ADVERTISEMENT

ಡಿಎನ್ಎ ಪರೀಕ್ಷೆಗೆ ಯುವತಿ ನ್ಯಾಯಾಲಯದ ಮೊರೆ

ಕೈಕೊಟ್ಟ ಪ್ರಿಯಕರ, ಪತಿ; ಮಗುವಿನ ಪಿತೃತ್ವ ಪತ್ತೆಗೆ ಶ್ರಮ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 6:41 IST
Last Updated 21 ಜನವರಿ 2017, 6:41 IST

ಗಂಗಾವತಿ: ಕೈಕೊಟ್ಟ ಪ್ರಿಯಕರ, ಮಗು ನನ್ನದಲ್ಲ ಎನ್ನುತ್ತಿರುವ ಪತಿಯ ಮಧ್ಯೆ ಹೈರಾಣಾಗಿರುವ 19 ವರ್ಷದ  ಯುವತಿಯು, ಈಗ  ಮಗುವಿನ ತಂದೆ ಯಾರೆಂದು ದೃಢಪಡಿಸಲು ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದಾಳೆ.

ತಾಲ್ಲೂಕಿನ ಬಂಡಿಬಸಪ್ಪ ಕ್ಯಾಂಪಿನ ಯುವತಿ ತನ್ನ ಮಗುವಿನ ಅಪ್ಪ ಯಾರೆಂದು ಸಾಬೀತು ಪಡಿಸಲು ಡಿಎನ್ಎ ಪರೀಕ್ಷೆಗೆ  ಅವಕಾಶ ನೀಡುವಂತೆ ಇಲ್ಲಿನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಬಾಕಿ ಇದೆ.

ಒಂದೂವರೆ ವರ್ಷದಿಂದ ಪೊಲೀಸ್ ಠಾಣೆಗೆ ಅಲೆದು ಸುಸ್ತಾಗಿರುವ ಈಕೆ, ಕೊನೆಗೆ ನ್ಯಾಯಾಲಯದ ಮೆಟ್ಟಿಲೇರಿದ್ದಾಳೆ. ಈ ಮಧ್ಯೆ ಪ್ರಿಯಕರ ಯಮನೂರ ಹಾಗೂ ಪತಿ ಗಣೇಶ ಬೇರೆ ಯುವತಿಯರೊಂದಿಗೆ ಮದುವೆಯ ಸಿದ್ಧತೆ ನಡೆಸಿದ್ದಾರೆ ಎಂದು ಯುವತಿ ದೂರಿದ್ದಾಳೆ.

‘ನ್ಯಾಯಾಲಯದಲ್ಲಿ ಇನ್ನೂ ಪ್ರಕರಣದ ವಿಚಾರಣೆ, ತೀರ್ಪು ಬಾಕಿರುವ ಕಾರಣಕ್ಕೆ ನನ್ನನ್ನು ಮದುವೆಯಾಗುವುದಾಗಿ ವಂಚಿಸಿರುವ ಪ್ರಿಯಕರ ಯಮನೂರ ಹಾಗೂ ಬಿಟ್ಟುಹೋಗಿರುವ ಪತಿ ಗಣೇಶ ಇವರಿಗೆ ಮದುವೆ ಆಗಲು ಅವಕಾಶ ನೀಡಬಾರದು ಎಂದು ಯುವತಿ ಈಗ ಪೊಲೀಸರಿಗೆ ಒತ್ತಾಯಿಸಿದ್ದಾಳೆ.
ಪ್ರಕರಣದ ವಿವರ:

ತಮಿಳುನಾಡಿನಿಂದ ವಲಸೆ ಬಂದ ಕಾರ್ಮಿಕಳಾದ ಬಡ್ಡಿಬಸಪ್ಪ ಕ್ಯಾಂಪಿನ ಯುವತಿಯನ್ನು ಎರಡು ವರ್ಷಗಳ ಹಿಂದೆ ಯಮನೂರು ಎಂಬ ಯುವಕ ಪ್ರೀತಿಸಿದ್ದು, ಆಕೆ ಬಸುರಿಯಾಗಿದ್ದಳು ಎನ್ನಲಾಗುತ್ತಿದೆ.

ವಿಷಯ ಗೊತ್ತಾದ ಬಳಿಕ ಪಾಲಕರು, ವಿಷಯವನ್ನು ಮುಚ್ಚಿಟ್ಟು ಆಗ ಬಾಲಕಿಯಾಗಿದ್ದ ಈಕೆಯನ್ನು ಸೋದರ ಮಾವ ಗಣೇಶನೊಂದಿಗೆ  ಮದುವೆ ಮಾಡಿದ್ದರು ಎಂಬುದು ಪತಿ ಕಡೆಯವರ ಆರೋಪ.

ಪತಿ ಗಣೇಶ 2015ರಲ್ಲಿ, ತನಗೆ ವಂಚಿಸಿ ಮದುವೆ ಮಾಡಿದ್ದಾರೆ ಎಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಯುವತಿಯ ಪಾಲರ ವಿರುದ್ಧ ದೂರು ದಾಖಲಿಸಿದ್ದರು.

ಯುವತಿ ತನ್ನನ್ನು ಪ್ರೀತಿಸಿದ ಯಮನೂರ ಎಂಬ ಯುವಕ ವಂಚಿಸಿದ್ದಾನೆ ಎಂದು  ಗ್ರಾಮೀಣ ಠಾಣೆಗೆ ದೂರು ನೀಡಿದ್ದಳು. ಫೋಕ್ಸೊ ಪ್ರಕರಣದಡಿ ಪೊಲೀಸರು ಯಮನೂರ ಎಂಬಾತನನ್ನು ಬಂಧಿಸಿದ್ದರು. ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಈ ಮಧ್ಯೆ, ಯುವತಿ ಹೆಣ್ಣು ಮಗುವಿಗೆ ಜನ್ಮನೀಡಿದ್ದು, ಪತಿ ‘ಗಣೇಶ ಮಗು ನನ್ನದಲ್ಲ’ ಎಂದು ಹೇಳಿ ಯುವತಿಯನ್ನು ತೊರೆದಿದ್ದ. ಮಗು ತನ್ನದೂ ಅಲ್ಲ ಎಂದು ಪ್ರಿಯಕರ ಯಮನೂರ  ಸಂಬಂಧ ನಿರಾಕರಿಸಿದ್ದ ಎಂದು ಯುವತಿ ದೂರಿದ್ದಾಳೆ.
-ಎಂ.ಜೆ. ಶ್ರೀನಿವಾಸ

*
ಕೋರ್ಟ್ ತೀರ್ಪು ಬರುವವರೆಗೆ ಇಬ್ಬರಿಗೂ ಬೇರೆ ಮದುವೆಗೆ ಪೊಲೀಸರುಅವಕಾಶ ನೀಡಬಾರದು . ಡಿಎನ್ಎ ಸಾಬೀತಾದ ಬಳಿಕ ಆ ವ್ಯಕ್ತಿಯೇ ನನ್ನೊಂದಿಗೆ ಜೀವನ ನಡೆಸಬೇಕು.
-ಸಂತ್ರಸ್ತ ಯುವತಿ,  ಬಂಡಿಬಸಪ್ಪ ಕ್ಯಾಂಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT