ADVERTISEMENT

‘ದಡಾರ– ರುಬೆಲ್ಲಾ ಲಸಿಕೆ ಸುರಕ್ಷಿತ’

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:41 IST
Last Updated 8 ಫೆಬ್ರುವರಿ 2017, 7:41 IST

ಕೊಪ್ಪಳ: ದಡಾರ ಮತ್ತು ರುಬೆಲ್ಲಾ ಲಸಿಕೆ ಸುರಕ್ಷಿತವಾಗಿದ್ದು, ಮಕ್ಕಳ ಪೋಷಕರು ಯಾವುದೇ ಬಗೆಯ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಹೇಳಿದರು.

ನಗರದ ಎಸ್‌.ಎಫ್‌.ಎಸ್‌ ಶಾಲಾ ಆವರಣದಲ್ಲಿ ಮಂಗಳವಾರ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. 
ಜಿಲ್ಲೆಯ ಎಲ್ಲ ಮಕ್ಕಳಿಗೆ ತಪ್ಪದೆ ದಡಾರ- ಮತ್ತು ರುಬೆಲ್ಲಾ ಲಸಿಕೆ ತಲುಪಿಸುವ ಕಾರ್ಯವನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಲಸಿಕೆ ಸುರಕ್ಷಿತವಾಗಿದ್ದು, ಮಕ್ಕಳಿಗೆ ಮಾರಕ ರೋಗ ಬಾರದಂತೆ ತಡೆಗಟ್ಟುತ್ತದೆ. ಜಿಲ್ಲೆಯ ಯಾವುದೇ ಮಗು ಲಸಿಕೆಯಿಂದ ವಂಚಿತವಾಗಬಾರದು.

ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಪೂರ್ವ ತಯಾರಿಯೊಂದಿಗೆ, ಸಮರ್ಪಕವಾಗಿ ಮಕ್ಕಳಿಗೆ ಲಸಿಕೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು. ಮಕ್ಕಳಿಗೆ ಲಸಿಕೆ ಹಾಕಿಸುವ ನಿಟ್ಟಿನಲ್ಲಿ ತಂದೆ- ತಾಯಿಯರ ಪಾತ್ರ ಮಹತ್ವದ್ದಾಗಿದ್ದು, ಸ್ವಯಂ ಪ್ರೇರಣೆಯಿಂದ ಅವರು ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದರು. 

ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಉಪವಿಭಾಗಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಆರ್‌.ಸಿ.ಎಚ್‌  ಅಧಿಕಾರಿ ಡಾ.ಅಲಕಾನಂದ, ಡಾ.ಕೆ.ಜಿ.ಕುಲಕರ್ಣಿ ಇದ್ದರು.

ಕನಕಗಿರಿ ವರದಿ: ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಫೆ.7ರಿಂದ ಮಾ. 1ವರೆಗೆ ನಡೆಯಲಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ ಹೇಳಿದರು.

ಇಲ್ಲಿನ ಎಕ್ಸೆಲ್ ಪಬ್ಲಿಕ್ ಶಾಲೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಿಂದ ಮಂಗಳವಾರ ನಡೆದ ದಡಾರ ಮತ್ತು ರುಬೆಲ್ಲಾ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಸುಮತಿ ಅಭಿಜಿತಗೌಡ ಮಾತನಾಡಿ, ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಈ ಚುಚ್ಚುಮದ್ದು ಅವಶ್ಯವಾಗಿದೆ. ಪಾಲಕರು ಆತಂಕ ಪಡದೆ ಶಾಲೆಗಳಿಗೆ ತೆರಳಿ ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.

ವೈದ್ಯೆ ಡಾ.ಸೌಮ್ಯ, ಮುಖ್ಯ ಶಿಕ್ಷಕಿ ಅರುಣಕುಮಾರಿ ವಸ್ತ್ರದ, ಹಿರಿಯ ಆರೋಗ್ಯ ಸಹಾಯಕ ಗುರುರಾಜ ಹಿರೇಮಠ ಮಾತನಾಡಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಕೆ.ಸುಭಾಸ, ಹುಸೇನಸಾಬ ಸೂಳೇಕಲ್, ಆರೋಗ್ಯ ಸಹಾಯಕರಾದ ನೂರಜಹಾನ್, ಹರ್ಷವರ್ದನ್, ಸಿದ್ರಾಮಪ್ಪ ಇದ್ದರು.

