ADVERTISEMENT

ಜಿಎಸ್‌ಟಿ: ಪಾತ್ರೆ ವ್ಯಾಪಾರಿಗಳಿಗೆ ತಾಪತ್ರಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 6:31 IST
Last Updated 19 ಜುಲೈ 2017, 6:31 IST

ಕೊಪ್ಪಳ: ಸರಕು ಮತ್ತು ಸೇವಾ ತೆರಿಗೆ ಜಾರಿ ಬಳಿಕ ನಮ್ಮ ವ್ಯಾಪಾರ ಬಾಣಲೆಗೆ ಬಿದ್ದಿದೆ. ಇದು ಕೊಪ್ಪಳದಲ್ಲಿ ಪಾತ್ರೆ ವ್ಯಾಪಾರಿಗಳು ಜಿಎಸ್‌ಟಿ ಪದ್ಧತಿಯನ್ನು ವ್ಯಾಖ್ಯಾನಿಸುವ ಪರಿ. ನಾವು ಮಾತ್ರ ಬಾಣಲೆಯಿಂದ ಬೆಲೆ ಏರಿಕೆ ಎಂಬ ಬೆಂಕಿಗೆ ಬಿದ್ದಿದ್ದೇವೆ ಎಂದು ಗ್ರಾಹಕರು ವಿಶ್ಲೇಷಿಸುತ್ತಾರೆ. ಜಿಎಸ್‌ಟಿ ಹೆಸರಿನಲ್ಲಿ ಇಂಥದ್ದೊಂದು ಬೆಲೆ ಸಂಘರ್ಷ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ.

‘ತೆರಿಗೆಯ ಹೊಸ ವ್ಯವಸ್ಥೆ ಬಳಿಕ ಅಲ್ಯೂಮಿನಿಯಂ, ಸ್ಟೀಲ್‌ ವಸ್ತುಗಳ ಬೆಲೆ ಏರಿದೆ. ಸಹಜವಾಗಿ ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದ್ದು, ಮದುವೆ, ಗೃಹಪ್ರವೇಶ ಮತ್ತಿತರ ಶುಭಕಾರ್ಯ ಗಳಿಗೆ ಲೋಹ ವಸ್ತುಗಳನ್ನು ಖರೀದಿಸುವ ಪ್ರಮಾಣ ಕಡಿಮೆಯಾಗಿದೆ’ ಎಂದು ನಗರದ ಲೋಹ ವ್ಯಾಪಾರಿಯೊಬ್ಬರು ಹೇಳಿದರು. ‘ಈ ವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಇಲ್ಲ. ನಮ್ಮನ್ನೂ ಗೊಂದಲಕ್ಕೆ ಕೆಡವಿದ್ದಾರೆ’ ಎಂದರು. 

ಬಡವರ ಬೆಳ್ಳಿಗೆ ಶೇ 12 ತೆರಿಗೆ: ‘ಅಗ್ಗದ ಲೋಹ (ಬಡವರ ಬೆಳ್ಳಿ) ಅಲ್ಯೂಮಿನಿಯಂಗೆ ರಾಜ್ಯ ಸರ್ಕಾರ 2 ವರ್ಷಗಳ ಹಿಂದೆ ತೆರಿಗೆ ರದ್ದುಗೊಳಿಸಿತ್ತು. ಈಗ ಆ ವಸ್ತುಗಳಿಗೆ ಶೇ 12ರಷ್ಟು ತೆರಿಗೆ ಹೇರಲಾಗಿದೆ. ಇದರಿಂದ ಕೆಳ ಮಧ್ಯಮ ವರ್ಗದವರು ಅಲ್ಯೂಮಿನಿಯಂ ವಸ್ತುಗಳನ್ನೂ ಮದುವೆ ಸಂದರ್ಭ ಉಡುಗೊರೆಯಾಗಿ ಕೊಡಲು ಹಿಂದೇಟು ಹಾಕುತ್ತಾರೆ’ ಎಂದು ಅವರು ತಿಳಿಸಿದರು.

ADVERTISEMENT

‘ತೆರಿಗೆ ನೀತಿ ನಿರೂಪಕರ ಪ್ರಕಾರ, ಮಿಕ್ಸರ್‌, ಗ್ರೈಂಡರ್‌ ಇತ್ಯಾದಿ ಐಷಾರಾಮಿ ವಸ್ತುಗಳ ಪಟ್ಟಿಯಲ್ಲಿ ಬರುತ್ತದೆ. ಅವುಗಳ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಲಾಗಿದೆ. ಈಗ ಒರಳು ಕಲ್ಲು, ರುಬ್ಬುವ ಕಲ್ಲು ಎಷ್ಟು ಮಂದಿ ಬಳಸುತ್ತಾರೆ? ಎಂದು ಪ್ರಶ್ನಿಸಿದರು. ಗ್ರಾಹಕರೂ ವ್ಯಾಪಾರಿಗಳ ಮಾತನ್ನು ಅನುಮೋದಿಸುತ್ತಾರೆ. ‘ಜಿಎಸ್‌ಟಿ ಹೆಸರಿನಲ್ಲಿ ವಿಪರೀತ ತೆರಿಗೆ ಹೇರುವುದರಿಂದ ನಮಗೆ ಬಿಲ್‌ ರಹಿತ ವ್ಯಾಪಾರವೇ ಸರಿ ಎನಿಸುತ್ತದೆ’ ಎಂದು ಗ್ರಾಹಕರೊಬ್ಬರು ಹೇಳಿದರು.

‘ಪುಟ್ಟ ಹೋಟೆಲ್‌, ಚಹಾದಂಗಡಿ ಇಟ್ಟುಕೊಂಡು ಸ್ವಂತ ಉದ್ಯೋಗ ಮಾಡುವವರೂ ಮಿಕ್ಸರ್‌, ಗ್ರೈಂಡರ್‌,  ಮೈಕ್ರೋವೇವ್‌ ಒವೆನ್ ಬಳಸುತ್ತಾರೆ. ಹಾಗಿದ್ದರೆ ಅವರೆಲ್ಲಾ ಶ್ರೀಮಂತರೇ? ಅವರು ‘ಐಷಾರಾಮಿ’ ಎಂಬ ಕಾರಣಕ್ಕೆ ಈ ವಸ್ತುಗಳನ್ನು ಬಳಸುತ್ತಾರೆಯೇ’ ಎಂಬ ಪ್ರಶ್ನೆ ಬಹುತೇಕ ಜನರಲ್ಲಿ ಕಾಡುತ್ತಿದೆ. 

‘ಮಿಕ್ಸರ್‌, ಗ್ರೈಂಡರ್‌ ತಯಾರಿ ಕಾ ಘಟಕಗಳೂ ಸಣ್ಣ ಕೈಗಾರಿಕೆ ವ್ಯಾಪ್ತಿಯೊಳಗೆ ಬರುತ್ತವೆ. ಆ ಉತ್ಪನ್ನಗಳು ಮಾರುಕಟ್ಟೆಗೆ ಬಂದಾಗ ವಿಪರೀತ ಬೆಲೆ ಏರಿಸುವುದು ಏಕೆ’ ಎಂದು ಗ್ರಾಹಕರು ಮತ್ತು ಉದ್ಯಮ ವಲಯದವರು ಪ್ರಶ್ನಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.