ADVERTISEMENT

ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸಿ

ಮಲೇರಿಯಾ ವಿರೋಧಿ ಮಾಸಾಚರಣೆ; ಜಿ.ಪಂ ಸಿಇಒ ವೆಂಕಟರಾಜಾ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 13:11 IST
Last Updated 3 ಜೂನ್ 2018, 13:11 IST

ಕೊಪ್ಪಳ: ‘ಮಲೇರಿಯಾ ನಿವಾರಣೆ ಚೌಕಟ್ಟಿನ ಅನುಸಾರ 2025 ವೇಳೆಗೆ ಕೊಪ್ಪಳ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಶ್ರಮಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಸೂಚನೆ ನೀಡಿದರು.

ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಮಲೇರಿಯಾ ರೋಗದ ಹರಡುವಿಕೆ, ನಿಯಂತ್ರಣ ಹಾಗೂ ತಡೆಗಟ್ಟಲು ಕೈಗೊಳ್ಳಬೇಕಾದ ಮುಂಜಾಗ್ರತ ಕ್ರಮಗಳ ಕುರಿತು ಶನಿವಾರ ನಡೆದ ಜಿಲ್ಲಾ ಮಟ್ಟದ ಅಂತರ ಇಲಾಖೆ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಮಲೇರಿಯಾ ನಿವಾರಣಾ ಕಾರ್ಯಪಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ಜಿಲ್ಲೆಯ ಎಲ್ಲ ಇಲಾಖೆ ಸಿಬ್ಬಂದಿ ಜಿಲ್ಲಾ ಆರೋಗ್ಯ ಇಲಾಖೆಯೊಂದಿಗೆ ಎಲ್ಲ ರೀತಿಯ ಸಹಕಾರ ಮತ್ತು ಸಹಭಾಗಿತ್ವ ನೀಡಬೇಕು. ನಗರಸಭೆ, ಪಟ್ಟಣ ಪಂಚಾಯಿತಿ ಪ್ರದೇಶಗಳ ಪರಿಸರದಲ್ಲಿ ಸೊಳ್ಳೆಗಳನ್ನು ನಿಯಂತ್ರಣಗೊಳಿಸಲು ಈಗಿರುವ ನಾಗರಿಕ ಬೈಲಾ ಮತ್ತು ಕಟ್ಟಡ ಬೈಲಾಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು’ ಎಂದು ಸೂಚನೆ ನೀಡಿದರು.

ADVERTISEMENT

’ಅನುಪಯುಕ್ತ ಮತ್ತು ಘನತ್ಯಾಜ್ಯ ವಸ್ತುಗಳ ಸೂಕ್ತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಸೂಕ್ತ ಒಳಚರಂಡಿ ವ್ಯವಸ್ಥೆ, ನಗರದ ಸ್ವಚ್ಛತೆ, ನೀರು ನಿಲ್ಲದಂತೆ ವ್ಯವಸ್ಥೆ, ಪಟ್ಟಣ ಪ್ರದೇಶಗಳಲ್ಲಿ ನಿಂತ ನೀರಿನ ಸೊಳ್ಳೆ ಉತ್ಪತ್ತಿ ತಾಣಗಳಿಗೆ ವಾರಕ್ಕೊಮ್ಮೆ ಲಾರ್ವಾ ನಾಶಕಗಳನ್ನು ಬಳಸಿ ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಸೊಳ್ಳೆಗಳ ನಿಯಂತ್ರಣಕ್ಕೆ ಎಲ್ಲ ಅಂಶಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಿ ನಿಗದಿತ ಗುರಿಯನ್ನು ನಿಗದಿತ ವೇಳೆಯೊಳಗೆ ಸಾಧಿಸಿ ಕೊಪ್ಪಳ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಅಗತ್ಯ ಕ್ರಮ ಕೈಗೊಳ್ಳಿ’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವಿರುಪಾಕ್ಷರೆಡ್ಡಿ ಎಸ್. ಮಾದಿನೂರ ಮಾತನಾಡಿ, 2025 ರೊಳಗಾಗಿ ಕರ್ನಾಟಕ ರಾಜ್ಯವನ್ನು ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಮಾಡಲು ಗುರಿ ನಿಗದಿಪಡಿಸಿ ರಾಷ್ಟ್ರೀಯ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣ ಗೊಳಿಸಲಾಗಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲೂ ಕೂಡ ಮಲೇರಿಯಾ ನಿವಾರಣಾ ಮಾರ್ಗದರ್ಶಿಯನ್ನು ಅನಾವರಣಗೊಳಿಸಿ ಅದರನ್ವಯ ಜಿಲ್ಲೆಯನ್ನು 2025 ವೇಳೆಗೆ ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಗುರಿಯನ್ನು ನಿಗಧಿಪಡಿಸಲಾಗಿದೆ ಎಂದರು.