ಹನುಮಸಾಗರ ವರದಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೆಂದ್ರದ ವ್ಯಾಪ್ತಿಯಲ್ಲಿ ಒಟ್ಟು 9537 ಮಕ್ಕಳಿಗೆ ದಡಾರ ಮತ್ತು ರುಬೆಲ್ಲಾ ಲಸಿಕೆ ಹಾಕುವ ಗುರಿ ಹಾಕಿಕೊಳ್ಳಲಾಗಿದ್ದು, ಮಂಗಳವಾರ 1,555 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದು ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ.ರವಿ ಕಟ್ಟಿಮನಿ ತಿಳಿಸಿದರು.

ಮಂಗಳವಾರ ಇಲ್ಲಿನ ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆರೋಗ್ಯ ಇಲಾಖೆಯಿಂದ ದಡಾರ ಮತ್ತು ರುಬೆಲ್ಲಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಲಸಿಕೆ ಹಾಕಲು ಎಂಟು ತಂಡಗಳನ್ನು ರಚಿಸಲಾಗಿದೆ. ಅಗತ್ಯ ಔಷಧಿ ಹಾಗೂ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಹಿರಿಯ ಆರೋಗ್ಯ ಸಹಾಯಕಿ ಹುಲಿಗೆಮ್ಮ ಹಾಗೂ ದಾದೇಬಿ ಮಾಹಿತಿ ನೀಡಿ, 30 ಪ್ರೌಢ ಹಾಗೂ ಪ್ರಾಥಮಿಕ ಶಾಲೆಗಳು, 34 ಅಂಗನವಾಡಿ ಕೇಂದ್ರಗಳಲ್ಲಿ ಸದ್ಯ ಲಸಿಕಾ ಕಾರ್ಯ ಆರಂಭವಾಗಿದೆ. ಫೆ. 10 ಮದ್ನಾಳ, ಫೆ.11 ಮನ್ನೇರಾಳ, ಫೆ.13 ಮಾವಿನಇಟಗಿ, ಗುಡದೂರಕಲ್ಲ  ಫೆ.14 ಬೀಳಗಿ, ಚಂದ್ರಗಿರಿ, ಕುಂಬಳಾವತಿ, ಫೆ.15 ದೇವಲಾಪುರ, ಮೂಗನೂರು ಹನುಮಗೇರಿ  ಹಾಗೂ  ಮುದುಟಗಿ  ಗ್ರಾಮಗಳಲ್ಲಿ ಲಸಿಕೆ ಹಾಕಲಾಗುವುದು ಎಂದರು.

ಆರೋಗ್ಯ ಸಹಾಯಕಿಯರಾದ ಶಾಂತಾ, ಲಲಿತಾ, ವಿನೋದಮ್ಮ, ರಾಧಾ, ಶರಣಮ್ಮ. ಆರೋಗ್ಯ ಸಹಾಯಕರಾದ ಸೋಮಶಂಕರ, ಸಿದ್ದಯ್ಯ ಮೇಟಿ, ಆಶಾ ಕಾರ್ಯಕರ್ತೆಯರಾದ ಶಿಲ್ಪಾ, ಮಲ್ಲಮ್ಮ, ಶರಣಮ್ಮ, ವಿನಾಯಕ ಪಟ್ಟಣಶೆಟ್ಟಿ, ನಿಜಾಮುದ್ದೀನ ಗಂಜಿಕೋಟಿ, ಔಷಧ ವಿತರಕಿ ವೀಣಾ ಗೌಡಪ್ಪನವರ, ಅಖಂಡಪ್ಪ ಬಡಿಗೇರ, ಚನ್ನಬಸಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT