ADVERTISEMENT

ಜನಪ್ರತಿನಿಧಿಗಳ ನಿರ್ಲಕ್ಷ್ಯ: ಆರೋಪ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2017, 5:18 IST
Last Updated 22 ಏಪ್ರಿಲ್ 2017, 5:18 IST
ಯಲಬುರ್ಗಾ: ‘ತಾಲ್ಲೂಕಿನ ಅಧಿಕಾರಿಗಳು ಕಾಂಗ್ರೆಸ್‌ ಜನಪ್ರತಿನಿಧಿಗಳನ್ನು ಹೊರತುಪಡಿಸಿ, ಇತರೆ ಪಕ್ಷದ ಸದಸ್ಯರನ್ನು  ಸಂಪೂರ್ಣ ನಿರ್ಲಕ್ಷಿಸುತ್ತಿದ್ದಾರೆ. ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿಲ್ಲ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ನೇರ ಹೊಣೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಗಂಗಮ್ಮಈಶಣ್ಣ ಗುಳಗಣ್ಣವರ್‌ ಆರೋಪಿಸಿದರು. 
 
ಇಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿ, ಈಚೆಗೆ ಪಟ್ಟಣದಲ್ಲಿ ನಡೆದ ಅಂಗವಿಕಲರಿಗೆ ಸೈಕಲ್‌ ವಿತರಣಾ ಸಮಾರಂಭ ಕಾಂಗ್ರೆಸ್‌ ಮುಖಂಡರಿಗೆ  ಸೀಮಿತವಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ಸಚಿವ ಬಸವರಾಜ ರಾಯರಡ್ಡಿ ಮಾತನಾಡಿ, ‘ಆಮತ್ರಣ ಪತ್ರಿಕೆಯಲ್ಲಿ ಹೆಸರು ಹಾಕುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ’ ಹೇಳಿದರು. ‘ನಿರ್ಮಿತಿ, ಸಣ್ಣ ನೀರಾವರಿ, ಸಣ್ಣ ಕೈಗಾರಿಕೆ ಇಲಾಖೆ ಅಧಿಕಾರಿಗೆ ನೋಟಿಸ್‌ ಜಾರಿ ಮಾಡಿದರೂ ಸಭೆಗೆ ಹಾಜರಾಗುತ್ತಿಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಗೌಡ್ರ, ಉಪಾಧ್ಯಕ್ಷ ವಿಶ್ವನಾಥ ಆರೋಪಿಸಿದರು. 
 
ನಿರ್ಮಿತಿ ಕೇಂದ್ರದ ಅನೇಕ ಕಾಮಗಾರಿ ಅರ್ಧಕ್ಕೆ ನಿಂತಿವೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಗಂಗಮ್ಮ ತರಾಟೆಗೆ ತಗೆದುಕೊಂಡರು. ‘ಸರಿಯಾಗಿ ಕಾಮಗಾರಿ ನಿರ್ವಹಿಸದ ಕಾರಣ ನಿರ್ಮಿತಿ ಕೇಂದ್ರಕ್ಕೆ ಹೊಸ ಕಾಮಗಾರಿ ಹಂಚಿಕೆಯಾಗಿಲ್ಲ. ನಿರ್ಮಿತಿ ಕೇಂದ್ರದಿಂದ ಕಾಮಗಾರಿ ವಾಪಸ್ಸು ಪಡೆಯುವ ಬಗ್ಗೆ ಠರಾವು ಪಾಸ್‌ ಮಾಡುವಂತೆ’ ರಾಯರಡ್ಡಿ ಸಲಹೆ ನೀಡಿದರು.
 
‘ಕೊಪ್ಪಳ ಮತ್ತು ಯಲಬುರ್ಗಾ ತಾಲ್ಲೂಕಿನ 36 ಕೆರೆಗಳ  ಅಭಿವೃದ್ಧಿಗೆ ₹290 ಕೋಟಿ ಮಂಜೂರಾಗಿದ್ದು, ಮೇ ತಿಂಗಳಲ್ಲಿ ಚಾಲನೆ ದೊರೆಯಲಿದೆ. ಹೊಸ ಸೇತುವೆ  ನಿರ್ಮಾಣಕ್ಕೆ ₹30 ಕೋಟಿ ಬಿಡುಗಡೆಯಾಗಿದೆ’ ಎಂದು ಸಚಿವರು ತಿಳಿಸಿದರು.
 
ತಹಶೀಲ್ದಾರ್‌ ರಮೇಶ ಅಳವಂಡಿಕರ್‌ ಮಾತನಾಡಿ, ‘ಮಂಗಳೂರು ಗ್ರಾಮದಲ್ಲಿ ಮೇವು ಬ್ಯಾಂಕ್‌ ಸ್ಥಾಪಿಸಲಾಗುವುದು.₹2 ಪಾವತಿಸಿ 1 ಕೆ.ಜಿ. ಮೇವು ಪಡೆಯಬಹುದು’ ಎಂದರು. ಇಟಗಿ ಗ್ರಾಮದಲ್ಲಿ ಮೇವು ಬ್ಯಾಂಕ್‌ ತೆರೆಯುವಂತೆ ಸಚಿವರು ಸೂಚಿಸಿದರು.  
***
ಕುಡಿಯುವ ನೀರಿಗೆ ಕ್ರಮ: ರಾಯರಡ್ಡಿ
ಕೊಪ್ಪಳ:
‘ಕುಡಿಯುವ ನೀರು ಪೂರೈಕೆಗೆ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ನಗರದಲ್ಲಿ ಶುಕ್ರವಾರ ಬರ ನಿರ್ವಹಣೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ತುಂಗಭದ್ರಾ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ಕುಡಿಯುವ ನೀರಿಗೆ ತೀವ್ರ ತೊಂದರೆ ಆಗಿದೆ. ಜಿಲ್ಲೆಗೆ ನೀರು ಪೂರೈಕೆಗೆ ನಾರಾಯಣಪುರ, ಆಲಮಟ್ಟಿ ಜಲಾಶಯಗಳ ಅಧಿಕಾರಿಗಳೊಡನೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಹಳ್ಳಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಜಿಲ್ಲೆಯಲ್ಲಿ ಒಟ್ಟು 7 ಗೋಶಾಲೆಗಳಿದ್ದು, ಇನ್ನೂ ಮೂರನ್ನು ಇರಕಲ್‌ಗಡ, ತಾವರಗೆರಾ, ಹುಲಿಹೈದರದಲ್ಲಿ ತೆರೆಯಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ, ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ್, ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ, ಹೆಚ್ಚುವರಿ  ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.