ADVERTISEMENT

ಜಂಪ್‌ರೋಪ್‌ಗೆ ಒಲಿಂಪಿಕ್‌ ಪ್ರವೇಶ ಅರ್ಹತೆ

13ನೇ ಕಿರಿಯರ ರಾಷ್ಟ್ರೀಯ ಜಂಪ್‌ರೋಪ್ ಕ್ರೀಡಾಕೂಟ ಆರಂಭ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 6:33 IST
Last Updated 9 ಜನವರಿ 2017, 6:33 IST

ಹನುಮಸಾಗರ:  ಜಂಪ್‌ರೋಪ್ ಕ್ರೀಡೆ ಶಾಲಾ ಪಠ್ಯದಲ್ಲಿ ಅಚ್ಚಾಗಿ, ಶಾಲಾ ಪಂದ್ಯವಾಗಿ, ಒಲಂಪಿಕ್‌ ಪ್ರವೇಶಿಸುವ ಅರ್ಹತೆ ಹೊಂದಿದ್ದು, ಇದು ನಮ್ಮ ದೇಶೀಯ ಕ್ರೀಡೆ ಎಂಬುದು ನಮಗೆ ಹೆಮ್ಮೆಯ ವಿಷಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಭಾನುವಾರ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 13ನೇ ಕಿರಿಯರ ರಾಷ್ಟೀಯ ಜಂಪ್‌ರೋಪ್ ಕ್ರೀಡಾಕೂಟ ಉದ್ಘಾಟಸಿ ಮಾತನಾಡಿದರು.
ಭಾರತದ ಬೀದಿ ಬೀದಿಗಳಲ್ಲಿ ಹಗ್ಗ ಹಿಡಿದು ಬಾಲೆಯರು ಆಡುವ ಈ ಆಟ ಅಂತರಾಷ್ಟ್ರೀಯ ಮಟ್ಟಕ್ಕೆ ಏರಿದೆ ಎಂದರೆ ಈ ಕ್ರೀಡೆಯಲ್ಲಿ ಇರುವ ಅಂಶಗಳೇ ಇದಕ್ಕೆ ಕಾರಣವಾಗಿದೆ. ದೇಶದ ವಿವಿಧ ಭಾಗಗಳಿಂದ ಈ ಗ್ರಾಮಕ್ಕೆ ಬಂದ ಕ್ರೀಡಾಪಟುಗಳನ್ನು ಅತಿಥಿಯಂತೆ ಕಂಡು ರಾಜ್ಯದ ಸಂಸ್ಕೃತಿಯನ್ನು ದೇಶದ ತುಂಬ ಹರಡುವಲ್ಲಿ ಶ್ರಮಿಸಬೇಕು ಎಂದು ಹೇಳಿದರು.

ಮಾಜಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾತನಾಡಿ, ನಮ್ಮ ಗ್ರಾಮೀಣ ಪ್ರದೇಶದ ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ ನೀಡಲು ಈ ಕ್ರೀಡೆ ನೆರವಾಗಿದೆ.

ಭಾರತೀಯ ಜಂಪ್‌ರೋಪ್‌ ಸಂಸ್ಥೆಯ ಅಧ್ಯಕ್ಷ ಮಹ್ಮದ್‌ ಅರ್ಷದ್‌ ಮಾತನಾಡಿ, ಇಲ್ಲಿಯವರೆಗೆ ನಡೆದ 12 ರಾಷ್ಟೀಯ ಜಂಪ್‌ರೋಪ್ ಕ್ರೀಡಾಕೂಟದಲ್ಲಿ ಕೇವಲ 12 ರಿಂದ 15 ರಾಜ್ಯಗಳ ಕ್ರೀಡಾಪಟುಗಳು ಭಾಗವಹಿಸುತ್ತಿದ್ದರು. ಆದರೆ ಈ 13ನೇ ಕ್ರೀಡಾಕೂಟದಲ್ಲಿ ದೇಶದ 21 ರಾಜ್ಯಗಳಿಂದ 520 ಕ್ರೀಡಾಪಟುಗಳು ಇಲ್ಲಿ ನೆರೆದಿದ್ದು ರಾಷ್ಟ್ರೀಯ ದಾಖಲೆಗೆ ಈ ಗ್ರಾಮ ಕಾರಣವಾಗಿದೆ ಎಂದು ಹೇಳಿದರು.

ಸಂಸ್ಥೆಯ ಮುಖ್ಯಸ್ಥ ರಾಘವೇಂದ್ರ ಜಮಖಂಡಿಕರ ಮಾತನಾಡಿ, ಆರು ನಿಮಿಷದಲ್ಲಿ ಎರಡು ಮೈಲು ಸೈಕಲ್‌ ಓಡಿಸಿದಷ್ಟು, ನಿರಂತರ ಎರಡು ಸೆಟ್ ಟೆನಿಸ್ ಆಟದಿಂದ, ನೀರಿನಲ್ಲಿ 12 ನಿಮಿಷ ಈಜಾಡಿದರೆ, 30 ನಿಮಿಷ ಜಾಗಿಂಗ್ ಮಾಡಿದರೆ ಸಿಗುವಷ್ಟು ಆರೋಗ್ಯ ಲಾಭ, 10 ನಿಮಿಷ ಜಂಪ್‌ರೋಪ್‌ ಆಡಿದಾಗ ಸಿಗುತ್ತದೆ ಎಂದರು.
ರಾಜ್ಯ ಜಂಪ್‌ರೋಪ್‌ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್‌ರಜಾಕ್‌ ಟೇಲರ್‌ ಮಾತನಾಡಿ, 1970 ರಿಂದ ಅಮೆರಿಕ ಸೇರಿದಂತೆ ಯುರೋಪ್‌ ರಾಷ್ಟ್ರಗಳಲ್ಲಿ ಈ ಕ್ರೀಡೆ ಪ್ರಚಲಿತದಲ್ಲಿದ್ದು, ಅಲ್ಲಿ ಶಾಲಾ ಪಂದ್ಯವಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಭೀಮಣ್ಣ ಅಗಸಿಮುಂದಿನ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಛತ್ತೀಸ್‌ಗಡ ರಾಜ್ಯದ ಕ್ರೀಡಾಪಟುಗಳು ಪ್ರದರ್ಶನ ಪಂದ್ಯ ಆಡಿದರು. ಮಧ್ಯಪ್ರದೇಶದ ಕ್ರೀಡಾಪಟು ಸೌಮ್ಯ ಅಗರವಾಲ್‌ ಪ್ರಮಾಣ ವಚನ ಬೋಧಿಸಿದರು.

ಜಿ.ಪಂ ಸದಸ್ಯ ಕೆ.ಮಹೇಶ, ಮುಖಂಡರಾದ ಬವರಾಜ ಹಳ್ಳೂರ, ಆರ್‌ಡಿಸಿಸಿ ನಿರ್ದೇಶಕ ವಿಶ್ವನಾಥ ಕನ್ನೂರ, ದೈಹಿಕ ಶಿಕ್ಷಣಾಧಿಕಾರಿ ವಿ.ಬಿ.ದಾದ್ಮಿ, ಪಿಎಸ್‌ಐ ರಾಮಣ್ಣ ನಾಯಕ, ಡಾ.ಶರಣು ಹವಾಲ್ದಾರ, ಪ್ರಹ್ಲಾದರಾಜ ದೇಸಾಯಿ ಇದ್ದರು. ಅಬ್ದುಲ್‌ಕರೀಮ ವಂಟೆಳಿ, ವಿಷ್ಣು ರಜಪೂತ ಕಾರ್ಯಕ್ರಮ
ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.