ADVERTISEMENT

ಚಂದಾಲಿಂಗೇಶ್ವರ ಜಾತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 7 ಮೇ 2015, 7:24 IST
Last Updated 7 ಮೇ 2015, 7:24 IST

ಹನುಮಸಾಗರ: ಐತಿಹಾಸಿಕ ಕ್ಷೇತ್ರ ಚಂದಾಲಿಂಗೇಶ್ವರ ಜಾತ್ರೆಗೆ ಬುಧವಾರ ಮನ್ನೇರಾಳ ಗ್ರಾಮದಿಂದ ಸಕಲ ಪೂಜೆಯೊಂದಿಗೆ ಮೆರವಣಿಗೆಯ ಮೂಲಕ ದೇವರುಗಳನ್ನು ಚಂದಾಲಿಂಗಕ್ಕೆ ಕರೆ ತರುವ ಮೂಲಕ ಚಾಲನೆ ನೀಡಲಾಯಿತು.

ಜಾತ್ರಾ ಮಹೋತ್ಸವದ ಆರಂಭದ ಕಾರ್ಯಕ್ರಮವಾದ ಖಂಡ (ಖಡ್ಗ) ಪೂಜೆಯನ್ನು ಮನ್ನೇರಾಳ ಗ್ರಾಮದಲ್ಲಿ ವಿಜೃಂಭಣೆಯಿಂದ ನೆರವೇರಿ­ಪಪಸಲಾಗುತ್ತದೆ. ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಚಂದಾಲಿಂಗ ಕ್ಷೇತ್ರದಲ್ಲಿ ಆರಂಭವಾಗುವುದು ವಾಡಿಕೆ.

ಬೆಳಿಗ್ಗೆ ಮನ್ನೇರಾಳ ಗ್ರಾಮದಲ್ಲಿ ಖಂಡ ಪೂಜೆಯನ್ನು ನೆರವೇರಿಸ­ಲಾಯಿತು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಖಂಡ ದೇವರ ಮೆರವಣಿಗೆ ನಡೆಯಿತು. ಡೊಳ್ಳಿನ ಮೇಳ, ಭಜನೆ, ಛತ್ರಿ ಚಾಮರಗಳು ಮೆರವಣಿಗೆಗೆ ಕಳೆ ತಂದವು. ಖಂಡ ಪೂಜೆಯ ನಿಮಿತ್ತ ಬೆಳಿಗ್ಗೆ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.

‘ಖಂಡ ಹಿಡಿದ ಯುವಕನ ಜೊತೆಗೆ ಹರಕೆ ಹೂತ್ತ ನೂರಾರು ಭಕ್ತರು ಸುವಾರು 4ಕಿ.ಮೀ ದೂರದಲ್ಲಿರುವ ಚಂದಾಲಿಂಗ ದೇವಸ್ಥಾನದ ಕಡೆಗೆ ಓಡುತ್ತಲೇ ಸಾಗುವುದು ವಿಶೇಷ. ಇದು ಅನಾದಿ ಕಾಲದಿಂದಲೂ ನಡೆದ ಬಂದ ಸಂಪ್ರದಾಯ. ಖಂಡ ಪೂಜೆ ನಮ್ಮೂರಿಗೆ ಒಂದು ದೊಡ್ಡ ಹಬ್ಬ ಇದ್ದ ಹಾಗೆ, ಖಂಡ ಹಿಡಿದ ವ್ಯಕ್ತಿ ದೇವರಿಗೆ ಸಮಾನ. ದೇವರು ನಮ್ಮೂರಿಂದ ಶ್ರೀಕ್ಷೇತ್ರಕ್ಕೆ ಹೋಗುವುದು ನಮ್ಮ ಗ್ರಾಮಕ್ಕೆ ಹೆಮ್ಮೆಯ ವಿಷಯ’ ಎಂದು ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಹುಲ್ಲನಗೌಡ ಛಬ್ಬಿ ಹೇಳಿದರು.

ಗುರುವಾರ ಕೊಂತಪಂದ್ಯ, ನುಡಿ ಹೇಳುವುದು, ಗೊಗ್ಗಯ್ಯನವರಿಂದ ಕಬ್ಬಿಣ ಸರಪಳಿ ಹರಿಯುವ ಕಾರ್ಯಕ್ರಮ ನಡೆಯಲಿವೆ. ಶರಣಪ್ಪ ಮೂಲಿಮನಿ, ಬಸವಂತಪ್ಪ ಕಂಪ್ಲಿ, ಶರಣಪ್ಪ ಅಗಸಿಮುಂದಿನ, ನಿಂಗಪ್ಪ ಗುನ್ನಾಳ, ಗದಿಗೆಪ್ಪ ಬ್ಯಾಳಿ, ಶಂಕ್ರಪ್ಪ ಹನುಮನಾಳ, ಮಹಾಂತಯ್ಯ ವಾರಿಕಲ್‌, ಗೂಳಪ್ಪ ಪಾಲಕರ, ಸಣ್ಣೆಪ್ಪ ಕುರಿ, ಚಂದನಗೌಡ ಪೊಲೀಸ್‌ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.