ADVERTISEMENT

ಜಂಟಿ ಖಾತೆ ನಿರ್ವಹಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:17 IST
Last Updated 1 ಡಿಸೆಂಬರ್ 2017, 6:17 IST

ಕೊಪ್ಪಳ: ಅಂಗನವಾಡಿಗಳ ಆರ್ಥಿಕ ವೆಚ್ಚಗಳಿಗೆ ಸಂಬಂಧಿಸಿದಂತೆ ಬಾಲವಿಕಾಸ ಸಮಿತಿ ಅಧ್ಯಕ್ಷರು (ಗ್ರಾಮ ಪಂಚಾಯಿತಿ ಸದಸ್ಯರು) ಮತ್ತು ಕಾರ್ಯಕರ್ತರ ಜಂಟಿ ಖಾತೆ ತೆರೆದು ನಿರ್ವಹಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ನೇತೃತ್ವದಲ್ಲಿ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಯಿತು.

ಈ ರೀತಿ ಜಂಟಿ ಖಾತೆ ತೆರೆದು ಸಮಸ್ಯೆಗಳುಂಟಾದ ಕಾರಣ ಆ ಖಾತೆಗಳನ್ನು ಬಂದ್‌ ಮಾಡಿಸಲಾಯಿತು. ಇದರಿಂದ ಅಂಗನವಾಡಿ ಕೇಂದ್ರಗಳ ನಿರ್ವಹಣೆಗೆ ಸಮಸ್ಯೆ ಉಂಟಾಗುತ್ತಿದೆ. ಇದರಿಂದ ಕಾರ್ಯಕರ್ತೆಯರು ಬಲಿಪಶು ಆಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಇತರ ಬೇಡಿಕೆಗಳು: ತರಕಾರಿ, ಮೊಟ್ಟೆ, ಗ್ಯಾಸ್ ವೆಚ್ಚಗಳನ್ನು ಮುಂಚಿತವಾಗಿ ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡಬೇಕು. ಅಡುಗೆ ಮಾಡಲು ಹೆಚ್ಚುವರಿ ಕುಕ್ಕರ್‌ ಮತ್ತು ಒಲೆ ಒದಗಿಸಬೇಕು. ಎರಡು ಅನಿಲ ಸಿಲಿಂಡರ್‌, ಕುಡಿಯುವ ನೀರು ಪೂರೈಸಬೇಕು. ದಾಖಲೆ ನಿರ್ವಹಿಸುವ ಹೆಚ್ಚುವರಿ ಹೊಣೆಗಾರಿಕೆ ತೆಗೆದುಹಾಕಬೇಕು.

ADVERTISEMENT

ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ಗೌರವಧನ ಬಿಡುಗಡೆ ಆಗಬೇಕು. ನಿವೃತ್ತ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ನಿವೃತ್ತಿ ಹಣ, ಮರಣ ಹೊಂದಿದವರಿಗೆ ಪರಿಹಾರ ನಿಧಿ ಬಿಡುಗಡೆ ಆಗಬೇಕು ಎಂದು ಒತ್ತಾಯಿಸಿದರು.

ಕೇಂದ್ರಗಳಿಗೆ ಗುಣಮಟ್ಟದ ಆಹಾರ ಪದಾರ್ಥ ಸರಬರಾಜು ಆಗಬೇಕು. ಸಮಯಕ್ಕೆ ಸರಿಯಾಗಿ ಸರಬರಾಜು ಮಾಡಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ ಹಣ ಆಯಾಯಾ ತಿಂಗಳೇ ಬಿಡುಗಡೆ ಮಾಡಬೇಕು. ಖಾಲಿ ಇರುವ ಕೇಂದ್ರಕ್ಕೆ ಅರ್ಹ ಸಹಾಯಕಿಗೆ ಮುಂಬಡ್ತಿ ಕೊಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ತಾಲ್ಲೂಕು ಅಧ್ಯಕ್ಷೆ ಅನ್ನಪೂರ್ಣಾ, ಶೈಲಜಾ, ಸಿ.ಐ.ಟಿ.ಯು.ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸಿಂಸಾಬ ಸರ್ದಾರ, ಸುಂಕಪ್ಪ ಗದಗ, ಕಾಶಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.