆ ವೈಯಕ್ತಿಕ ಶೌಚಾಲಯವಿದೆ. ಬಹುತೇಕ ಜನ ಬಡವರು ಇದ್ದು, ಮನೆ ಅಥವಾ ನಿವೇಶನಗಳ ಹಕ್ಕುಪತ್ರ ಇಲ್ಲದ ಕಾರಣ ಸ್ವಚ್ಛ ಭಾರತ ಅಭಿಯಾನದಲ್ಲಿ ಸಹಾಯಧನ ದೊರೆಯುತ್ತಿಲ್ಲ. ಹಾಗಾಗಿ ಬಹಳಷ್ಟು ಜನರಿಗೆ ಸುತ್ತಲಿನ ಬಯಲು ಹೊಲಗದ್ದೆಗಳೇ ಬಹಿರ್ದೆಸೆ ತಾಣಗಳಾಗಿವೆ.

ಮಹಿಳೆಯರಿಗಾಗಿಯೇ 10 ಕೊಠಡಿಗಳಿರುವ ಸಾಮೂಹಿಕ ಶೌಚಾಲಯ ಇದ್ದರೂ ನಿರ್ವಹಣೆ ಇಲ್ಲದೆ ಹಾಳುಬಿದ್ದು ಗಿಡಗಂಟೆಗಳು ಆವರಿಸಿ ಹಾವು ಚೇಳು ಮನೆ ಮಾಡಿವೆ. ಹಾಗಾಗಿ ಮಹಿಳೆಯರು ಪುರುಷರು ಒಂದೇ ಕಡೆ ಬಹಿರ್ದೆಸೆಗೆ ತೆರಳುವ ದಯನೀಯ ಸ್ಥಿತಿ ಅನುಭವಿಸುವಂತಾಗಿದೆ ಎಂದು ಶರಣಮ್ಮ, ಲಕ್ಷ್ಮವ್ವ ಬೋಂದಾಳೆ, ಮಂಜಮ್ಮ ಇತರರು ಸಮಸ್ಯೆ ವಿವರಿಸಿದರು.

ಗೃಹಮಂಡಳಿ ಜಾಗದಲ್ಲಿ ತಾತ್ಕಾಲಿಕ ಮಸೀದಿ ತಲೆಎತ್ತಿದ್ದು ಸಂಜೆ ಮತ್ತು ಬೆಳಗಿನ ಜಾವ ಅದರ ಸುತ್ತಲೂ ಪ್ರಖರ ಬೆಳಕಿನ ವ್ಯವಸ್ಥೆ ಮಾಡಿರುತ್ತಾರೆ. ಧ್ವನಿವರ್ಧಕವನ್ನೂ ಅಳವಡಿಸುವುದರಿಂದ ಆ ಸಮಯದಲ್ಲಿ ಮಹಿಳೆಯರು ಬಹಿರ್ದೆಸೆಗೆ ಹೋಗದಂತಾಗಿದೆ ಎಂದು ಇನ್ನೂ ಕೆಲವರು ಅಳಲು ತೋಡಿಕೊಂಡರು.

ಈ ಕುರಿತು ವಿವರಿಸಿದ ಪುರಸಭೆ ಮುಖ್ಯಾಧಿಕಾರಿ ಸತೀಶ ಚವಡಿ, ಸಾಮೂಹಿಕ ಶೌಚಾಲಯಕ್ಕೆ ನೀರಿನ ಕೊರತೆ ಇದೆ. ಸ್ವಚ್ಛಭಾರತ ಅಭಿಯಾನದಲ್ಲಿ ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಕಲ್ಪಿಸಲು ಸಾಧ್ಯವೆ ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.