ಜಿಲ್ಲಾ ಕೀಟಜನ್ಯ ರೋಗಗಳ ಸಲಹೆಗಾರ ರಮೇಶ್ ಕೆ.ಮಾತನಾಡಿ, ‘ಕೊಪ್ಪಳ ಜಿಲ್ಲೆಯನ್ನು ಮಲೇರಿಯಾ ಮುಕ್ತಗೊಳಿಸುವ ನಿಗದಿತ ಗುರಿಯನ್ನು ತಲುಪಲು ಜಿಲ್ಲೆಯ ಎಲ್ಲ ಇಲಾಖೆಗಳ ಸಹಕಾರ, ಸಹಭಾಗಿತ್ವದ ಮಹತ್ವದ್ದಾಗಿದೆ’ ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ಎಚ್., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ದಾನರಡ್ಡಿ, ಜಿಲ್ಲಾ ಆರ್‌ಸಿಎಚ್ಒ ಡಾ.ಅಲಕನಂದ ಮಳಗಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಂ.ಎಂ.ಕಟ್ಟಿಮನಿ, ಡಾ.ಎಸ್.ಕೆ ದೇಸಾಯಿ, ಡಾ.ಜಂಬಯ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ರಾಜ್ಯದಲ್ಲಿ ಜಿಲ್ಲೆಗೆ 8ನೇ ಸ್ಥಾನ

ಕೊಪ್ಪಳ: ಜಿಲ್ಲೆಯಲ್ಲಿ 2005ರಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸುಮಾರು 6,634 ಮಲೇರಿಯಾ ಪ್ರಕರಣ ವರದಿಯಾಗಿವೆ. 2017ರಲ್ಲಿ ಕೇವಲ 159 ಮಲೇರಿಯಾ ಪ್ರಕರಣಗಳು ವರದಿಯಾಗಿವೆ.

2005 ರಿಂದ 2017 ರವರೆಗೆ ಮಲೇರಿಯಾ ಪ್ರಕರಣಗಳ ಸಂಖ್ಯೆ ಗಣನೀಯ ವಾಗಿ ಕಡಿಮೆಯಾಗಿದ್ದು, ಅದರಲ್ಲಿ ಜಿಲ್ಲಾಡಳಿತದ ಸಹಕಾರ ಹಾಗೂ ಆರೋಗ್ಯ ಇಲಾಖೆಯ ಪರಿಶ್ರಮವೇ ಮುಖ್ಯ ಕಾರಣವಾಗಿದೆ. ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಸಕ್ತ ಏಪ್ರಿಲ್ ತಿಂಗಳ ವರದಿಯ ಅನುಸಾರ ದಕ್ಷಿಣ ಕನ್ನಡ ಜಿಲ್ಲೆಯು ಅತಿ ಹೆಚ್ಚಿನ ಮಲೇರಿಯಾ 863 ಪ್ರಕರಣಗಳಿಂದ ಮೊದಲನೇ ಸ್ಥಾನದಲ್ಲಿದೆ. ಗದಗ– 41 ಎರಡನೇ ಸ್ಥಾನ, ಬಾಗಲಕೋಟೆ-35 ಮೂರನೇ ಸ್ಥಾನ ಪಡೆದರೆ, ಕೊನೆಯಲ್ಲಿ ಕೇವಲ 11 ಪ್ರಕರಣಗಳು ವರದಿಯಾಗಿ ಕೊಪ್ಪಳ ಜಿಲ್ಲೆಯು 8ನೇ ಸ್ಥಾನ ಪಡೆದಿದೆ ಎಂದು ಇಲಾಖೆ ಅಂಕಿ ಅಂಶ ಸಭೆಯಲ್ಲಿ ಮಂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.