ADVERTISEMENT

ತುಂಗಭದ್ರಾ ಎಡದಂಡೆ ನಾಲೆಗೆ ಏ. 10ರವರೆಗೆ ನೀರು: ಸಚಿವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2015, 8:51 IST
Last Updated 30 ಮಾರ್ಚ್ 2015, 8:51 IST
ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಭಾನುವಾರ ರೈತರೊಂದಿಗೆ ಸಭೆ ನಡೆಸಿದರು
ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಗಿ ಭಾನುವಾರ ರೈತರೊಂದಿಗೆ ಸಭೆ ನಡೆಸಿದರು   

ಕಾರಟಗಿ: ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ಏ.10ರವರೆಗೆ ನೀರು ಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಭರವಸೆ ನೀಡಿದರು.

ಸಮೀಪದ 28 ಹಳ್ಳಿಗಳ ನೂರಾರು ರೈತರು ಬಂದು ನೀರು ಬಿಡುವ ವಿಷಯವಾಗಿ ಚರ್ಚೆ ನಡೆಸಿದ ಬಳಿಕ ಸಚಿವರು ರೈತರಿಗೆ ಭರವಸೆ ನೀಡಿದರು. ಮಾರ್ಚ್‌ 31ರವರೆಗೆ ಇದ್ದ ನೀರು ಹರಿಸುವ ಅವಧಿಯನ್ನು ಏ. 10ರವರೆಗೆ ವಿಸ್ತರಿಸಲಾಗಿದೆ. ಬಳಿಕ ಜಲಾಶಯದಲ್ಲಿ ನೀರಿನ ಸಂಗ್ರಹ ನೋಡಿಕೊಂಡು ನೀರು ಇರುವವರೆಗೆ ಹರಿಸಲಾಗುವುದು. ರೈತರ ಬಗ್ಗೆ ಸರ್ಕಾರಕ್ಕೂ ಕಾಳಜಿ, ಕಳಕಳಿ ಇದ್ದು, ರೈತರ ಬೆಳೆಯ ರಕ್ಷಣೆಗೆ ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ರೈತ ಮುಖಂಡ ಸಂಗಮೇಶಗೌಡ ಮಾತನಾಡಿ, ಬೇಸಿಗೆ ಬೆಳೆ ಸಂದರ್ಭದಲ್ಲಿ ಹವಾಮಾನ ವೈಪರಿತ್ಯ, ನಾಟಿಗೆ ನೀರು, ಕೂಲಿಗಳು ಸಕಾಲಕ್ಕೆ ಸಿಗದೆ ವಿಳಂಬವಾಗಿದೆ. ರೈತರ ಭತ್ತದ ಬೆಳೆಯು ಈಗ ಹಾಲು ತುಂಬುವ, ತೆನೆ ಕಟ್ಟುವ ಹಂತದಲ್ಲಿದೆ. ಜಲಾಶಯದಲ್ಲಿ ಕಳೆದ ಸಾರಿಗಿಂತ ಅಧಿಕ ನೀರಿದ್ದು, ಏಪ್ರಿಲ್‌ ಅಂತ್ಯದವರೆಗೆ ನೀರು ಬಿಡಬೇಕು ಎಂದು ಸಚಿವರನ್ನು ಕೋರಿದರು.

ಕರಿಬಸಪ್ಪ ಶೀಲವಂತರ, ಬಸವರಾಜ್ ಕುಲ್ಕರ್ಣಿ, ಸಂಗಪ್ಪ ಕೋಲ್ಕಾರ, ನಾಗನಗೌಡ ಯರಡೋಣ, ಚಂದ್ರಗೌಡ ಯರಡೋಣ, ಇಮಾಮ, ಬಸಪ್ಪ ಕಂಪ್ಲಿ, ಶೇಷಪ್ಪ, ಗಣಪತಿ, ಸುರೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.